ADVERTISEMENT

ಗೋಸಾಯಿ ಮಠ:ಮಂಜುನಾಥ ಸ್ವಾಮೀಜಿ ಪೀಠಾರೋಹಣ

ನಾಡಿಗೆ ಮರಾಠ ಸಮಾಜದ ಕೊಡುಗೆ ಅಪಾರ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2022, 18:46 IST
Last Updated 14 ಫೆಬ್ರುವರಿ 2022, 18:46 IST
ಗವಿಪುರ ಗೋಸಾಯಿ ಮಹಾಸಂಸ್ಥಾನ ಮಠ ನೂತನ ಪೀಠಾಧ್ಯಕ್ಷ ಮಂಜುನಾಥ ಸ್ವಾಮೀಜಿ ಅವರಿಗೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಕಿರೀಟ ಧಾರಣೆ ಮಾಡಿದರು. ಶಿವಲಿಂಗಾನಂದ ಸ್ವಾಮೀಜಿ, ಸುಬ್ರಹ್ಮಣ್ಯ ಸ್ವಾಮೀಜಿ, ಸೌಮ್ಯನಾಥ ಸ್ವಾಮೀಜಿ, ಸೋಹಂ ಚೈತನ್ಯಪುರಿ ಸ್ವಾಮೀಜಿ ಇದ್ದಾರೆ  –ಪ್ರಜಾವಾಣಿ ಚಿತ್ರ
ಗವಿಪುರ ಗೋಸಾಯಿ ಮಹಾಸಂಸ್ಥಾನ ಮಠ ನೂತನ ಪೀಠಾಧ್ಯಕ್ಷ ಮಂಜುನಾಥ ಸ್ವಾಮೀಜಿ ಅವರಿಗೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಕಿರೀಟ ಧಾರಣೆ ಮಾಡಿದರು. ಶಿವಲಿಂಗಾನಂದ ಸ್ವಾಮೀಜಿ, ಸುಬ್ರಹ್ಮಣ್ಯ ಸ್ವಾಮೀಜಿ, ಸೌಮ್ಯನಾಥ ಸ್ವಾಮೀಜಿ, ಸೋಹಂ ಚೈತನ್ಯಪುರಿ ಸ್ವಾಮೀಜಿ ಇದ್ದಾರೆ  –ಪ್ರಜಾವಾಣಿ ಚಿತ್ರ   

ಬೆಂಗಳೂರು: ಗವಿಪುರ ಗೋಸಾಯಿ ಮಹಾಸಂಸ್ಥಾನ ಮಠದ ನೂತನ ಪೀಠಾಧ್ಯಕ್ಷರಾಗಿ ಮಂಜುನಾಥ ಸ್ವಾಮೀಜಿ ಸೋಮವಾರ ಪೀಠಾರೋಹಣ ಮಾಡಿದರು.

ಪೀಠಾರೋಹಣದ ಅಂಗವಾಗಿ ಮಠದಲ್ಲಿ ಹೋಮ ಸೇರಿದಂತೆ ವಿವಿಧ ಧಾರ್ಮಿಕ ವಿಧಿಗಳು ನೆರವೇರಿದವು. ಬಳಿಕ ‌ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರ ಸಮ್ಮುಖದಲ್ಲಿ ಮಂಜುನಾಥ ಸ್ವಾಮೀಜಿ ಅವರಿಗೆ ಕಿರೀಟ ಧಾರಣೆ ನಡೆಯಿತು. ಇದೇ ವೇಳೆ ವಿವಿಧ ಮಠಗಳ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,‘ಗೋಸಾಯಿ ಮಠಕ್ಕೆ ತನ್ನದೇ ಆದ ಪರಂ‍ಪರೆ ಇದೆ. ಈಸೌಭಾಗ್ಯ ಮರಾಠ ಸಮುದಾಯಕ್ಕೆ ಸಿಕ್ಕಿದೆ. ಮರಾಠ ಸಮಾಜವು ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿದೆ.ಶಿವಾಜಿ ಸ್ವಾಭಿಮಾನದ ಪ್ರತೀಕ. ಇತಿಹಾಸದ ಪುಟಗಳನ್ನು ತಿರುವಿದಾಗ ಮರಾಠ ಮಹನೀಯರ ಪಾತ್ರ ತಿಳಿಯುತ್ತದೆ’ ಎಂದರು.

ADVERTISEMENT

‘ರಾಜ್ಯದಲ್ಲಿರುವ ಮರಾಠರು ಕನ್ನಡವನ್ನು ಅಚ್ಚುಕಟ್ಟಾಗಿ ಮಾತನಾಡುತ್ತಾರೆ. ಮರಾಠ ಸಮಾಜದ ಹಲವರು ಕನ್ನಡ ಪ್ರಾಧ್ಯಾಪಕರಾಗಿದ್ದಾರೆ. ನಾಡಿನ ಎಲ್ಲ ಆಗು ಹೋಗುಗಳಲ್ಲಿ ಬೆರೆತು, ತಮ್ಮದೇ ಕೊಡುಗೆ ನೀಡಿದ್ದಾರೆ. ರಾಜ್ಯದ ನೆಲ, ಜಲ ವಿಚಾರ ಬಂದಾಗ ಯಾವುದೇ ರಾಜಿ ಇಲ್ಲ. ಅದಕ್ಕೆ ಸಂಪೂರ್ಣ ಬೆಂಬಲವನ್ನು ಮರಾಠರು ಹಿಂದಿನಿಂದಲೂ ನೀಡಿದ್ದಾರೆ’ ಎಂದು ತಿಳಿಸಿದರು.

‘ಸಂಗೀತದ ನಂಟು ಹಾಗೂ ಮಾತೃ ಹೃದಯಿಯಾಗಿರುವ ಮಂಜುನಾಥ ಸ್ವಾಮೀಜಿ ಸಣ್ಣ ವಯಸ್ಸಿನಲ್ಲೇ ದೊಡ್ಡ ಸಾಧಕರು. ಮರಾಠ ಸಮಾಜಕ್ಕೆ ಇವರ ಅನುಭವ ಒಳ್ಳೆಯದನ್ನು ಮಾಡುತ್ತದೆ. ಅವರು ಭಗವದ್ಗೀತೆಯನ್ನು 51 ಪ್ರಕಾರಗಳಲ್ಲಿ ಹಾಡಿರುವುದು ವಿಶ್ವದಾಖಲೆ’ ಎಂದು ಶ್ಲಾಘಿಸಿದರು.

‘ಈ ಹಿಂದೆ ಭೂಮಿ, ಹಣ ಇದ್ದವರು ಜಗತ್ತನ್ನು ಆಳಿದರು. ಈಗ ಜ್ಞಾನ ಇದ್ದವರು ಆಳುತ್ತಿದ್ದಾರೆ. ಈ ಜ್ಞಾನದ ಶತಮಾನದತ್ತ ಮರಾಠ ಸಮುದಾಯವನ್ನು ಕೊಂಡೊಯ್ಯುವ ಅಗತ್ಯವಿದೆ. ಮರಾಠ ಸಮಾಜ ಗಟ್ಟಿಯಾದರೆ ಹಿಂದೂ ಸಮಾಜ ಗಟ್ಟಿಯಾಗುತ್ತದೆ. ಹಿಂದೂ ಸಮಾಜ ಗಟ್ಟಿಯಾದರೆ ದೇಶ ಬಲಗೊಳ್ಳುತ್ತದೆ. ಹಾಗಾಗಿ, ಒಗ್ಗಟ್ಟಿನಿಂದ ನಡೆಯಬೇಕು’ ಎಂದರು.

‘ಮಠದ ಅಭಿವೃದ್ಧಿ ಮತ್ತು ಆಸ್ತಿ ಸರಿಪಡಿಸುವ ಬಗ್ಗೆ ಸಚಿವರಿಗೆ ಸೂಚನೆ ನೀಡುತ್ತೇನೆ. ಸಮುದಾಯಕ್ಕೆ ಮತ್ತು ಮಠಕ್ಕೆ ಅಗತ್ಯ ಬೆಂಬಲವನ್ನು ಸರ್ಕಾರದಿಂದ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ಆರ್ಟ್‌ ಆಫ್‌ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್ ಗುರೂಜಿ,ಮುರುಘರಾಜೇಂದ್ರ ಸ್ವಾಮೀಜಿ, ಸಚಿವರಾದ ಆರ್‌.ಅಶೋಕ, ಸಿ.ಎನ್.ಅಶ್ವತ್ಥನಾರಾಯಣ, ಶಾಸಕ ಶ್ರೀಮಂತ ಪಾಟೀಲ, ಪಟ್ಟಾಭಿಷೇಕ ಮಹೋತ್ಸವ ಸಮಿತಿ ಅಧ್ಯಕ್ಷ ಪಿ.ಜಿ.ಆರ್.ಸಿಂಧ್ಯಾ ಸೇರಿದಂತೆ ಹಲವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.