ADVERTISEMENT

ನೇಮಕಾತಿ ತಡೆಗೆ ಸುತ್ತೋಲೆ ಹೊರಡಿಸಿದರೂ ಪ್ರಕ್ರಿಯೆ ಮುಂದುವರಿಸಿದ ಕೆಪಿಎಸ್‌ಸಿ

ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಲ್ಲಿ ಗೊಂದಲ

ರಾಜೇಶ್ ರೈ ಚಟ್ಲ
Published 14 ಜುಲೈ 2020, 21:27 IST
Last Updated 14 ಜುಲೈ 2020, 21:27 IST
   

ಬೆಂಗಳೂರು: ಕೋವಿಡ್‌ 19 ಪರಿಣಾಮ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ನಿಭಾಯಿಸುವ ನಿಟ್ಟಿನಲ್ಲಿ 2020–21ನೇ ಸಾಲಿನ ಎಲ್ಲ ನೇರ ನೇಮಕಾತಿಗಳನ್ನು ತಡೆಹಿಡಿದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದರೂ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ತೀರ್ಮಾನಿಸಿದೆ.

ಈಗಾಗಲೇ ಹೊರಡಿಸಿರುವ ಅಧಿಸೂಚನೆ ಅನ್ವಯ ಅರ್ಜಿ ಆಹ್ವಾನಿಸಲು ಮತ್ತು ನಿಗದಿಪಡಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲು ಕೆಪಿಎಸ್‌ಸಿ ಮುಂದಾಗಿರುವುದು ಲಕ್ಷಾಂತರ ಉದ್ಯೋಗಾಂಕ್ಷಿಗಳನ್ನು ಗೊಂದಲದಲ್ಲಿ ಸಿಲುಕಿಸಿದೆ.

ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್‌.ಎನ್‌. ಪ್ರಸಾದ್‌ ಅವರು ಜುಲೈ 6ರಂದು ಹೊರಡಿಸಿರುವ ಸುತ್ತೋಲೆಯಲ್ಲಿ, ‘ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳು, ಬ್ಯಾಕ್‌ಲಾಗ್‌ ಸೇರಿದಂತೆ ಎಲ್ಲ ಹುದ್ದೆಗಳನ್ನು ಭರ್ತಿ ಮಾಡುವುದನ್ನು ಮುಂದಿನ ಆದೇಶದವರೆಗೆ ತಡೆಹಿಡಿಯಲಾಗಿದೆ. ಇಲಾಖೆಯ ಅನುಮತಿ ಪಡೆದು ನೇಮಕಾತಿಯ ವಿವಿಧ ಹಂತಗಳಲ್ಲಿರುವ ಹುದ್ದೆಗಳಿಗೂ ಈ ಆದೇಶ ಅನ್ವಯ ಆಗಲಿದೆ’ ಎಂದು ಸ್ಪಷ್ಟಪಡಿಸಿದ್ದರು.

ADVERTISEMENT

ಆದರೆ, ಈ ಸುತ್ತೋಲೆಯ ಪ್ರತಿಯನ್ನು ಕೆಪಿಎಸ್‌ಸಿಗೆ ಸರ್ಕಾರ ಕಳುಹಿಸಿಲ್ಲ. ಅಲ್ಲದೆ, ಕೆಪಿಎಸ್‌ಸಿ ಸ್ವಾಯತ್ತ ಸಂಸ್ಥೆಯಾಗಿದ್ದು, ಈಗಾಗಲೇ ನಿಗದಿಪ‍ಡಿಸಿದಂತೆ ನೇಮಕಾತಿ ಪ್ರಕ್ರಿಯೆಗಳನ್ನು ಮುಂದುವರಿಸಲು ತೀರ್ಮಾನಿಸಿದೆ. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹಲವು ವೃಂದಗಳ ಹುದ್ದೆಗಳಿಗೆ ಜನವರಿ, ಫೆಬ್ರುವರಿಯಲ್ಲಿ ಅಧಿಸೂಚನೆ ಹೊರಡಿಸಿದೆ.

ಲಾಕ್‌ಡೌನ್ ಕಾರಣದಿಂದ ಮುಂದೂಡಿಕೆಯಾಗಿದ್ದ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಸಮೂಹ ‘ಎ’ ವೃಂದದ ಸಹಾಯಕ ನಿಯಂತ್ರಕರು 54 ಹುದ್ದೆಗಳಿಗೆ ಆಗಸ್ಟ್‌ 17ರಂದು ಮತ್ತು ಗೆಜೆಟೆಡ್‌ ಪ್ರೊಬೇಷನರಿ ಗ್ರೂಪ್‌ ‘ಎ’ ಮತ್ತು ‘ಬಿ’ ವೃಂದದ 106 ಹುದ್ದೆಗಳಿಗೆ ಆಗಸ್ಟ್‌ 24ರಂದು ಪೂರ್ವಭಾವಿ ಪರೀಕ್ಷೆ ನಡೆಸಲು ಕೆಪಿಎಸ್‌ಸಿ ಈಗಾಗಲೇ ನಿರ್ಧರಿಸಿದೆ.

‘ಹಲವು ಹುದ್ದೆಗಳ ನೇಮಕಾತಿಗೆ ಜನವರಿ ತಿಂಗಳಿನಲ್ಲೇ ಅಧಿಸೂಚನೆ ಹೊರಡಿಸಲಾಗಿದೆ. ಈಗಾಗಲೇ ಪರೀಕ್ಷೆಗಳನ್ನು ಮುಗಿಸಬೇಕಿತ್ತು. ಆದರೆ, ಕೊರೊನಾ ಕಾರಣದಿಂದ ಮುಂದೂಡಿದ್ದೇವೆ. ಈ ಪರೀಕ್ಷೆಗಳನ್ನು ಮುಗಿಸಬೇಕಾಗಿದೆ. ಸದ್ಯ, ನಾನೂ ಕೊರೊನಾ ನಿಯಂತ್ರಣ ಕಾರ್ಯದ ಹೊಣೆಗಾರಿಕೆಯಲ್ಲಿದ್ದೇನೆ’ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಜಿ. ಸತ್ಯವತಿ ತಿಳಿಸಿದರು.

ಇಲಾಖಾ ಪರೀಕ್ಷೆ ಮುಂದೂಡಿಕೆ
ಇದೇ 17ರಿಂದ ಆಗಸ್ಟ್‌ 11ರವರೆಗೆ ನಡೆಯಬೇಕಿದ್ದ 2020ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳನ್ನು ಕೆಪಿಎಸ್‌ಸಿ ತಾತ್ಕಾಲಿಕವಾಗಿ ಮುಂದೂಡಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಘೋಷಿಸಲಾಗಿದೆ. ನೌಕರರ ಆರೋಗ್ಯದ ಹಿತದೃಷ್ಟಿಯಿಂದ ಇಲಾಖಾ ಪರೀಕ್ಷೆಗಳನ್ನು ಮುಂದೂಡುವಂತೆ ಕೆಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ. ಹೀಗಾಗಿ, ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಮುಂದಿನ ದಿನಾಂಕವನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಜಿ. ಸತ್ಯವತಿ ತಿಳಿಸಿದರು.

*

ನೇಮಕಾತಿ ತಡೆ ಸುತ್ತೋಲೆಯ ಪ್ರತಿಯನ್ನು ವಾಟ್ಸ್‌ಆ್ಯಪ್‌ನಲ್ಲಿ ನಾನು ಕೂಡಾ ನೋಡಿದ್ದೇನೆ. ಈ ಬಗ್ಗೆ ವಿಶ್ಲೇಷಣೆ ಮಾಡಿ ಸಕಾಲದಲ್ಲಿ ಮಾಹಿತಿ ನೀಡುತ್ತೇನೆ.
-ಜಿ. ಸತ್ಯವತಿ, ಕಾರ್ಯದರ್ಶಿ ಕೆಪಿಎಸ್‌ಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.