ADVERTISEMENT

ಗ್ರಾಮ ಪಂಚಾಯಿತಿ ಹಂತದಲ್ಲಿ ಜಾಗತಿಕ ಗುಣಮಟ್ಟದ ಶಾಲೆ: ಡಿ.ಕೆ.ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 21 ಜುಲೈ 2023, 13:45 IST
Last Updated 21 ಜುಲೈ 2023, 13:45 IST
ಡಿ.ಕೆ.ಶಿವಕುಮಾರ್‌ ಹಾಗೂ. ಮುಖ್ಯಮಂತ್ರಿ ಸಿದ್ದರಾಮಯ್ಯ
ಡಿ.ಕೆ.ಶಿವಕುಮಾರ್‌ ಹಾಗೂ. ಮುಖ್ಯಮಂತ್ರಿ ಸಿದ್ದರಾಮಯ್ಯ   

ಬೆಂಗಳೂರು: ‘ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಗತಿಕ ಗುಣಮಟ್ಟದ ಶಾಲೆಯನ್ನು ತೆರೆಯಲು ಉದ್ದೇಶಿಸಲಾಗಿದೆ. ಈ ಕುರಿತು ನನ್ನ ಪರಿಕಲ್ಪನೆಯನ್ನು ಶಿಕ್ಷಣ ಸಚಿವರ ಜತೆ ಹಂಚಿಕೊಂಡಿದ್ದೇನೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ವಿಧಾನಸಭೆಯಲ್ಲಿ ಶುಕ್ರವಾರ ಗಮನಸೆಳೆಯುವ ಸೂಚನೆಯ ಕಲಾಪದ ವೇಳೆಯಲ್ಲಿ ಈ ವಿಷಯ ತಿಳಿಸಿದರು.

‘ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಈ ಅಂಶವನ್ನು ಪ್ರಸ್ತಾಪಿಸಿದ್ದೇವೆ. ನವೋದಯ ಶಾಲೆಯ ಮಾದರಿಯಲ್ಲಿ ಸಿಬಿಎಸ್‌ಸಿ ಗುಣಮಟ್ಟದ ಶಾಲೆಯನ್ನು ಆರಂಭಿಸಲಾಗುವುದು. ನಮ್ಮ ರಾಜ್ಯದ ಮಕ್ಕಳು ವಿಶ್ವಮಟ್ಟದಲ್ಲಿ ಸ್ಪರ್ಧಿಸುವಂತಾಗಬೇಕಾದರೆ ಜಾಗತಿಕ ಗುಣಮಟ್ಟದ ಶಾಲೆಗಳೇ ಬೇಕು. ಖಾಸಗಿ ಕಂಪನಿಗಳು ಒಂದೊಂದು ಶಾಲೆಯನ್ನು ದತ್ತು ತೆಗೆದುಕೊಂಡು ನಡೆಸಬೇಕು’ ಎಂದರು.

ADVERTISEMENT

ಅನುದಾನಿತ ಶಾಲೆಗಳಿಗೆ ಶಿಕ್ಷಕರ ನೇಮಕ:

ಅನುದಾನಿತ ಶಾಲೆಗಳಿಗೆ ಶಿಕ್ಷಕರನ್ನು ನೇಮಕ ಮಾಡುವ ಸಂಬಂಧ ಹಣಕಾಸು ಇಲಾಖೆಗೆ 2016 ರಿಂದ 2020 ವರೆಗಿನ ಪ್ರಸ್ತಾವನೆ ಕಳುಹಿಸಲಾಗಿದೆ. ಉಳಿದ ಮೂರು ವರ್ಷಗಳ ಪ್ರಸ್ತಾವನೆಯನ್ನು ಕಳುಹಿಸಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಕಾಂಗ್ರೆಸ್‌ನ ಜಿ.ಎಸ್‌.ಪಾಟೀಲ ಅವರ ಗಮನಸೆಳೆಯುವ ಸೂಚನೆಗೆ ಉತ್ತರಿಸಿ ಅವರು ಈ ವಿಷಯ ತಿಳಿಸಿದರು. ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮಾತನಾಡಿ, ‘ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೂ ನೇಮಕ ಮಾಡಬೇಕು ಅನುದಾನಿತ ಶಾಲೆಗಳು ತುಂಬಾ ಸಂಕಷ್ಟದಲ್ಲಿವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.