ADVERTISEMENT

ಶಾಸಕರ ಸಹೋದರನ ವರ್ಗಾವಣೆ ರದ್ದು: ಸರ್ಕಾರಕ್ಕೆ ತರಾಟೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 15:57 IST
Last Updated 17 ಡಿಸೆಂಬರ್ 2025, 15:57 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಅವರ ಸೂಚನೆಯ ಮೇರೆಗೆ, ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಜಿಐಎಂಎಸ್) ಪ್ರಾಧ್ಯಾಪಕ ಡಾ.ಕೇಶವ ಅಬ್ಬಯ್ಯ ಅವರನ್ನು ಹುಬ್ಬಳ್ಳಿಯ, ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಕಿಮ್ಸ್) ದಂತ ಚಿಕಿತ್ಸಾ ವಿಭಾಗಕ್ಕೆ ನಿಯಮಬಾಹಿರವಾಗಿ ವರ್ಗಾವಣೆ ಮಾಡಲಾಗಿದೆ’ ಎಂದು ಹೈಕೋರ್ಟ್, ರಾಜ್ಯ ಸರ್ಕಾರವನ್ನು ಕಟುವಾಗಿ ತರಾಟೆಗೆ ತೆಗೆದುಕೊಂಡಿದೆ.

ವರ್ಗಾವಣೆ ಪ್ರಶ್ನಿಸಿ ಕಿಮ್ಸ್‌ನ ಪ್ರಾಧ್ಯಾಪಕ ಡಾ.ಸುನೀಲ್ ಜಿ. ಪಾಟೀಲ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಸಂಬಂಧ ಸರ್ಕಾರ ಹೊರಡಿಸಿದ್ದ ವರ್ಗಾವಣೆ ಆದೇಶವನ್ನು ರದ್ದುಪಡಿಸಿದೆ.

‘ಡಾ.ಅಬ್ಬಯ್ಯ ಅವರನ್ನು ಕಾಯಂ ಆಗಿ ಕಿಮ್ಸ್‌ನಲ್ಲಿ ನಿಯೋಜನೆಗೊಳಿಸಿರುವುದು ಮತ್ತು ಅರ್ಜಿದಾರರನ್ನು ಅವರ ಅಧೀನದಲ್ಲಿ ಇರುವಂತೆ ನಿಯೋಜಿಸಿರುವುದು ಶಾಸನಬದ್ಧ ಮಾರ್ಗಸೂಚಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಪ್ರಕರಣದಲ್ಲಿನ ರಾಜಕೀಯ ಪ್ರಭಾವ ಅಳಿಸಲಾಗದಷ್ಟು ಕಳಂಕಿತವಾದ ನಡೆ. ಕಿಮ್ಸ್‌ ಆಸ್ಪತ್ರೆಯು ಡಾ.ಕೇಶವ್‌ ಅವರ ಸಹೋದರ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೇ ಬರುತ್ತದೆ ಎಂಬುದು ಗಮನಾರ್ಹ’ ಎಂದು ನ್ಯಾಯಪೀಠ ಕಿಡಿ ಕಾರಿದೆ.

ADVERTISEMENT

‘ಶಾಸನಬದ್ಧವಾಗಿ ಬಡ್ತಿಗೆ ಅರ್ಹರಿದ್ದಾಗ ಮತ್ತು ಇಲಾಖೆಯಲ್ಲಿ ಲಭ್ಯವಿರುವ ಏಕೈಕ ಹುದ್ದೆಗೆ ಹೊರಗಿನವರನ್ನು ಆಮದು ಮಾಡಿಕೊಂಡಿರುವುದರಿಂದ ಅರ್ಜಿದಾರರ ಸೇವಾ ಹಿರಿತನ, ಶಾಸನಬದ್ಧ ಮತ್ತು ಮೂಲಭೂತ ಹಕ್ಕು ಹಾಗೂ ಬಡ್ತಿಯ ಕಾನೂನುಬದ್ಧ ಪರಿಗಣನೆಯನ್ನು ಕಸಿದುಕೊಂಡಂತಾಗಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಕಿಮ್ಸ್‌ 2025ರ ಮಾರ್ಚ್ 5ರಂದು ಹೊರಡಿಸಿದ ವರ್ಗಾವಣೆ ಆದೇಶ ಮತ್ತು 2025ರ ಜನವರಿ 21 ರಂದು ಹೊರಡಿಸಿದ ತಾತ್ಕಾಲಿಕ ಹಿರಿತನದ ಪಟ್ಟಿಯನ್ನು ನ್ಯಾಯಪೀಠ ರದ್ದುಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.