ADVERTISEMENT

ನಬಾರ್ಡ್‌ನ ಹೆಚ್ಚುವರಿ ಬಡ್ಡಿ ಸರ್ಕಾರ ಭರಿಸಲಿ: ಪರಿಷತ್‌ ಸದಸ್ಯ ದಿನೇಶ್ ಗೂಳಿಗೌಡ

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 15:38 IST
Last Updated 1 ಜೂನ್ 2025, 15:38 IST
ದಿನೇಶ್‌ ಗೂಳಿಗೌಡ
ದಿನೇಶ್‌ ಗೂಳಿಗೌಡ   

ಬೆಂಗಳೂರು: ‘ನಬಾರ್ಡ್ ಕೇಳುತ್ತಿರುವ ಹೆಚ್ಚುವರಿ ಬಡ್ಡಿಯನ್ನು ಅಪೆಕ್ಸ್ ಬ್ಯಾಂಕ್ ಪರವಾಗಿ ರಾಜ್ಯ ಸರ್ಕಾರ ಭರಿಸಿ, ರಾಜ್ಯದಲ್ಲಿ ಆಹಾರ ಧಾನ್ಯ ಉತ್ಪಾದನೆಯ ಗುರಿ ತಲುಪಲು ನೆರವಾಗಬೇಕು’ ಎಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಅವರಿಗೆ ವಿಧಾನ ಪರಿಷತ್‌ ಸದಸ್ಯ ದಿನೇಶ್ ಗೂಳಿಗೌಡ ಪತ್ರ ಬರೆದಿದ್ದಾರೆ.

‘ಪ್ರಸಕ್ತ ವರ್ಷ 37 ಲಕ್ಷ ರೈತರಿಗೆ ₹ 28 ಸಾವಿರ ಕೋಟಿ ಸಾಲ ವಿತರಿಸುವ ಗುರಿಯನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. ನಬಾರ್ಡ್ ನಿಗದಿಪಡಿಸಿರುವುದಕ್ಕಿಂತ ಹೆಚ್ಚುವರಿ ಸಾಲವನ್ನು ಅಪೆಕ್ಸ್ ಬ್ಯಾಂಕ್ ಪಡೆಯಬೇಕಿದ್ದರೆ ಹೆಚ್ಚುವರಿಯಾಗಿ ಶೇಕಡ 4ರಷ್ಟು ಬಡ್ಡಿ ಭರಿಸಬೇಕಿದೆ. ಅಪೆಕ್ಸ್ ಬ್ಯಾಂಕ್‌ನ ಮೇಲೆ ಬೀಳುವ ಹೆಚ್ಚುವರಿ ಹೊರೆಯನ್ನು ರಾಜ್ಯ ಸರ್ಕಾರ ಭರಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

‘ಕಳೆದ ಸಾಲಿನಲ್ಲಿ ಅಪೆಕ್ಸ್ ಬ್ಯಾಂಕ್‌ಗೆ ನಬಾರ್ಡ್ ಶೇ 4‌ರ ಬಡ್ಡಿ ದರದಲ್ಲಿ ₹ 5,450 ಕೋಟಿ ಸಾಲ ನೀಡಿತ್ತು. ಈ ಬಾರಿ ಶೇ 4ರ ಬಡ್ಡಿಯಲ್ಲಿ ನೀಡುವ ಸಾಲದ ಪ್ರಮಾಣವನ್ನು ₹ 2,700 ಕೋಟಿಗೆ ಸೀಮಿತಗೊಳಿಸಿದೆ. ಹೆಚ್ಚುವರಿ ಸಾಲ ನೀಡಲು ನಬಾರ್ಡ್ ಸಿದ್ಧವಿದ್ದರೂ ಅದಕ್ಕೆ ಶೇ 8.25 ರಷ್ಟು (ಶೇ 4.25 ಹೆಚ್ಚುವರಿ) ಬಡ್ಡಿ ನೀಡಬೇಕೆಂದು ಹೇಳುತ್ತಿದೆ. ಹೆಚ್ಚುವರಿ ಬಡ್ಡಿ ನೀಡಿ ಸಾಲ ಪಡೆಯದಿದ್ದರೆ ಅಪೆಕ್ಸ್, ಡಿಸಿಸಿ ಬ್ಯಾಂಕ್‌ಗಳು ಹಾಗೂ ಆ ಮೂಲಕ, ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ’ ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

‘ಮುಂಗಾರು ಹಂಗಾಮಿನಲ್ಲಿ 114.40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. 5.99 ಲಕ್ಷ ಕ್ವಿಂಟಲ್‌ ಬಿತ್ತನೆ ಬೀಜ, 26.77 ಲಕ್ಷ ಟನ್ ರಸಗೊಬ್ಬರಗಳ ಬೇಡಿಕೆಯಿದೆ. ಕೃಷಿ ಇಲಾಖೆ ಬಿತ್ತನೆಯ ಗುರಿ ಮುಟ್ಟಬೇಕಾದರೆ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಕಾಲದಲ್ಲಿ ಸಾಲ ಸೌಲಭ್ಯ ಒದಗಿಸಬೇಕಿದೆ’ ಎಂದೂ ‌ಹೇಳಿದ್ದಾರೆ.

‘ಸ್ವಸಹಾಯ ಸಂಘಗಳಿಗೆ ₹ 3 ಲಕ್ಷದವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಪಡೆಯಲು ಪೋರ್ಟಲ್‌ನಲ್ಲಿ ನೋಂದಣಿ ಮಾಡಬೇಕೆಂಬ ‌ನಿಯಮವನ್ನೂ ಸರಳೀಕರಿಸಬೇಕು’ ಎಂದೂ ಅವರು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.