ADVERTISEMENT

ರಾಜ್ಯೋತ್ಸವದ ಮಾದರಿ ‘ಕೆಂಪೇಗೌಡ ಪ್ರಶಸ್ತಿ’: ಡಿ.ಕೆ. ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 23:30 IST
Last Updated 2 ಜೂನ್ 2025, 23:30 IST
<div class="paragraphs"><p>ಡಿ.ಕೆ ಶಿವಕುಮಾರ್‌</p></div>

ಡಿ.ಕೆ ಶಿವಕುಮಾರ್‌

   

ಫೇಸ್‌ಬುಕ್‌ ಚಿತ್ರ

ಬೆಂಗಳೂರು: ರಾಜ್ಯೋತ್ಸವ ಪ್ರಶಸ್ತಿಯಂತೆ ಕ್ರೀಡೆ, ಸಾಹಿತ್ಯ, ಕಲೆ, ಪತ್ರಿಕೋದ್ಯಮ, ಕೈಗಾರಿಕೆ, ಪರಿಸರ ಸಂರಕ್ಷಣೆ ಸೇರಿ ಎಲ್ಲಾ ಕ್ಷೇತ್ರದ ಸಾಧಕರಿಗೆ ‘ಕೆಂಪೇಗೌಡ ಪ್ರಶಸ್ತಿ’ ನೀಡಲು ತೀರ್ಮಾನಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ADVERTISEMENT

ಕೆಂಪೇಗೌಡ ಜಯಂತಿ ಆಚರಣೆಯ ಸಿದ್ಧತೆಗಾಗಿ ಸೋಮವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ನಂತರ ಅವರು ಮಾತನಾಡಿದರು.

ಕೆಂಪೇಗೌಡರ ಜನ್ಮದಿನವಾದ ಜೂನ್‌ 27ರಂದು ಸಂಜೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಬೇಕಿತ್ತು. ವಾರ್ಡ್ ಮಟ್ಟಕ್ಕೆ ಸೀಮಿತಗೊಳಿಸುವುದು ಬೇಡ ಎಂದು ನಿರ್ಧರಿಸಿ, ಮಾರ್ಗಸೂಚಿ ನಿಗದಿ ಮಾಡಲು ಸೂಚಿಸಲಾಗಿದೆ. ಪ್ರಶಸ್ತಿ ಪಟ್ಟಿ ಸಿದ್ಧಪಡಿಸಲು ಆಯ್ಕೆ ಸಮಿತಿ ರಚಿಸಲಾಗುವುದು ಎಂದರು.

ಕೆಂಪೇಗೌಡ ಜಯಂತಿ ದಿನದಂದೇ ‘ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ’ದ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು.  ಪ್ರಾಧಿಕಾರಕ್ಕೆ ಸುಮನಹಳ್ಳಿ ಬಳಿ ಐದು ಎಕರೆ ಜಾಗವನ್ನು ನಿಗದಿ ಮಾಡಲಾಗಿದೆ. ಕಟ್ಟಡದ ವಾಸ್ತುಶಿಲ್ಪಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಈ ವರ್ಷವೂ ಕೆಂಪೇಗೌಡರ ಗೋಪುರಗಳಿಂದ ಜ್ಯೋತಿ ಬರಲಿದ್ದು, ಪ್ರತಿ ಗೋಪುರಕ್ಕೂ ಒಬ್ಬ ಶಾಸಕರಿಗೆ ಜವಾಬ್ದಾರಿ ನೀಡಲಾಗಿದೆ. 27ರಂದು ಬೆಳಿಗ್ಗೆ ಬಾಬು ಜಗಜೀವನ್ ರಾಮ್‌ ಭವನದಲ್ಲಿ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಆಚರಿಸಲಾಗುವುದು ಎಂದು ಮಾಹಿತಿ ನೀಡಿದರು.

ಕೆಂಪೇಗೌಡ ಪ್ರಾಧಿಕಾರದಿಂದ ಮೈಸೂರು ದಸರಾಕ್ಕೆ ಪ್ರತಿ ವರ್ಷ ಒಂದು ಸ್ಥಬ್ಧಚಿತ್ರ ಕಳುಹಿಸಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬೆಂಗಳೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಕೆಂಪೇಗೌಡ ಜಯಂತಿ ಆಚರಿಸಲು ಆರ್ಥಿಕ ನೆರವು ನೀಡಲಾಗುವುದು. ಶಾಲೆಗಳಲ್ಲಿ ಚರ್ಚಾಸ್ಪರ್ಧೆ ಏರ್ಪಡಿಸಲಾಗುವುದು. ಆ ಮೂಲಕ ಬೆಂಗಳೂರು ಹಾಗೂ ಕೆಂಪೇಗೌಡರ ಇತಿಹಾಸದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲಾಗುವುದು ಎಂದರು.

ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗ ವಿಮಾನನಿಲ್ದಾಣದ ಬಳಿ ಪ್ರತಿಮೆ ಸ್ಥಾಪಿಸಿದರು. ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಿ ಕಾರ್ಯಕ್ರಮ ಮಾಡಿದರು. ಗುತ್ತಿಗೆದಾರರಿಗೆ ಹಣವನ್ನೇ ನೀಡಿರಲಿಲ್ಲ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.