ADVERTISEMENT

ಕೆಪಿಸಿಎಲ್‌: ಗೋದ್ನಾ ವಿದ್ಯುತ್‌ ಯೋಜನೆಗೆ ಮರುಜೀವ

ಛತ್ತೀಸಗಢದಲ್ಲಿ ರಾಜ್ಯದ ಯೋಜನೆ, 1,600 ಮೆಗಾವಾಟ್‌ ಸಾಮರ್ಥ್ಯ

ಎ.ಎಂ.ಸುರೇಶ
Published 10 ಆಗಸ್ಟ್ 2025, 23:30 IST
Last Updated 10 ಆಗಸ್ಟ್ 2025, 23:30 IST
   

ಬೆಂಗಳೂರು: ಹದಿನೇಳು ವರ್ಷಗಳಿಂದ ನನೆಗುದಿಯಲ್ಲಿದ್ದ 1,600 ಮೆಗಾವಾಟ್‌ ಸಾಮರ್ಥ್ಯದ ಗೋದ್ನಾ ಶಾಖೋತ್ಪನ್ನ ವಿದ್ಯುತ್‌ ಯೋಜನೆಗೆ ಮರುಜೀವ ನೀಡಿರುವ ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತ (ಕೆಪಿಸಿಎಲ್‌), ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲು ಟೆಂಡರ್ ಕರೆದಿದೆ.

ರಾಜ್ಯ ಸರ್ಕಾರ ಮೊದಲ ಬಾರಿಗೆ ಸಾರ್ವಜನಿಕ– ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ವಿದ್ಯುತ್‌ ಯೋಜನೆಯನ್ನು ಕೈಗೆತ್ತಿಕೊಳ್ಳಲು ಮುಂದಾಗಿದೆ. ಟೆಂಡರ್‌ನಲ್ಲಿ ಭಾಗಿಯಾಗಲು ಈ ತಿಂಗಳ 14ರವರೆಗೂ ಅವಕಾಶ ಇದೆ. ಈ ಯೋಜನೆಗೆ ಸುಮಾರು ₹18 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಶೇ 74ರಷ್ಟನ್ನು ಖಾಸಗಿಯವರು ಹಾಗೂ ಉಳಿದ 26ರಷ್ಟನ್ನು ಕೆಪಿಸಿಎಲ್ ಭರಿಸಲಿದೆ.

ಅದಾನಿ ಪವರ್‌ ಲಿಮಿಟೆಡ್‌, ಜೆಎಸ್‌ಡಬ್ಲ್ಯು ಎನರ್ಜಿ, ಹಲ್ದಿಯಾ ಎನರ್ಜಿ ಕಂಪನಿ ಹಾಗೂ ಮೇಘಾ ಎಂಜಿನಿಯರಿಂಗ್‌ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನ ಪ್ರತಿನಿಧಿಗಳು ಈಗಾಗಲೇ ಗೋದ್ನಾಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಟೆಂಡರ್‌ ಅಂತಿಮವಾಗಿ, ಎಲ್ಲ ಪ್ರಕ್ರಿಯೆಗಳು ಅಂದುಕೊಂಡಂತೆ ಆದರೆ, ಐದು ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ಕೆಪಿಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಛತ್ತೀಸಗಢದ ಗೋದ್ನಾದಲ್ಲಿ ಈ ಯೋಜನೆಯನ್ನು ಆರಂಭಿಸುವ ಸಂಬಂಧ 2008ರಲ್ಲಿ ಆಗಿನ ಬಿಜೆಪಿ ಸರ್ಕಾರವು ಅಲ್ಲಿನ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಇದಾದ ಬಳಿಕ ಭೂ ಸ್ವಾಧೀನ, ಕಲ್ಲಿದ್ದಲು ಗಣಿ ಹಂಚಿಕೆಯಲ್ಲಿ ಆದ ವಿಳಂಬ ಸೇರಿದಂತೆ ಹಲವು ಕಾರಣಗಳಿಂದ ಈ ಯೋಜನೆ ನನೆಗುದಿಯಲ್ಲಿತ್ತು. ಈಗ ಪೂರ್ವಭಾವಿ ಪ್ರಕ್ರಿಯೆಗಳು ಒಂದು ಹಂತಕ್ಕೆ ಬಂದಿದ್ದು, ಇದಕ್ಕೆ ಇದ್ದ ಬಹುತೇಕ ಅಡೆತಡೆಗಳು ನಿವಾರಣೆಯಾಗಿವೆ.

ಈ ಯೋಜನೆಗಾಗಿ 1,016 ಎಕರೆ ಖಾಸಗಿ ಜಮೀನು ಹಾಗೂ 160 ಎಕರೆ ಸರ್ಕಾರಿ ಜಮೀನನ್ನು 2013ರಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಇದಕ್ಕಾಗಿ ಸುಮಾರು ₹220 ಕೋಟಿ ಖರ್ಚಾಗಿದೆ. ಈ ಯೋಜನೆಗೆ ಅಗತ್ಯವಿರುವ ನೀರನ್ನು ಮಹಾನದಿಯಿಂದ ನೀಡಲು ಛತ್ತೀಸಗಢ ಸರ್ಕಾರ ಸಮ್ಮತಿಸಿದೆ. ಇದಕ್ಕೆ ಅಗತ್ಯವಿರುವ ಬ್ಯಾರೇಜ್‌ ನಿರ್ಮಿಸಲು ₹64 ಕೋಟಿ ವೆಚ್ಚವಾಗಿದೆ. ಇದೂ ಸೇರಿದಂತೆ ಗೋದ್ನಾದಲ್ಲಿ ಕಚೇರಿ ಆರಂಭ, ಸಿವಿಲ್‌ ಕಾಮಗಾರಿ, ಬ್ಯಾಂಕ್‌ ಖಾತರಿ ಇತ್ಯಾದಿಗಳಿಗೆ ಒಟ್ಟು ₹350 ಕೋಟಿ ವೆಚ್ಚ ಮಾಡಲಾಗಿದೆ.

ಕಲ್ಲಿದ್ದಲು ಹಂಚಿಕೆ: ಗೋದ್ನಾ ಸಮೀಪದಲ್ಲೇ ಎರಡು ಕಲ್ಲಿದ್ದಲು ಗಣಿಗಳನ್ನು ಕೇಂದ್ರ ಸರ್ಕಾರವು 2019ರಲ್ಲಿ ಕೆಪಿಸಿಎಲ್‌ಗೆ ಹಂಚಿಕೆ ಮಾಡಿದೆ. 1,600 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆಗಾಗಿ ವರ್ಷಕ್ಕೆ 70 ಲಕ್ಷ ಟನ್‌ ಕಲ್ಲಿದ್ದಲು ಬೇಕಾಗುತ್ತದೆ. 21 ಕೋಟಿ ಟನ್‌ ಕಲ್ಲಿದ್ದಲು ಅಲ್ಲಿ ಲಭ್ಯವಿದ್ದು, 30 ವರ್ಷಗಳವರೆಗೆ ಬಳಸಬಹುದು.

ಕಲ್ಲಿದ್ದಲು ಹಗರಣ ಬಯಲಿಗೆ ಬಂದ ನಂತರ, ವಿವಿಧ ಕಂಪನಿಗಳಿಗೆ ನೀಡಿದ್ದ ಕಲ್ಲಿದ್ದಲು ಗಣಿಗಳ ಹಂಚಿಕೆಯನ್ನು ಕೇಂದ್ರ ಸರ್ಕಾರ 2014ರಲ್ಲಿ ರದ್ದುಪಡಿಸಿತು. ಇದಾದ ನಂತರ ಕೆಲವು ವರ್ಷ ಹೊಸದಾಗಿ ಯಾರಿಗೂ ಕಲ್ಲಿದ್ದಲು ಹಂಚಿಕೆ ಮಾಡಲಿಲ್ಲ. 2018ರಲ್ಲಿ ಕೇಂದ್ರ ಸರ್ಕಾರವು ಕಲ್ಲಿದ್ದಲು ಗಣಿಗಳ ಹಂಚಿಕೆಗೆ ಅರ್ಜಿ ಆಹ್ವಾನಿಸಿತ್ತು. ಆ ವರ್ಷ ನಮಗೆ ಸಿಗಲಿಲ್ಲ. ಅಂತಿಮವಾಗಿ 2019ರಲ್ಲಿ ಹಂಚಿಕೆಯಾಯಿತು ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ಯೋಜನೆಯ ಹಾದಿ...

2008ರಲ್ಲಿ ರಾಜ್ಯದಲ್ಲಿ ವಿದ್ಯುತ್‌ ಕೊರತೆ ತೀವ್ರವಾಗಿತ್ತು. ಆಗ ಕಲ್ಲಿದ್ದಲಿನ ಪೂರೈಕೆಯಲ್ಲೂ ವ್ಯತ್ಯಯವಾಗುತ್ತಿತ್ತು. ಇದನ್ನು ಮನಗಂಡ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಛತ್ತೀಸಗಢದ ಗೋದ್ನಾದಲ್ಲಿ ಶಾಖೋತ್ಪನ್ನ ವಿದ್ಯುತ್‌ ಯೋಜನೆ ಆರಂಭಿಸಲು ಮುಂದಾಯಿತು. ಆಗ ಛತ್ತೀಸಗಢದಲ್ಲೂ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿ ಇತ್ತು. ಹೀಗಾಗಿ ಎರಡೂ ರಾಜ್ಯಗಳ ಮಧ್ಯೆ ತ್ವರಿತ ಒಪ್ಪಂದ ಆಯಿತು.

ಆದರೆ, ಭೂ ಸ್ವಾಧೀನ, ಕಲ್ಲಿದ್ದಲು ಗಣಿ ಹಂಚಿಕೆ ಆಗದ ಕಾರಣ ಯೋಜನೆಗೆ ಚಾಲನೆ ಸಿಗಲಿಲ್ಲ. ಅಲ್ಲದೆ ಯರಮರಸ್‌, ಕೂಡಗಿ ಶಾಖೋತ್ಪನ್ನ ವಿದ್ಯುತ್‌ ಯೋಜನೆ, ಪಾವಗಡದ ಸೌರವಿದ್ಯುತ್‌ ಯೋಜನೆಗಳತ್ತ ಸರ್ಕಾರ ಹೆಚ್ಚು ಗಮನಹರಿಸಿದ್ದರಿಂದ ಛತ್ತೀಸಗಢ ಯೋಜನೆ ಬಹುತೇಕ ಮೂಲೆಗುಂಪಾಗಿತ್ತು. ಈ ಮಧ್ಯೆ ಕೋವಿಡ್‌ನಿಂದಾಗಿ 2–3 ವರ್ಷ ಯಾವುದೇ ಹೊಸ ಯೋಜನೆಗಳತ್ತ ಸರ್ಕಾರ ಗಮನಹರಿಸಲಿಲ್ಲ.

ಕೋವಿಡ್‌ ನಂತರ ವಿದ್ಯುತ್‌ಗೆ ಬೇಡಿಕೆ ಹೆಚ್ಚಾದ ಕಾರಣ, ನನೆಗುದಿಯಲ್ಲಿದ್ದ ಗೋದ್ನಾ ಯೋಜನೆಗೆ ಮರು ಜೀವ ನೀಡುವ ಮೂಲಕ ಅನುಷ್ಠಾನಕ್ಕೆ ಬೇಕಾದ ಸಿದ್ಧತೆಗಳನ್ನು ಕೆಪಿಸಿಎಲ್‌ ಆರಂಭಿಸಿದೆ.

ದರ ನಿಗದಿಪಡಿಸಲಿರುವ ಕೆಇಆರ್‌ಸಿ
ಟೆಂಡರ್ ಅಂತಿಮಗೊಂಡ ಬಳಿಕ ಯೋಜನೆ ಅನುಷ್ಠಾನ ಕುರಿತು ಸಂಬಂಧಪಟ್ಟ ಕಂಪನಿ ಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಅದರಲ್ಲಿ ಯೂನಿಟ್‌ಗೆ ಎಷ್ಟು ಹಣ ಎಂದು ನಮೂದಿಸಲಾಗುತ್ತದೆ. ಆದರೆ, ಅಂತಿಮವಾಗಿ ಯೂನಿಟ್‌ಗೆ ಎಷ್ಟು ದರ ಎಂಬುದನ್ನು ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ (ಕೆಇಆರ್‌ಸಿ) ನಿಗದಿ ಮಾಡುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.