ADVERTISEMENT

ವಿದ್ಯುತ್‌ ದರ ಇಳಿಕೆಗೆ ಚಿಂತನೆ: ಸಚಿವ ವಿ. ಸುನಿಲ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 1:10 IST
Last Updated 3 ಡಿಸೆಂಬರ್ 2022, 1:10 IST
   

ಬೆಂಗಳೂರು: ಗೃಹ ಬಳಕೆಯೂ ಸೇರಿ ದಂತೆ ಎಲ್ಲ ಬಗೆಯ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ವಿದ್ಯುತ್‌ ದರ ಕಡಿತಗೊಳಿಸಲು ಚಿಂತನೆ ನಡೆದಿದೆ.

ಇದಕ್ಕಾಗಿ ಬಳಕೆದಾರರ ಶುಲ್ಕ ಕಡಿಮೆ ಮಾಡುವ ಉದ್ದೇಶವಿದ್ದು, ಪ್ರತಿ ಯುನಿಟ್‌ಗೆ 70 ಪೈಸೆಯಿಂದ ₹2 ರವರೆಗೂ ಇಳಿಕೆಯಾಗುವ ನಿರೀಕ್ಷೆ ಇದೆ. ಹೊಸ ವರ್ಷಕ್ಕೆ ಮುನ್ನವೇ ದರ ಇಳಿಕೆಯಾಗಲಿದೆ. ಸಚಿವ ವಿ. ಸುನಿಲ್‌ ಕುಮಾರ್‌ ಅವರ ಸೂಚನೆಯ ಮೇರೆಗೆ ಇಂಧನ ಇಲಾಖೆ ಈ ಬಗ್ಗೆಪ್ರಸ್ತಾವ ಸಿದ್ಧ ಪಡಿಸಿದೆ.

ವಾರ್ಷಿಕ ದರ ಪರಿಷ್ಕರಣೆಯ ಸಂದ ರ್ಭದಲ್ಲಿ ವಿದ್ಯುತ್ ಶುಲ್ಕ ಹೆಚ್ಚಳದಿಂದ ಗ್ರಾಹಕರಿಗೆ ಹೊರೆಯಾಗುತ್ತಿದೆ. ಹೀಗಾಗಿ, ಎಲ್ಲ ವಿದ್ಯುತ್‌ ಸರಬರಾಜು ಕಂಪನಿಗಳಿಂದ ಕೆಇಆರ್‌ಸಿಗೆ ಸಲ್ಲಿಸುವ ಪ್ರಸ್ತಾವದಲ್ಲಿಯೇ ಬಳಕೆದಾರರ ಶುಲ್ಕ ಕಡಿಮೆ ಮಾಡಿ ದರ ಪಟ್ಟಿ ಸಲ್ಲಿಸುವಂತೆ ಸೂಚಿಸಲಾಗಿದೆ.

ADVERTISEMENT

ಈ ಪ್ರಸ್ತಾವ ಗೃಹ ಬಳಕೆ ಗ್ರಾಹಕರ ಜತೆಗೆ ಎಚ್‌ಟಿ, ಕೈಗಾರಿಕೆ, ವಾಣಿಜ್ಯ ಮತ್ತು ಎಲ್‌ಟಿ ಗ್ರಾಹಕರಿಗೂ ಅನ್ವಯವಾಗಲಿದೆ. ವಾಣಿಜ್ಯ ಬಳಕೆದಾರರಿಗೆ ವಿಧಿಸಿದ್ದ ‘ಕ್ರಾಸ್ ಸಬ್ಸಿಡಿ’ ಸಡಿಲಿಸಲು ಬೆಸ್ಕಾಂ ವ್ಯಾಪ್ತಿಯಲ್ಲಿ ಹೊಸ ಪ್ರಸ್ತಾವ ಸಲ್ಲಿಕೆಯಾಗಿದ್ದು, ಪ್ರತ್ಯೇಕ ಶುಲ್ಕ ಪದ್ಧತಿ ಪ್ರಸ್ತಾಪಿಸಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಹಕರಿಗೆ ಬಳಕೆದಾರರ ಶುಲ್ಕದಲ್ಲಿ 25 ಪೈಸೆಯಷ್ಟು ರಿಯಾಯಿತಿ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ.

ಎಚ್‌ಟಿ ಗ್ರಾಹಕರಿಗೆ ಸಮಯಾ ಧಾರಿತ ಶುಲ್ಕ ವ್ಯವಸ್ಥೆ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ದಿನದಲ್ಲಿ 11 ಗಂಟೆ ವಿದ್ಯುತ್ ಬಳಕೆದಾರರ ಶುಲ್ಕದಲ್ಲಿ ಕಡಿತ ಮಾಡಿ ಹೆಚ್ಚಿನ ರಿಯಾಯಿತಿ ಕಲ್ಪಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಪ್ರತಿ ಯುನಿಟ್‌ಗೆ ಈ ಮೊದಲು ವಿಧಿಸುತ್ತಿದ್ದ ₹6.60 ಬಳಕೆದಾರರ ಶುಲ್ಕ ಹೊಸ ಪ್ರಸ್ತಾವದಿಂದ ಇಳಿಕೆಯಾಗುವ ಸಾಧ್ಯತೆ ಇದೆ. 75 ಪೈಸೆವರೆಗೆ ರಿಯಾಯಿತಿ ದೊರೆಯುವ ಸಂಭವ ಇದೆ.

ಶುಲ್ಕ ಇಳಿಕೆಗೆ ಕ್ರಮ: ಸುನಿಲ್‌ ಕುಮಾರ್

‘ಅನಗತ್ಯ ವೆಚ್ಚಗಳಿಗೆ ಕಡಿವಾಣ ಹೇರಿ ಗ್ರಾಹಕ ಸ್ನೇಹಿಯಾಗುವ ಮೂಲಕ ರಾಜ್ಯ ಸರ್ಕಾರ ಇನ್ನಷ್ಟು ಜನಪರವಾಗಲಿದೆ. ಬಳಕೆದಾರರ ಶುಲ್ಕ ಇಳಿಕೆಗೆ ಚಿಂತನೆ ನಡೆದಿದೆ’ ಎಂದು ಅವರು ಹೇಳಿದ್ದಾರೆ.

***

ಈ ಬಾರಿ ವಿದ್ಯುತ್ ಶುಲ್ಕ ಪರಿಷ್ಕರಣೆ ಸಂದರ್ಭದಲ್ಲಿ ಜನಪರ ನಿಲುವು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ

- ವಿ. ಸುನಿಲ್ ಕುಮಾರ್, ಇಂಧನ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.