
ಸುವರ್ಣ ವಿಧಾನಸೌಧ (ಬೆಳಗಾವಿ): ಸರ್ಕಾರಿ ಶಾಲೆಗಳಿಗೆ ಮುಂದಿನ ಶೈಕ್ಷಣಿಕ ವರ್ಷದ ವೇಳೆಗೆ 20 ಸಾವಿರಕ್ಕೂ ಹೆಚ್ಚು ಕಾಯಂ ಶಿಕ್ಷಕರನ್ನು ನೇಮಕ ಮಾಡಲಾಗುವುದು. ಅದೇ ಅಧಿಸೂಚನೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಕ್ಕೂ ಆದ್ಯತೆ ನೀಡಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಶೂನ್ಯ ವೇಳೆಯಲ್ಲಿ ಬಿಜೆಪಿಯ ಶಶೀಲ್ ನಮೋಶಿ ಅವರ ಪ್ರಸ್ತಾವಕ್ಕೆ ಉತ್ತರ ನೀಡಿದ ಅವರು, ‘ಈಗಾಗಲೇ ಕಲ್ಯಾಣ ಕರ್ನಾಟಕಕ್ಕೆ ಸುಮಾರು 5,000 ಶಿಕ್ಷಕರ ನೇಮಕ್ಕೆ ಕ್ರಮ ಕೈಗೊಳ್ಳಲಾಗಿದೆ. ಒಳಮೀಸಲಾತಿ ಜಾರಿಗಾಗಿ ಪ್ರಕ್ರಿಯೆ ವಿಳಂಬವಾಗಿತ್ತು. ಕಲ್ಯಾಣ ಕರ್ನಾಕದ ನೇಮಕಾತಿಯಲ್ಲೂ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಕ್ಕೆ ಆದ್ಯತೆ ನೀಡಲಾಗುವುದು’ ಎಂದರು.
‘ಎರಡು ದಶಕಗಳಿಂದ ಶಾಲೆಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕ ಮಾಡದ ಕಾರಣ ಮಕ್ಕಳ ಕ್ರೀಡಾ ಚಟುವಟಿಕೆಗಳಿಗೆ, ದೈಹಿಕ ಶಿಕ್ಷಣ ಪಾಠಗಳ ಬೋಧನೆಗೆ ಅಡ್ಡಿಯಾಗಿದೆ. ಪದವಿ ಪಡೆದವರು ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಶಿಕ್ಷಕರ ನೇಮಕಾತಿ ವೇಳೆ ಅಗತ್ಯವಿರುವ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು’ ಎಂದು ನಮೋಶಿ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.