ADVERTISEMENT

ಗೂಗಲ್ ಇಂಡಿಯಾ ವಿರುದ್ಧದ ವಿಚಾರಣೆ 60 ದಿನಗಳಲ್ಲಿ ಪೂರ್ಣ: ಸಿಸಿಐ

ಗೂಗಲ್‌ ಪ್ಲೇ ಸ್ಟೋರ್‌ ಹೊಸ ಬಿಲ್ಲಿಂಗ್‌ ನೀತಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2022, 15:20 IST
Last Updated 5 ಜನವರಿ 2022, 15:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಪ್ಲೇ ಸ್ಟೋರ್‌ನ ನೂತನ ಬಿಲ್ಲಿಂಗ್ ನಿಯಮಗಳಿಗೆ ಸಂಬಂಧಿಸಿದಂತೆ ಗೂಗಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವಿರುದ್ಧದ ವಿಚಾರಣೆಯನ್ನು 60 ದಿನಗಳ ಒಳಗೆ ಪೂರ್ಣಗೊಳಿಸಲಾಗುವುದು‘ ಎಂದು ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಹೈಕೋರ್ಟ್‌ಗೆ ತಿಳಿಸಿದೆ.

ಈ ಕುರಿತ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿ, ಪ್ರಕರಣ ಮುಕ್ತಾಯಗೊಳಿಸುವ ಸಂಬಂಧ ಉಭಯ ಪಕ್ಷಗಾರರು ಜಂಟಿ ಜ್ಞಾಪನಾ ಪತ್ರ ಸಲ್ಲಿಸುವಂತೆ ಸೂಚಿಸಿತು. ವಿಚಾರಣೆಯನ್ನು ಇದೇ 10ಕ್ಕೆ ಮುಂದೂಡಲಾಗಿದೆ.

ಪ್ಲೇ ಸ್ಟೋರ್‌ನ ನೂತನ ನಿಯಮಗಳಿಗೆ ಸಂಬಂಧಿಸಿದ ಕೆಲ ಪ್ರಶ್ನೆಗಳಿಗೆ 2021ರ ಡಿಸೆಂಬರ್ 31ರೊಳಗೆ ಉತ್ತರಿಸುವಂತೆ ಗಡುವು ನೀಡಿದ್ದ ಸಿಸಿಐ ಕ್ರಮ ಪ್ರಶ್ನಿಸಿ ಗೂಗಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ಸಮೂಹ ಸಂಸ್ಥೆಗಳು ಈ ರಿಟ್‌ ಅರ್ಜಿ ಸಲ್ಲಿಸಿವೆ.ಸಿಸಿಐ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್. ವೆಂಕಟರಾಮನ್ ಹಾಗೂಗೂಗಲ್ ಇಂಡಿಯಾ ಪರ ಹಿರಿಯ ವಕೀಲ ಗೋಪಾಲ ಸುಬ್ರಹ್ಮಣ್ಯಂ ವಾದ ಮಂಡಿಸಿದರು.

ADVERTISEMENT

ಪ್ರಕರಣವೇನು?: ‌ಅಲಯನ್ಸ್ ಆಫ್ ಡಿಜಿಟಲ್ ಇಂಡಿಯಾ ಫೌಂಡೇಷನ್ (ಎಡಿಐಎಫ್) ನವೋದ್ಯಮ ಸಂಸ್ಥೆಗಳ ಒಕ್ಕೂಟ ಗೂಗಲ್‌ ಪ್ಲೇ ಸ್ಟೋರ್‌ನ ಹೊಸ ಬಿಲ್ಲಿಂಗ್ ನೀತಿಯನ್ನು ಪ್ರಶ್ನಿಸಿ ಸಿಸಿಐ ಮೊರೆ ಹೋಗಿತ್ತು. ವಿಚಾರಣೆ ನಡೆಸಿದ್ದ ಸಿಸಿಐ ಡಿಸೆಂಬರ್ 14ರಂದು ಪ್ಲೇ ಸ್ಟೋರ್ ನಿಯಮಾವಳಿಗಳ ಬಗ್ಗೆ ತನಿಖೆಗೆ ಆದೇಶಿಸಿ ಕೆಲ ಪ್ರಶ್ನೆಗಳಿಗೆ ಉತ್ತರಿಸುವಂತೆ ಗೂಗಲ್‌ಗೆ ಗಡುವು ನೀಡಿತ್ತು. ತಪ್ಪಿದರೆ, ಕ್ರಮ ಜರುಗಿಸುವುದಾಗಿ ಸೂಚಿಸಿತ್ತು.ಇದನ್ನು ಪ್ರಶ್ನಿಸಿ ಗೂಗಲ್ ಇಂಡಿಯಾ ಹೈಕೋರ್ಟ್ ಮೆಟ್ಟಿಲೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.