ADVERTISEMENT

ಸಂಚಾರ ದಟ್ಟಣೆಯಲ್ಲಿ ಬೆಂಗಳೂರೇ ವಿಶ್ವ‘ಕು’ಖ್ಯಾತ

ಸಂಚಾರ ದಟ್ಟಣೆ: 57 ರಾಷ್ಟ್ರಗಳ 416 ನಗರಗಳಲ್ಲಿ ಮೊದಲ ಸ್ಥಾನ

​ಪ್ರಜಾವಾಣಿ ವಾರ್ತೆ
Published 30 ಜನವರಿ 2020, 20:25 IST
Last Updated 30 ಜನವರಿ 2020, 20:25 IST
   

ನವದೆಹಲಿ: ತೀವ್ರ ಸಂಚಾರ ದಟ್ಟಣೆ ಯಿಂದ ಸಾರ್ವಜನಿಕರಿಗೆ ಸಮಸ್ಯೆ ತಂದೊಡ್ಡುವುದಲ್ಲದೆ, ಅವರ ಸಮಯ ವನ್ನು ಹಾಳು ಮಾಡುವ ವಿಶ್ವದ ಅಗ್ರ 10 ನಗರಗಳ ಪಟ್ಟಿಯಲ್ಲಿ ಬೆಂಗಳೂರು ಪ್ರಥಮ ಸ್ಥಾನದಲ್ಲಿರುವುದಾಗಿ ಸಮೀಕ್ಷೆ ಯೊಂದು ಹೇಳಿದೆ.

ತೀವ್ರ ಸಂಚಾರ ದಟ್ಟಣೆಗೆ ಸಾಕ್ಷಿಯಾಗುವ ದೇಶದ ಇತರ ನಗರಗಳಲ್ಲಿ ಮುಂಬೈ, ಪುಣೆ ಮತ್ತು ನವದೆಹಲಿಗಳಿಗೆ ನಂತರದ ಸ್ಥಾನ ದೊರೆತಿದೆ.

ವಾಹನಗಳಲ್ಲಿ ಅಳವಡಿಸುವ ಉಪಗ್ರಹ ಆಧರಿತ ನೇವಿಗೇಷನ್‌ ಉಪಕರಣ ತಯಾರಿಸುವ ನೆದರ್ಲೆಂಡ್‌ ಮೂಲದ ಟಾಮ್‌ ಟಾಮ್‌ ಸಂಸ್ಥೆ ವಿಶ್ವದ 57 ರಾಷ್ಟ್ರಗಳ, 416 ನಗರಗಳ ಸಂಚಾರ ವ್ಯವಸ್ಥೆಯ ಕುರಿತು ಸಮೀಕ್ಷೆ ನಡೆಸಿ ಬಿಡುಗಡೆ ಮಾಡಿರುವ ಸಂಚಾರ ಸೂಚ್ಯಂಕದಲ್ಲಿ ಈ ಅಂಶ ಬೆಳಕಿಗೆ ಬಂದಿದೆ.

ADVERTISEMENT

2019ರಲ್ಲಿ ಆಯಾ ನಗರಗಳ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಇರುವ ಹಾಗೂ ಇಲ್ಲದ ಅವಧಿಯಲ್ಲಿನ ಪ್ರಯಾಣದ ಸಮಯವನ್ನು ತುಲನೆ ಮಾಡಿ ವರದಿ ಬಿಡುಗಡೆ ಮಾಡಿರುವ ಸಂಸ್ಥೆಯ ಪ್ರಕಾರ, ಬೆಂಗಳೂರಿನ ರಸ್ತೆಗಳಲ್ಲಿನ ಪ್ರಯಾಣಕ್ಕೆ ಜನರು ಶೇ 71ರಷ್ಟು ಹೆಚ್ಚುವರಿ ಸಮಯ ವ್ಯಯಿಸಿರುವುದು ದಾಖಲಾಗಿದೆ.

2017ರಿಂದ ಸತತ ಎರಡು ವರ್ಷ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದ ಮುಂಬೈ ಈ ಬಾರಿ 4ನೇ ಸ್ಥಾನಕ್ಕೆ ಇಳಿಯುವ ಮೂಲಕ ಸುಧಾರಣೆ ಕಂಡಿದ್ದರೆ, ಇದೇ ಅವಧಿಯಲ್ಲಿ 2ನೇ ಸ್ಥಾನದಲ್ಲಿದ್ದ ದೆಹಲಿ ಈ ಬಾರಿ 8ನೇ ಸ್ಥಾನ ಗಳಿಸಿದೆ. ಸಮೀಕ್ಷೆಗೆ ಮೊದಲ ಬಾರಿ ಸೇರ್ಪಡೆಯಾಗಿರುವ ಪುಣೆ 5ನೇ ಸ್ಥಾನ ಪಡೆದಿದೆ. ಬೆಂಗಳೂರು ನಗರದಲ್ಲಿ ಕಳೆದ ವರ್ಷ ಸಮೀಕ್ಷೆ ನಡೆಸಲಾಗಿರಲಿಲ್ಲ.

ಸುಲಲಿತ ಸಂಚಾರ ವ್ಯವಸ್ಥೆ ಕಂಡುಬಂದ ನಗರಗಳ ವಾಹನ ಸವಾರರಿಗಿಂತ ಬೆಂಗಳೂರಿನ ಸವಾರರು ಈ ವರ್ಷ ನಿರ್ದಿಷ್ಟ ಸ್ಥಳವನ್ನು ತಲುಪಲು 243 ಗಂಟೆ ಅಥವಾ 10 ದಿನ, ಮೂರು ಗಂಟೆಯಷ್ಟು ಅವಧಿಯನ್ನು ಹೆಚ್ಚುವರಿ ಯಾಗಿ ರಸ್ತೆಗಳಲ್ಲೇ ಕಳೆದಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಮುಂಬೈನ ವಾಹನ ಸವಾರರ ಹೆಚ್ಚುವರಿ ಅವಧಿಯು ಒಂದು ವರ್ಷದಲ್ಲಿ 209 ಗಂಟೆ (ಶೇ 65)ಯಷ್ಟಾದರೆ, ಪುಣೆಯ ಅವಧಿ 193 ಗಂಟೆ (ಶೇ 59), ದೆಹಲಿಯ ಅವಧಿ 190 ಗಂಟೆ (ಶೇ 56)ಯಷ್ಟಾಗಿದೆ.

-ವಾಯು ಮಾಲಿನ್ಯ ಹೆಚ್ಚಳಕ್ಕೆ ಸಂಚಾರ ದಟ್ಟಣೆ ಕಾರಣ
-ವಾಹನ ಶೇರಿಂಗ್‌ ಬಾಡಿಗೆಯಿಂದ ದಟ್ಟಣೆಗೆ ಕಡಿವಾಣ
-ಸಂಚಾರ ದಟ್ಟಣೆ ತಗ್ಗಿಸುವಲ್ಲಿ ಸರ್ಕಾರ ನೀತಿ ರೂಪಿಸಲಿ

ದಟ್ಟಣೆ ಅತಿ ಹೆಚ್ಚು–ಕಡಿಮೆ

2019ರ ಆಗಸ್ಟ್‌ 20ರಂದು ಬೆಂಗಳೂರಿನ ಸಂಚಾರ ವ್ಯವಸ್ಥೆಯಲ್ಲಿ ತೀವ್ರದಟ್ಟಣೆ ದಾಖಲಾಗಿದ್ದರೆ, ಆ ವರ್ಷದ ಅತಿ ಕಡಿಮೆ ದಟ್ಟಣೆ ಕಂಡುಬಂದದಿನ ಏಪ್ರಿಲ್‌ 6.

ಯಾವಾಗ ಕಡಿಮೆ?: ಬೆಂಗಳೂರಿನಲ್ಲಿ ಪ್ರತಿ ಶುಕ್ರವಾರದ ರಾತ್ರಿ 8ರ ನಂತರದ ಅವಧಿಯಲ್ಲಿ ಸಂಚಾರ ಸುಲಭ. ಈ ಅವಧಿಯಲ್ಲಿನ ಪ್ರಯಾಣದಿಂದ ವರ್ಷಕ್ಕೆ 5 ಗಂಟೆ ಉಳಿತಾಯ.

ಸಮಸ್ಯೆಗೆ ಕಾರಣ

-ಹೆಚ್ಚಿದ ವಾಹನಗಳ ಸಂಖ್ಯೆ

-ಅತಿಯಾದ ಜನಸಂಖ್ಯೆ

-ಗಣ್ಯರಿಗೆ ಕಲ್ಪಿಸುವ ‘ಫ್ರೀ ಟ್ರಾಫಿಕ್‌’

-ರಸ್ತೆಗಳ ದುಃಸ್ಥಿತಿ

-ರಾಜಕೀಯ, ಧಾರ್ಮಿಕ ಮೆರವಣಿಗೆ

-ಪ್ರತಿಭಟನಾ ಮೆರವಣಿಗೆಗಳು

ಹೆಚ್ಚು ದಟ್ಟಣೆಯ ನಗರ– ಪ್ರಮಾಣ

1) ಬೆಂಗಳೂರು (ಭಾರತ) ಶೇ 71

2) ಮನಿಲಾ (ಫಿಲಿಪ್ಪೀನ್ಸ್‌) ಶೇ 71

3) ಬೊಗೊಟಾ (ಕೊಲಂಬಿಯಾ) ಶೇ 68

4) ಮುಂಬೈ (ಭಾರತ) ಶೇ 65

5) ಪುಣೆ (ಭಾರತ) ಶೇ 59

6) ಮಾಸ್ಕೋ (ರಷ್ಯಾ) ಶೇ 59

7) ಲಿಮಾ (ಪೆರು) ಶೇ 57

8) ನವದೆಹಲಿ (ಭಾರತ) ಶೇ 56

9) ಇಸ್ತಾನ್‌ಬುಲ್‌ (ಟರ್ಕಿ) ಶೇ 55

10) ಜಕಾರ್ತಾ (ಇಂಡೋನೇಷ್ಯಾ) ಶೇ 53

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.