ADVERTISEMENT

ಗೋದಾವರಿ–ಕಾವೇರಿ ನದಿ ಜೋಡಣೆ: ಹೆಚ್ಚುವರಿ 5 ಟಿಎಂಸಿಗೆ ರಾಜ್ಯ ಪಟ್ಟು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 0:53 IST
Last Updated 24 ಡಿಸೆಂಬರ್ 2025, 0:53 IST
ವಿಶೇಷ ಸಭೆಯಲ್ಲಿ ಪಾಲ್ಗೊಂಡ ಡಿ.ಕೆ. ಶಿವಕುಮಾರ್ ಹಾಗೂ ಬೇರೆ ರಾಜ್ಯಗಳ ಜಲಸಂಪನ್ಮೂಲ ಸಚಿವರು 
ವಿಶೇಷ ಸಭೆಯಲ್ಲಿ ಪಾಲ್ಗೊಂಡ ಡಿ.ಕೆ. ಶಿವಕುಮಾರ್ ಹಾಗೂ ಬೇರೆ ರಾಜ್ಯಗಳ ಜಲಸಂಪನ್ಮೂಲ ಸಚಿವರು    

ನವದೆಹಲಿ: ಗೋದಾವರಿ–ಕಾವೇರಿ ನದಿಗಳ ಜೋಡಣೆಯಲ್ಲಿ ನೀರಿನ ಪಾಲು ಹಂಚಿಕೆ ಸೂತ್ರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕರ್ನಾಟಕ ಸರ್ಕಾರ, ಹೆಚ್ಚುವರಿ 5 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿದರಷ್ಟೇ ಕರಡು ಒಪ್ಪಂದಕ್ಕೆ ಸಹಿ ಹಾಕಲಾಗುವುದು ಎಂದು ಸ್ಪಷ್ಟಪಡಿಸಿದೆ. 

ನದಿಗಳ ಜೋಡಣೆ ಸಂಬಂಧ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ ಅಧ್ಯಕ್ಷತೆಯಲ್ಲಿ ಮಂಗಳವಾರ ಇಲ್ಲಿ ನಡೆದ ವಿಶೇಷ ಸಭೆಯಲ್ಲಿ ಭಾಗವಹಿಸಿದ ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜ್ಯದ ನಿಲುವನ್ನು ತಿಳಿಸಿದರು. 

ಗೋದಾವರಿ–ಕಾವೇರಿ ನದಿಗಳ ಜೋಡಣೆ ಯೋಜನೆಯಲ್ಲಿ ಗೋದಾವರಿ–ಕೃಷ್ಣಾ (ನಾಗಾರ್ಜುನಸಾಗರ), ಕೃಷ್ಣಾ–ಪೆನ್ನಾರ್ (ಸೋಮಶಿಲಾ) ಹಾಗೂ ಪೆನ್ನಾರ್‌–ಕಾವೇರಿ ನದಿಗಳ ಜೋಡಣೆ ಮಾಡಲಾಗುತ್ತದೆ. ಗೋದಾವರಿ ನದಿಯ ಉಪನದಿ ಇಂದ್ರಾವಳಿಯಲ್ಲಿ ಬಳಕೆಯಾಗದ 147.93 ಟಿಎಂಸಿ ಅಡಿ ನೀರನ್ನು ನದಿ ತಿರುವು ಯೋಜನೆಗೆ ಬಳಸಿಕೊಳ್ಳಲಾಗುತ್ತದೆ.  ಬೇಡ್ತಿ–ವರದಾ ನದಿ ಜೋಡಣೆಯಿಂದ 18 ಟಿಎಂಸಿ ಅಡಿ ನೀರು ದೊರಕಲಿದೆ ಎಂದು ಜಲಶಕ್ತಿ ಸಚಿವಾಲಯವು ಸಭೆಗೆ ತಿಳಿಸಿತು. 

ADVERTISEMENT

ಉತ್ತರ ಕರ್ನಾಟಕದ ಸಾಕಷ್ಟು ಪ್ರದೇಶ ನೀರಾವರಿಯಿಂದ ವಂಚಿತವಾಗಿದೆ. ಈ ಪ್ರದೇಶಗಳಿಗೆ ನೀರುಣಿಸಲು ನದಿ ಜೋಡಣೆಯ ಸಂದರ್ಭದಲ್ಲಿ ರಾಜ್ಯಕ್ಕೆ ಹೆಚ್ಚಿನ ಪಾಲು ನೀಡಬೇಕು. ಹೆಚ್ಚುವರಿ 147.93 ಟಿಎಂಸಿ ಅಡಿ ನೀರಿನಲ್ಲಿ ಕನಿಷ್ಠ 40 ಟಿಎಂಸಿ ಅಡಿಯನ್ನಾದರೂ ಒದಗಿಸಬೇಕು ಎಂದು ಶಿವಕುಮಾರ್ ಅವರು ಕೇಂದ್ರ ಸಚಿವರ ಗಮನಕ್ಕೆ ತಂದರು. ನೀರಿನ ಪಾಲನ್ನು ನ್ಯಾಯಬದ್ಧವಾಗಿ ಹಂಚಿಕೆ ಮಾಡಿದರಷ್ಟೇ ಕರಡು ಒಪ್ಪಂದಕ್ಕೆ ಸಹಿ ಹಾಕಲು ಸಿದ್ಧ ಎಂದು ಅವರು ಪುನರುಚ್ಚರಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.