ADVERTISEMENT

ಗೌರಿ ಲಂಕೇಶ್‌ ಹತ್ಯೆ ಪ್ರಕರಣ: ಸಂಚಿಗೆ ಬಳಸಿದ್ದ ಬೈಕ್‌ನ ನೋಂದಣಿ ಫಲಕ ಸುಟ್ಟ!

ಆರೋಪಿಗಳು ಬಳಸಿದ್ದ ದ್ವಿಚಕ್ರ ವಾಹನ, ಹೆಲ್ಮೆಟ್‌, ಬಟ್ಟೆಗಳನ್ನು ಪತ್ತೆ ಹಚ್ಚಿದ ಎಸ್‌ಐಟಿ

ಸಂತೋಷ ಜಿಗಳಿಕೊಪ್ಪ
Published 6 ಆಗಸ್ಟ್ 2018, 20:16 IST
Last Updated 6 ಆಗಸ್ಟ್ 2018, 20:16 IST
ಎಸ್‌ಐಟಿ ಅಧಿಕಾರಿಗಳು, ಆರೋಪಿಗಳನ್ನು ಸೋಮವಾರ ನ್ಯಾಯಾಲಯಕ್ಕೆ ಕರೆತಂದರು
ಎಸ್‌ಐಟಿ ಅಧಿಕಾರಿಗಳು, ಆರೋಪಿಗಳನ್ನು ಸೋಮವಾರ ನ್ಯಾಯಾಲಯಕ್ಕೆ ಕರೆತಂದರು   

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಗೂ ಮುನ್ನ, ಅವರ ಮನೆ ಸುತ್ತಲೂ ಓಡಾಡಲು ಪ್ರಮುಖ ಆರೋಪಿಗಳು ಬಳಸಿದ್ದರು ಎನ್ನಲಾದ ಹೀರೊ ಹೊಂಡಾ ಬೈಕ್‌ನ ನೋಂದಣಿ ಫಲಕವನ್ನು ಆರೋಪಿ ಎಚ್‌.ಎಲ್‌. ಸುರೇಶ್‌ನೇ ಸುಟ್ಟು ಹಾಕಿರುವ ಸಂಗತಿ ಎಸ್‌ಐಟಿ ತನಿಖೆಯಿಂದ ಗೊತ್ತಾಗಿದೆ.

‘ಹತ್ಯೆ ಮಾಡಲೆಂದು ನಗರಕ್ಕೆ ಬಂದಿದ್ದ ಮಹಾರಾಷ್ಟ್ರದ ಅಮೋಲ್ ಕಾಳೆ, ವಿಜಯಪುರದ ಪರಶುರಾಮ ವಾಘ್ಮೋರೆ ಸೇರಿದಂತೆ ಉಳಿದೆಲ್ಲ ಆರೋಪಿಗಳಿಗೆ ಸುರೇಶ್‌ನೇ ಗೌರಿಯವರ ಮನೆ ತೋರಿಸಿದ್ದ. ಜತೆಗೆ, ಆರೋಪಿಗಳ ಓಡಾಟಕ್ಕಾಗಿ ತನ್ನ ಹೀರೊ ಹೊಂಡಾ ಬೈಕ್‌ ಕೊಟ್ಟಿದ್ದ. ಅದನ್ನು ಈಗಾಗಲೇ ಜಪ್ತಿ ಮಾಡಲಾಗಿದೆ’ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹತ್ಯೆ ಮಾಡಲು ಯಾವ ರಸ್ತೆಯಲ್ಲಿ ಹೋಗಬೇಕು ಹಾಗೂ ಯಾವ ರಸ್ತೆ ಮೂಲಕ ತಪ್ಪಿಸಿಕೊಳ್ಳಬೇಕು ಎಂಬುದನ್ನು ಬೈಕ್‌ನಲ್ಲೇ ಸುತ್ತಾಡಿ ಆರೋಪಿಗಳು ತಿಳಿದುಕೊಂಡಿದ್ದರು. ಆದರೆ, ಸೆಪ್ಟೆಂಬರ್‌ 5ರಂದು ಗೌರಿಯವರನ್ನು ಹತ್ಯೆ ಮಾಡಲು ಬೇರೊಂದು ಬೈಕ್‌ ಬಳಸಿದ್ದರು. ಅದು ಈವರೆಗೂ ಸಿಕ್ಕಿಲ್ಲ’ ಎಂದು ಹೇಳಿದರು.

ADVERTISEMENT

‘ಹಾಸನ ಆರ್‌ಟಿಒ ಕಚೇರಿಯಲ್ಲಿ ಬೈಕ್‌ ನೋಂದಣಿ ಮಾಡಿಸಿದ್ದ ಸುರೇಶ್‌, ಅದನ್ನು ಆರೋಪಿಗಳಿಗೆ ಕೊಡುವಾಗ ನೋಂದಣಿ ಸಂಖ್ಯೆಯ ಫಲಕ ಬದಲಾಯಿಸಿದ್ದ. ಗೌರಿಯವರ ಹತ್ಯೆಯಾದ ಮರುದಿನವೇ ನೋಂದಣಿ ಫಲಕ ತೆಗೆದಿದ್ದ ಆತ, ನಿರ್ಜನ ಪ್ರದೇಶದಲ್ಲಿ ಸುಟ್ಟು ಹಾಕಿದ್ದ. ಆ ಫಲಕದ ಚೂರುಗಳು ಪತ್ತೆಯಾಗಿವೆ’ ಎಂದು ಅಧಿಕಾರಿ ವಿವರಿಸಿದರು.

ಬೆಂಗಳೂರಿನಲ್ಲೇ ಇತ್ತು ಬೈಕ್: ಆರೋಪಿಗಳು ಸುರೇಶ್‌ನ ಮನೆಯಲ್ಲಿ ವಾಸವಿದ್ದರು ಎಂಬ ಸುಳಿವು ಆಧರಿಸಿ ಎಸ್‌ಐಟಿ ಅಧಿಕಾರಿಗಳು, ಸೀಗೇಹಳ್ಳಿ ಗೇಟ್‌ನಲ್ಲಿದ್ದ ಆತನ ಮನೆಗೆ ಹೋಗಿದ್ದರು. ಮನೆ ಮುಂದೆಯೇ ಬೈಕ್‌ ಇತ್ತು. ಅದನ್ನೇ ಆರೋಪಿಗಳು ಬಳಸಿದ್ದರು ಎಂಬ ಸಂಗತಿ ಅಧಿಕಾರಿಗಳ ಗಮನಕ್ಕೂ ಬಂದಿರಲಿಲ್ಲ. ಹುಬ್ಬಳ್ಳಿಯ ಗಣೇಶ್ ಮಿಸ್ಕಿನ್ ಹಾಗೂ ಅಮಿತ್‌ ಬದ್ದಿಯನ್ನು ಬಂಧಿಸಿದ ನಂತರವೇ ಬೈಕ್ ರಹಸ್ಯ ಬಯಲಾಯಿತು.

‘ನನ್ನ ಸ್ವಂತ ಮನೆ ಇದು. ಯಾರೋ ಮೂವರು ಯುವಕರು ಬಾಡಿಗೆಗೆ ಬಂದಿದ್ದರು. ಅವರ ಹೆಸರು ಹಾಗೂ ವಿಳಾಸ ಗೊತ್ತಿಲ್ಲ’ ಎಂದು ಸುರೇಶ್‌ ಹೇಳಿಕೆ ನೀಡಿದ್ದ. ಅದನ್ನು ನಂಬಿ, ಆತನನ್ನು ನ್ಯಾಯಾಲಯಕ್ಕೆ ಕರೆದೊಯ್ದು ಹೇಳಿಕೆ ದಾಖಲಿಸಿದ್ದೆವು. ಪ್ರಮುಖ ಆರೋಪಿಗಳು ಸೆರೆಯಾದ ನಂತರವೇ ಆತನೂ ಆರೋಪಿ ಎಂಬುದು ತಿಳಿಯಿತು’ ಎಂದು ಅಧಿಕಾರಿ ವಿವರಿಸಿದರು.

ಸಾಕ್ಷ್ಯಗಳ ನಾಶಕ್ಕೆ ಸ್ಕೂಟರ್‌ ಬಳಕೆ: ಹತ್ಯೆ ಬಳಿಕ ಸುರೇಶ್ ಬಳಿ ತೆರಳಿದ್ದ ಆರೋಪಿಗಳು, ತಮ್ಮ ಬಟ್ಟೆ ಹಾಗೂ ಹೆಲ್ಮೆಟ್‌ ಸೇರಿದಂತೆ ಇತರೆಲ್ಲ ವ‌ಸ್ತುಗಳನ್ನು ಕೊಟ್ಟು ತಲೆಮರೆಸಿಕೊಂಡಿದ್ದರು ಎಂದು ಅಧಿಕಾರಿ ಹೇಳಿದರು.

‘ವಸ್ತುಗಳನ್ನು ಚೀಲದಲ್ಲಿ ತುಂಬಿಕೊಂಡಿದ್ದ ಸುರೇಶ್‌, ತನ್ನ ಟಿವಿಎಸ್‌ ಸ್ಕೂಟರ್‌ನಲ್ಲಿ ನಿರ್ಜನ ಪ್ರದೇಶವೊಂದಕ್ಕೆ ಸಾಗಿಸಿದ್ದ. ಹೆಲ್ಮೆಟ್‌ ಹಾಗೂ ಬಟ್ಟೆಗಳನ್ನು ಪೊದೆಯಲ್ಲಿ ಎಸೆದಿದ್ದ. ನಂತರ, ಫಲಕ ಹಾಗೂ ಉಳಿದೆಲ್ಲ ವಸ್ತುಗಳನ್ನು ಪೆಟ್ರೋಲ್ ಸುರಿದು ಸುಟ್ಟಿದ್ದ’ ಎಂದರು.

ಪಿಸ್ತೂಲ್‌ಗಾಗಿ ಮುಂದುವರಿದ ಹುಡುಕಾಟ: ಆರೋಪಿಗಳು ಬಳಸಿದ್ದ ಪಿಸ್ತೂಲ್‌ ಇದುವರೆಗೂ ಪತ್ತೆಯಾಗಿಲ್ಲ. ಎಸ್‌ಐಟಿ ವಿಶೇಷ ತಂಡವೊಂದು, ಅದಕ್ಕಾಗಿ ಹುಡುಕಾಟ ನಡೆಸುತ್ತಿದೆ.

‘ಪ್ರಕರಣವು ಅಂತಿಮ ಹಂತಕ್ಕೆ ಬಂದಂತಾಗಿದೆ. ದೋಷಾರೋಪ ಪಟ್ಟಿ ಸಿದ್ಧಪಡಿಸುವ ಕೆಲಸವೂ ನಡೆದಿದೆ. ಪಿಸ್ತೂಲ್ ಸಿಗುವುದನ್ನೇ ಕಾಯುತ್ತಿದ್ದೇವೆ’ ಎಂದು ಅಧಿಕಾರಿ ಹೇಳಿದರು.

ಮನೆ ಖಾಲಿ ಮಾಡಿಸಿದ್ದ ಮಾಲೀಕ: ಎಸ್‌ಐಟಿ ಅಧಿಕಾರಿಗಳು ಮನೆಗೆ ಬಂದು ಹೋದ ಸುದ್ದಿ ತಿಳಿಯುತ್ತಿದ್ದಂತೆ ಸುರೇಶ್‌ನನ್ನು ತರಾಟೆಗೆ ತೆಗೆದುಕೊಂಡಿದ್ದ ಮಾಲೀಕ, ‘ಕುಟುಂಬಸ್ಥನೆಂದು ಬಾಡಿಗೆ ಕೊಟ್ಟಿದ್ದೆ. ಯಾರ‍್ಯಾರನ್ನೋ ‌ಕರೆದುಕೊಂಡು ಬಂದು ಪೊಲೀಸರು ಮನೆಗೆ ಬರುವಂತೆ ಮಾಡಿದ್ದೀಯಾ. ಮನೆ ಖಾಲಿ ಮಾಡು’ ಎಂದಿದ್ದರು.

ಅವಾಗಲೇ ಸುರೇಶ್‌, ಬೈಕ್‌ ಸಮೇತ ಮನೆ ಖಾಲಿ ಮಾಡಿ ಕುಣಿಗಲ್‌ಗೆ ಹೋಗಿದ್ದ. ಸುರೇಶ್‌ನನ್ನು ಬಂಧಿಸಿ ಕಸ್ಟಡಿಗೆ ಪಡೆದಿದ್ದ ಅಧಿಕಾರಿಗಳು, ಆತನನ್ನು ಊರಿಗೆ ಕರೆದೊಯ್ದು ಬೈಕ್‌ ಜಪ್ತಿ ಮಾಡಿದರು ಎಂದು ಮೂಲಗಳು ತಿಳಿಸಿವೆ.

ಮೂವರು ಆರೋಪಿಗಳು ನ್ಯಾಯಾಂಗ ಬಂಧನಕ್ಕೆ : ಎಸ್‌ಐಟಿ ಕಸ್ಟಡಿಯಲ್ಲಿದ್ದ ಆರೋಪಿಗಳಾದ ಗಣೇಶ್ ಮಿಸ್ಕಿನ್, ಅಮಿತ್ ಬದ್ದಿ ಹಾಗೂ ರಾಜೇಶ್‌ ಬಂಗೇರನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆರೋಪಿಗಳನ್ನು 3ನೇ ಎಸಿಎಂಎಂ ನ್ಯಾಯಾಲಯಕ್ಕೆ ಸೋಮವಾರ ಹಾಜರುಪಡಿಸಲಾಯಿತು.ಆರೋಪಿಗಳ ಪರ ವಾದಿಸಿದ ವಕೀಲರು, ‘ಆರೋಪಿಗಳ ಕುತ್ತಿಗೆ ಹಾಗೂ ಕೈ– ಕಾಲುಗಳಿಗೆ ಪೊಲೀಸರು ಹೊಡೆದಿದ್ದಾರೆ’ ಎಂದರು.

ನ್ಯಾಯಾಧೀಶರು, ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವಂತೆ ಹೇಳಿ ನ್ಯಾಯಾಂಗ ಬಂಧನಕ್ಕೆ ನೀಡಿದರು.

ವಿಚಾರಣೆಗೆ ಗೈರು: ಪ್ರಕರಣದ ವಿಚಾರಣೆಗೆ ಸೋಮವಾರ ಕಚೇರಿಗೆ ಬರುವಂತೆ ಎಸ್‌ಐಟಿ ಅಧಿಕಾರಿಗಳು, ಆರೋಪಿ ಮಿಸ್ಕಿನ್‌ ಸಹೋದರ ರವಿಗೆ ನೋಟಿಸ್‌ ನೀಡಿದ್ದರು. ಆದರೆ, ಆತ ಗೈರಾದ.

ಅಧಿಕಾರಿ, ‘ನೋಟಿಸ್‌ ಕೊಟ್ಟರೂ ಬಂದಿಲ್ಲ. ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.