ADVERTISEMENT

‘ತ್ರಿಫೇಸ್‌ ವಿದ್ಯುತ್‌ ಪೂರೈಕೆಯಲ್ಲಿ ಶೀಘ್ರ ಸುಧಾರಣೆ’

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2022, 16:15 IST
Last Updated 10 ಮಾರ್ಚ್ 2022, 16:15 IST

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್‌ ಕೊರತೆ ಇಲ್ಲ. ಆದರೆ, ತ್ರಿಫೇಸ್‌ ವಿದ್ಯುತ್‌ ಪೂರೈಕೆಯಲ್ಲಿ ಕೆಲವು ಸಮಸ್ಯೆಗಳಿದ್ದು, ಶೀಘ್ರದಲ್ಲಿ ಸುಧಾರಣೆ ತರಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ತಿಳಿಸಿದರು.

ವಿಧಾನಸಭೆಯಲ್ಲಿ ಗುರುವಾರ ಕಾಂಗ್ರೆಸ್‌ನ ಟಿ. ವೆಂಕಟರಮಣಯ್ಯ ಪ್ರಶ್ನೆಗೆ ಇಂಧನ ಸಚಿವರ ಪರವಾಗಿ ಉತ್ತರಿಸಿದ ಅವರು, ‘ರಾಜ್ಯದಲ್ಲಿ ದಟ್ಟಣೆ ಅವಧಿಯಲ್ಲಿ 14,700 ಮೆಗಾವಾಟ್‌ ವಿದ್ಯುತ್‌ ಬಳಕೆಯಾಗುತ್ತಿದೆ. ಸಾಮಾನ್ಯ ಅವಧಿಯಲ್ಲಿ 12,500 ಮೆಗಾವಾಟ್‌ ವಿದ್ಯುತ್‌ ಬೇಕಿದೆ. ಆದರೆ, ಅದಕ್ಕಿಂತಲೂ ಹೆಚ್ಚು ವಿದ್ಯುತ್‌ ಉತ್ಪಾದನೆ ಆಗುತ್ತಿದೆ’ ಎಂದರು.

ವಿದ್ಯುತ್‌ ಮಿಗತೆ ಇದೆ. ಆದರೆ, ಪೂರೈಕೆಯಲ್ಲಿ ಲೋಪದೋಷಗಳಿವೆ. ಈಗ ರಾತ್ರಿ ಮೂರು ಗಂಟೆ ಮತ್ತು ಹಗಲಿನ ವೇಳೆ ನಾಲ್ಕು ಗಂಟೆಗಳ ಕಾಲ ತ್ರಿಫೇಸ್‌ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿದೆ. ದಿನಕ್ಕೆ ಏಳು ಗಂಟೆಗಳ ಕಾಲ ತ್ರಿಫೇಸ್‌ ವಿದ್ಯುತ್‌ ಪೂರೈಕೆಯಾಗುತ್ತಿದೆ ಎಂದು ವಿವರಿಸಿದರು.

ADVERTISEMENT

ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಹಲವು ಸದಸ್ಯರು ಸಚಿವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ‘ಹಗಲಿನ ವೇಳೆ ಮೂರು ಗಂಟೆ ಮಾತ್ರ ತ್ರಿಫೇಸ್‌ ವಿದ್ಯುತ್‌ ಪೂರೈಸಲಾಗುತ್ತಿದೆ. ರಾತ್ರಿ ನಾಲ್ಕು ಗಂಟೆ ಪೂರೈಕೆ ಮಾಡಲಾಗುತ್ತಿದೆ. ಕೆಲವೆಡೆ ಈ ಅವಧಿಯಲ್ಲೂ ಕಡಿತ ಮಾಡಲಾಗುತ್ತಿದೆ’ ಎಂದು ಹೇಳಿದರು.

‘ತೋಟಗಾರಿಕಾ ಬೆಳೆಗಳು ಹೆಚ್ಚಿರುವ ಪ್ರದೇಶದಲ್ಲಿ ರಾತ್ರಿ ವೇಳೆ ನಾಲ್ಕು ಗಂಟೆ, ಹಗಲಿನ ವೇಳೆ ಮೂರು ಗಂಟೆ ತ್ರಿಫೇಸ್‌ ವಿದ್ಯುತ್‌ ಒದಗಿಸಿ’ ಎಂದು ಕಾಂಗ್ರೆಸ್‌ನ ಶಿವಾನಂದ ಪಾಟೀಲ ಆಗ್ರಹಿಸಿದರು.

ಹಗಲಿನಲ್ಲಿ ನಾಲ್ಕು ಗಂಟೆ, ರಾತ್ರಿ ವೇಳೆ ಮೂರು ಗಂಟೆ ತ್ರಿಫೇಸ್‌ ವಿದ್ಯುತ್‌ ಪೂರೈಸುವಂತೆ ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ, ಎಚ್‌.ಕೆ. ಕುಮಾರಸ್ವಾಮಿ, ಸಿ.ಎನ್‌. ಬಾಲಕೃಷ್ಣ ಸೇರಿದಂತೆ ಹಲವರು ಒತ್ತಾಯಿಸಿದರು. ‘ಸೌರಶಕ್ತಿ ಮೂಲ ಆಧರಿಸಿ ವಿದ್ಯುತ್‌ ಪೂರೈಕೆ ಸಮಯ ನಿಗದಿ ಮಾಡಿರುವುದೇ ಸಮಸ್ಯೆಗೆ ಕಾರಣ’ ಎಂದು ಶರತ್‌ ಬಚ್ಚೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.