ADVERTISEMENT

ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸಿದ ಚಾಲಕನ ಸಂತಸದ ಕ್ಷಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಸೆಪ್ಟೆಂಬರ್ 2023, 12:41 IST
Last Updated 6 ಸೆಪ್ಟೆಂಬರ್ 2023, 12:41 IST
   

ಬೆಂಗಳೂರು: ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಚಟ್ನಳ್ಳಿ ಗ್ರಾಮದ ರಾಜಪ್ಪ ವೃತ್ತಿಯಿಂದ ಹಾಲಿನ ವಾಹನ ಓಡಿಸುವ ಚಾಲಕ. ಆದರೂ ಜೀವನದಲ್ಲಿ ಒಮ್ಮೆಯಾದರೂ ವಿಮಾನ ಹತ್ತಬೇಕು ಎಂಬ ಕನಸು ಕಂಡಿದ್ದ ಅವರು, ಅದು ನನಸಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ರಾಜಪ್ಪ ಅವರ ಅನಿಸಿಕೆ ಇರುವ ವಿಡಿಯೊವನ್ನು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ’ಶಿವಮೊಗ್ಗದ ಒಬ್ಬ ಸಾಮಾನ್ಯ ರೈತರು ಕುವೆಂಪು ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಹೋಗಿದ್ದಾರೆ! …’ ಎಂದು ಬರೆದುಕೊಂಡಿದ್ದಾರೆ.

‘ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ ಮರುದಿನವೇ ಇಲ್ಲಿಗೆ ಬಂದು ವಿಚಾರಿಸಿದ್ದೆ. ಕಾಮಗಾರಿಗಳು ಇನ್ನೂ ನಡೆಯುತ್ತಿವೆ. ಶೀಘ್ರದಲ್ಲಿ ವಿಮಾನ ಬರಲಿದೆ ಎಂದು ಇಲ್ಲಿನ ಸಿಬ್ಬಂದಿ ಹೇಳಿದ್ದರು. ಆದರೆ ಜೀವನದಲ್ಲೊಮ್ಮೆ ವಿಮಾನ ಹತ್ತಲೇಬೇಕು ಎಂಬ ಮಹದಾಸೆ ಪದೇ ಪದೇ ಪ್ರೇರೇಪಿಸುತ್ತಿತ್ತು’ ಎಂದು ತಮ್ಮ ಮನದಾಳವನ್ನು ರಾಜಪ್ಪ ಹಂಚಿಕೊಂಡಿದ್ದಾರೆ.

ADVERTISEMENT

‘ಇತ್ತೀಚೆಗೆ ವಿಮಾನ ಬಂದಿಳಿದ ಸುದ್ದಿ ಓದಿದೆ. ಕೆಲವರು ಒಂದು ಟಿಕೆಟ್‌ಗೆ ₹4,900 ಕೊಟ್ಟಿರುವುದಾಗಿ, ಇನ್ನೂ ಕೆಲವರು ₹16 ಸಾವಿರ ಕೊಟ್ಟಿರುವುದಾಗಿ ಹೇಳಿದರು. ಅದನ್ನು ಕೇಳಿ ಇಷ್ಟು ದುಬಾರಿ ಹಣ ನೀಡಿ ನಾನು ಹೋಗಲು ಸಾಧ್ಯವೇ? ಎಂದು ನನಗೆ ನಾನೇ ಪ್ರಶ್ನಿಸಿಕೊಂಡೆ. ಆದರೂ ಇರಲಿ ಎಂದು ವಿಮಾನ ನಿಲ್ದಾಣಕ್ಕೆ ಹೋಗಿ ವಿಚಾರಿಸಿದೆ. ನಾಳೆಯ ಟಿಕೆಟ್ ಪಡೆದರೆ ₹2,920 ಎಂದರು. ಖುಷಿಯಾಯಿತು. ತಕ್ಷಣ ಟಿಕೆಟ್ ಖರೀದಿಸಿದೆ’ ಎಂದಿದ್ದಾರೆ.

‘ಬೆಂಗಳೂರಿನಲ್ಲಿ ನನಗೇನೂ ಕೆಲಸವಿಲ್ಲ. ವಿಮಾನದಲ್ಲಿ ಹೋಗುವುದು ಮತ್ತೆ ಶಿವಮೊಗ್ಗಕ್ಕೆ ಮರಳುವುದಷ್ಟೇ. ಆದರೆ ಜೀವ ಇರುವವರೆಗೂ ವರ್ಷಕ್ಕೆ ಒಮ್ಮೆಯಾದರೂ ವಿಮಾನ ಹತ್ತಬೇಕು ಎಂದು ಸಂಕಲ್ಪ ಮಾಡಿದ್ದೇನೆ. ನಮ್ಮೂರಿನಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನ ಹತ್ತಿದ ಮೊದಲಿಗ ನಾನೇ ಎಂಬ ಹೆಮ್ಮೆ ನನ್ನದು’ ಎಂದಿದ್ದಾರೆ ರಾಜಪ್ಪ.

‘ವಿಮಾನ ಹತ್ತಬೇಕೆನ್ನುವ ನನ್ನ ಬಯಕೆಗೆ ಮಕ್ಕಳು, ‘ಅಪ್ಪಾ, ನಾವು ಯುವಕರು. ನಾವು ಎಂಜಾಯ್ ಮಾಡಬೇಕು. ನೀನು ಮಾಡುತ್ತಿದ್ದೀಯಲ್ಲಾ? ಎಂದರು. ಅದಕ್ಕೆ ನಿಮಗಿನ್ನೂ ವಯಸ್ಸಿದೆ. ನನ್ನಗೆ ವಯಸ್ಸಾಗದೆ. ನಾನು ಈಗ ಎಂಜಾಯ್ ಮಾಡುತ್ತೇನೆ. ಮುಂದೆ ನೀವು ಮಾಡಿ’ ಎಂದು ಉತ್ತರ ಕೊಟ್ಟೆ ಎನ್ನುತ್ತ ರಾಜಪ್ಪ ಮುಗುಳ್ನಗು ಬೀರಿದ್ದಾರೆ.

'ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣವಾಗಿರುವುದು ಜಿಲ್ಲೆಯ ಜನರಿಗೆ ಹೆಚ್ಚು ಅನುಕೂಲವಾಗಿದೆ. ತುರ್ತು ಪ್ರಯಾಣಕ್ಕೆ ಇದು ಹೆಚ್ಚು ಅನುಕೂಲವಾಗಲಿದೆ’ ಎಂಬ ಅನಿಸಿಕೆಯನ್ನು ವಿಡಿಯೊದಲ್ಲಿ ಅವರು ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.