ADVERTISEMENT

ಮರೆತೇ ಹೋಗಿದೆ 1,242 ಹುದ್ದೆ ಭರ್ತಿ

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಬೋಧಕರ ಕೊರತೆ l ಹೆಚ್ಚಿದ ಕಾರ್ಯಭಾರ

ಎಂ.ಜಿ.ಬಾಲಕೃಷ್ಣ
Published 29 ಜನವರಿ 2020, 20:00 IST
Last Updated 29 ಜನವರಿ 2020, 20:00 IST
ವಿಧಾನಸೌಧ
ವಿಧಾನಸೌಧ   

ಬೆಂಗಳೂರು: ರಾಜ್ಯದಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಇನ್ನೂ ಮನಸ್ಸು ಮಾಡದೆ ಇರುವುದರಿಂದ ಬೋಧಕರ ಕಾರ್ಯಭಾರ ಹೆಚ್ಚುವಂತಾಗಿದೆ.

ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಸೂಚನೆಯಂತೆ ಡಿಸೆಂಬರ್‌ ಅಂತ್ಯದೊಳಗೆ ಈ ನೇಮಕಾತಿ ಪ್ರಕ್ರಿಯೆ ಕೊನೆಗೊಳ್ಳಬೇಕಿತ್ತು. ಆದರೆ ಸರ್ಕಾರದಿಂದ ಇನ್ನೂ ಕರಡು ನಿಯಮ ರೂಪುಗೊಂಡಿಲ್ಲ.

ಖಾಲಿ ಇರುವ ಪ್ರಾಂಶುಪಾಲರ ಹುದ್ದೆಗಳನ್ನು ಎರಡು ಕಂತುಗಳಲ್ಲಿ ಭರ್ತಿ ಮಾಡುವ ಪ್ರಸ್ತಾವವೂ ಕಾರ್ಯಗತಗೊಂಡಿಲ್ಲ. ಹೀಗಾಗಿ ಬಡ್ತಿಯ ನಿರೀಕ್ಷೆ ಇಟ್ಟುಕೊಂಡಿದ್ದವರಿಗೂ ನಿರಾಸೆ ಕಾಡುತ್ತಿದೆ.

ADVERTISEMENT

ಬಹುತೇಕ ಕಡೆಗಳಲ್ಲಿ ಅತಿಥಿ ಉಪನ್ಯಾಸಕರ ಸೇವೆ ಪಡೆಯಲಾಗುತ್ತಿದ್ದು, ಕಾಯಂ ಉಪನ್ಯಾಸಕರಿಂದಲೂ ಅಧಿಕ ಅವಧಿಗೆ ಪಾಠ ಮಾಡಿಸುವ ಪರಿಪಾಠ ಇದೆ.

ಯುಜಿಸಿ ಮಾರ್ಗಸೂಚಿ ಪ್ರಕಾರ ಸಹಾಯಕ ಪ್ರಾಧ್ಯಾಪಕರಿಗೆ ವಾರಕ್ಕೆ 16 ಗಂಟೆ, ಸಹ ಪ್ರಾಧ್ಯಾಪಕರಿಗೆ 14 ಗಂಟೆ ಹಾಗೂ ಪ್ರಾಧ್ಯಾಪಕರಿಗೆ 12 ಗಂಟೆಯಷ್ಟೇ ಕೆಲಸ ಇರಬೇಕು ಎಂದು ತಿಳಿಸಲಾಗಿದೆ. ಆದರೆ ಸಹಾಯಕ ಪ್ರಾಧ್ಯಾಪಕರಿಂದ 20 ಗಂಟೆ, ಸಹ ಪ್ರಾಧ್ಯಾಪಕರಿಂದ 18ರಿಂದ 20 ಗಂಟೆ, ಪ್ರಾಧ್ಯಾಪಕರಿಂದ ಸದ್ಯ 16 ಗಂಟೆಗಳಷ್ಟು ಪಾಠ ಮಾಡಿಸಲಾಗುತ್ತಿದೆ. ಪ್ರಾಯೋಗಿಕ ತರಗತಿಯನ್ನೂ ಸೇರಿಸಿದರೆ ತರಗತಿ ಅವಧಿ ಇನ್ನಷ್ಟು ಹೆಚ್ಚುತ್ತದೆ.

‘ನೇಮಕಾತಿ ಮಾಡದೆ, ಕಾರ್ಮಿಕ ವರ್ಗದ ರೀತಿಯಲ್ಲಿ ಉಪನ್ಯಾಸಕರನ್ನು ದುಡಿಸುವುದರಿಂದ ಗುಣಮಟ್ಟ ಖಂಡಿತ ಕುಸಿಯುತ್ತದೆ. ಒಂದು ತರಗತಿ ತೆಗೆದುಕೊಳ್ಳಲು ಪದವಿ ಹಂತದಲ್ಲಿ ಕನಿಷ್ಠ 2 ಗಂಟೆ, ಸ್ನಾತಕೋತ್ತರ ಹಂತದಲ್ಲಿ ಕನಿಷ್ಠ 3 ಗಂಟೆಗಳ ತಯಾರಿ ಬೇಕಾಗುತ್ತದೆ’ ಎಂದು ಹಲವು ಉಪನ್ಯಾಸಕರು ತಮ್ಮ ಅಳಲು ತೋಡಿಕೊಂಡರು.

‘ಅತಿಥಿ ಉಪನ್ಯಾಸಕರನ್ನು ದೂರ ಇಟ್ಟು, ಇರುವ ಉಪನ್ಯಾಸಕರಿಂದಲೇ ಪಾಠ ಮಾಡಿಸುವ ಚಿಂತನೆ ಸರ್ಕಾರದ್ದು ಇದ್ದಂತಿದೆ. ಇದರಿಂದ ಅಧ್ಯಯನ, ಸಿದ್ಧತೆಗಳಿಗೆ ಬಹಳ ತೊಡಕು ಉಂಟಾಗುತ್ತದೆ. ಯುಜಿಸಿ ನಿಯಮವನ್ನು ಸಮರ್ಪಕವಾಗಿ ಜಾರಿಗೆ ತರಬೇಕು ಎಂದು ಒತ್ತಾಯಿಸುತ್ತಲೇ ಇದ್ದೇವೆ’ ಎಂದು ಕರ್ನಾಟಕ ಪ್ರಥಮದರ್ಜೆ ಕಾಲೇಜು ಶಿಕ್ಷಕರ ಸಂಘದ ಅಧ್ಯಕ್ಷ ಡಾ.ಟಿ.ಎಂ.ಮಂಜುನಾಥ್‌ ಹೇಳಿದರು.

‘ಕಾರ್ಯಭಾರದ ಸರ್ವೇ ಅದರ ಪಾಡಿಗೆ ನಡೆಯಲಿ, ಅದಕ್ಕೂ, ನೇಮಕಾತಿಗೂ ಸಂಬಂಧ ಕಲ್ಪಿಸಲಾಗದು,ಈಗಾಗಲೇ ಒಪ್ಪಿಗೆ ಪಡೆಯಲಾಗಿರುವ ಖಾಲಿ ಹುದ್ದೆಗಳನ್ನು ತುಂಬಿಸುವುದಕ್ಕೆ ಸರ್ಕಾರ ವಿಳಂಬ ಮಾಡಬಾರದು’ ಎಂದರು.

***

ಕರಡು ನೇಮಕಾತಿ ನಿಯಮಗಳಿಗೆ ಹಣಕಾಸು ಹಾಗೂ ಡಿಪಿಎಆರ್‌ ಇಲಾಖೆಗಳು ಅನುಮತಿ ನೀಡಿವೆ, ಸರ್ಕಾರ ಕರಡು ನಿಯಮ ಪ್ರಕಟಿಸಬೇಕಿದೆ

- ಡಾ.ಅನಿರುದ್ಧ್‌ ಶ್ರವಣ್‌, ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ

***

ಈ ಪ್ರಸ್ತಾವಕ್ಕೆ ಹಣಕಾಸು ಇಲಾಖೆ ಅನುಮತಿ ನೀಡಿದೆ, ಡಿಪಿಎಆರ್‌ ಇಲಾಖೆಯ ಅನುಮತಿ ದೊರೆತ ತಕ್ಷಣ ನೇಮಕಾತಿಗೆ ಚಾಲನೆ ನೀಡಲಾಗುವುದು

-ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಉನ್ನತ ಶಿಕ್ಷಣ ಸಚಿವ

***

40 ಸಾವಿರ ಗಂಟೆ:ಬೋಧಕರ ಕೊರತೆಯಿಂದ ಹೆಚ್ಚುವರಿ ಹೊರೆ

420:ಪ್ರಾಂಶುಪಾಲರ ಹುದ್ದೆ ಖಾಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.