ADVERTISEMENT

ಗೂಗಲ್‌ ಪ್ಲೇ ಸ್ಟೋರ್‌ ನೀತಿ ಕುರಿತ ಸಿಸಿಐ ವಿಚಾರಣೆಗೆ ಸಹಕಾರ: ಅರ್ಜಿ ವಿಲೇವಾರಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 3:25 IST
Last Updated 11 ಜನವರಿ 2022, 3:25 IST
   

ಬೆಂಗಳೂರು: ‘ಗೂಗಲ್ ಪ್ಲೇ ಸ್ಟೋರ್ ಪೇಮೆಂಟ್ ನೀತಿಗೆ ಸಂಬಂಧಿಸಿದಂತೆ ಭಾರತೀಯ ಸ್ಪರ್ಧಾ ಆಯೋಗದ (ಸಿಸಿಐ) ವಿಚಾರಣೆಗೆ ನೀಡಲಾಗಿರುವ ಸಹಕಾರ ಮುಂದುವರಿಸಲಾಗುವುದು’ ಎಂದು ಗೂಗಲ್ ಇಂಡಿಯಾ ಹೈಕೋರ್ಟ್‌ಗೆ ತಿಳಿಸಿದೆ.

ಈ ಕುರಿತ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.ವಿಚಾರಣೆ ವೇಳೆ ಗೂಗಲ್ ಇಂಡಿಯಾ ಮತ್ತು ಅಲಯನ್ಸ್ ಆಫ್‌ ಡಿಜಿಟಲ್‌ ಇಂಡಿಯಾ ಫೌಂಡೇಷನ್ (ಎಡಿಐಎಫ್) ನವೋದ್ಯಮ ಸಂಸ್ಥೆಗಳ ಪರ ವಕೀಲರು ನ್ಯಾಯಾಲಯಕ್ಕೆ ಜಂಟಿ ಜ್ಞಾಪನಾ ಪತ್ರ (ಮೆಮೊ) ಸಲ್ಲಿಸಿದರು.

‘ಗೂಗಲ್ ಪ್ಲೇಸ್ಟೋರ್ ಪೇಮೆಂಟ್ ನೀತಿಯ ಕುರಿತಂತೆ ಸಿಸಿಐ ವಿಚಾರಣೆಗೆ ನೀಡಲಾಗಿರುವ ಸಹಕಾರವನ್ನು ಗೂಗಲ್ ಇಂಡಿಯಾ ಮುಂದುವರಿಸಲಿದೆ. ನೀತಿಯನ್ನು 2022ರ ಅಕ್ಟೋಬರ್ 31ರವರೆಗೆ ಜಾರಿ ಮಾಡುವುದಿಲ್ಲ’ ಎಂಬ ಹೇಳಿಕೆಯನ್ನು ಪರಿಗಣಿಸಿದ ನ್ಯಾಯಪೀಠ ಅರ್ಜಿ ವಿಲೇವಾರಿ ಮಾಡಿದೆ.

ADVERTISEMENT

ಪ್ರಕರಣವೇನು?: ‌ಅಲಯನ್ಸ್ ಆಫ್ ಡಿಜಿಟಲ್ ಇಂಡಿಯಾ ಫೌಂಡೇಷನ್ (ಎಡಿಐಎಫ್) ನವೋದ್ಯಮ ಸಂಸ್ಥೆಗಳ ಒಕ್ಕೂಟ ಗೂಗಲ್‌ ಪ್ಲೇ ಸ್ಟೋರ್‌ನ ಹೊಸ ಬಿಲ್ಲಿಂಗ್ ನೀತಿಯನ್ನು ಪ್ರಶ್ನಿಸಿ ಸಿಸಿಐ ಮೊರೆ ಹೋಗಿತ್ತು. ವಿಚಾರಣೆ ನಡೆಸಿದ್ದ ಸಿಸಿಐ ಪ್ಲೇ ಸ್ಟೋರ್ ನಿಯಮಾವಳಿಗಳ ಬಗ್ಗೆ ತನಿಖೆಗೆ ಆದೇಶಿಸಿ ಕೆಲ ಪ್ರಶ್ನೆಗಳಿಗೆ ಉತ್ತರಿಸುವಂತೆ ಗೂಗಲ್‌ಗೆ ಗಡುವು ನೀಡಿತ್ತು. ತಪ್ಪಿದರೆ, ಕ್ರಮ ಜರುಗಿಸುವುದಾಗಿ ಸೂಚಿಸಿತ್ತು.ಇದನ್ನು ಪ್ರಶ್ನಿಸಿ ಗೂಗಲ್ ಇಂಡಿಯಾ ಹೈಕೋರ್ಟ್ ಮೆಟ್ಟಿಲೇರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.