ADVERTISEMENT

ಓಂ ನಮಃ‌ ಶಿವಾಯ ಅಂದ್ರೆ ಬೂಟುಗಾಲಲ್ಲಿ ಒದಿತೀನಿ...ಪೊಲೀಸ್ ಅಧಿಕಾರಿ ಬೆದರಿಕೆ

ಬಿ.ಎಸ್.ಷಣ್ಮುಖಪ್ಪ
Published 24 ನವೆಂಬರ್ 2018, 13:13 IST
Last Updated 24 ನವೆಂಬರ್ 2018, 13:13 IST
   

ಬೆಂಗಳೂರು: ಓಂ ನಮಃ‌ ಶಿವಾಯ ಅಂದ್ರೆ ಬೂಟುಗಾಲಲ್ಲಿ ಒದಿತೀನಿ...! -ಪತ್ರಕರ್ತೆ ಗೌರಿ ‌ಲಂಕೇಶ್ ಹತ್ಯೆ ಆರೋಪಿಗಳನ್ನು ಜೈಲಿನಿಂದ ಕೋರ್ಟ್‌ಗೆ ಕರೆತರುವಾಗ ಜೈಲಿನ ಪೊಲೀಸ್‌ ಅಧಿಕಾರಿ ಹಾಕಿರುವ ಬೆದರಿಕೆಯ ಪರಿ‌ ಇದು.

ಶನಿವಾರ ಬೆಳಗ್ಗೆ ಪ್ರಕರಣದ ವಿಚಾರಣೆಗೆ 14 ಜನ ಆರೋಪಿಗಳನ್ನು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಿಂದ ಸಿಟಿ ಸಿವಿಲ್ ಕೋರ್ಟ್‌ಗೆ ಕರೆತಂದು ಹಾಜರುಪಡಿಸಲಾಯಿತು.

ಜೈಲಿನಿಂದ ಪೊಲೀಸ್ ವಾಹನದಲ್ಲಿ ಕರೆತರುವ ವೇಳೆ ಮಾರ್ಗ ಮಧ್ಯೆ ಆರೋಪಿಗಳು ಕಣ್ಮುಚ್ಚಿ ಧ್ಯಾನ ಮಾಡುತ್ತಾ, ‘ಓಂ ನಮಃ ಶಿವಾಯ’ ಎಂದು ಒಟ್ಟಾಗಿ ಪಂಚಾಕ್ಷರಿ ನಾಮ ಜಪಿಸುತ್ತಿದ್ದುದನ್ನು ಪೊಲೀಸ್‌ ಅಧಿಕಾರಿ ಆಕ್ಷೇಪಿಸಿದ್ದಾರೆ.

ADVERTISEMENT

ಆರೋಪಿಗಳನ್ನು ಕರೆತರುವ ಉಸ್ತುವಾರಿ ಹೊತ್ತಿದ್ದ ಪೊಲೀಸ್ ಸಬ್ ಇನ್‌ಸ್ಪೆಕ್ಟರ್, ‘ನೀವು ಈ ರೀತಿ ಮಂತ್ರ-ಗಿಂತ್ರಾ ಹೇಳಕೂಡದು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದರು’ ಎಂದು ಆರೋಪಿಗಳಾದ ಗಣೇಶ್‌ ಮಿಸ್ಕಿನ್‌ ಮತ್ತು ಬಿ.ಆರ್‌.ಸುಜಿತ್‌ ಅಲಿಯಾಸ್‌ ಪ್ರವೀಣ್‌, ಕೋಕಾ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶಿವಶಂಕರ ಬಿ.ಅಮರಣ್ಣವರ ಮುಂದೆ ಸ್ವಯಂ ವಿವರಿಸಿದರು.

‘ನಿಮಗೆ ನಾವೇನು ತೊಂದರೆ ಕೊಟ್ಟಿದ್ದೇವೆ. ನಮ್ಮ ಪಾಡಿಗೆ ನಾವು ಓಂ ನಮಃ ಶಿವಾಯ ಎನ್ನುತ್ತೇವೆ ಎಂದು ಪ್ರತಿ ಉತ್ತರ ನೀಡಿದ್ದಕ್ಕೆ, ಪೊಲೀಸ್ ಅಧಿಕಾರಿ ಮತ್ತಷ್ಟು ಗರಂ ಆಗಿ, ಬೂಟುಗಾಲಲ್ಲಿ ಒದಿತೀನಿ ಎಂದು ನಮ್ಮನ್ನು ಬೆದರಿಸಿದ್ದಾರೆ’ ಎಂದು ದೂರಿದರು.

ಇದನ್ನು ಆಕ್ಷೇಪಿಸಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎಸ್.ಬಾಲನ್‌, ‘ಇವರನ್ನು ಜೈಲಿನಿಂದ ಕೋರ್ಟ್‌ಗೆ ಕರೆತರುವುದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಇವರ ವಕೀಲರು ಇವರನ್ನು ಪ್ರಚೋದಿಸುತ್ತಿದ್ದಾರೆ. ಆದ್ದರಿಂದ ಈ ಆರೋಪಿಗಳನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಬೇಕು’ ಎಂದು ಕೋರಿದರು.

ಇದಕ್ಕೆ ನ್ಯಾಯಾಧೀಶರು, ಪೊಲೀಸ್‌ ಅಧಿಕಾರಿಗೆ ಬುದ್ಧಿಮಾತು ಹೇಳಿ, ‘ಈ ರೀತಿಯೆಲ್ಲಾ ನಡೆದುಕೊಳ್ಳಬೇಡಿ‘ ಎಂದು ವಿಚಾರಣೆ ಪೂರೈಸಿದರು.

ವಿಚಾರಣೆಯನ್ನು ಇದೇ 28ಕ್ಕೆ ಮುಂದೂಡಿದರು.

‘ದೌರ್ಜನ್ಯ ಎಸಗಲಾಗುತ್ತಿದೆ’
‘ಪೊಲೀಸರು ಆರೋಪಿಗಳ ಹಕ್ಕುಗಳನ್ನು ಕಸಿಯುತ್ತಿದಾರೆ’ಎಂದು ಆರೋಪಿಗಳ ಪರ ವಕೀಲ ಹರ್ಷ ಮುತಾಲಿಕ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಮಂತ್ರಪಠಣೆ ಹಾಗೂ ಪೂಜಾ ವಿಧಾನ ಪ್ರತಿಯೊಬ್ಬರ ವೈಯಕ್ತಿಕ ಹಕ್ಕು‌. ಇದನ್ನು ಯಾರೂ ಕಸಿದುಕೊಳ್ಳಲು ಅಥವಾ ಹತ್ತಿಕ್ಕಲು ಸಾಧ್ಯವಿಲ್ಲ. ಆರೋಪಿಗಳ ಮೇಲೆ ಪೊಲೀಸರು ದೌರ್ಜನ್ಯ ಎಸಗಿ ಅವರು ಖಿನ್ನತೆಗೆ ಒಳಗಾಗುವಂತೆ ಮಾಡುತ್ತಿದ್ದಾರೆ’ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.