ADVERTISEMENT

ಸಾಮರಸ್ಯ ಕಾಪಾಡಲು ಸರ್ಕಾರ ಮುಂದಾಗಬೇಕು: ಎಚ್.ವಿಶ್ವನಾಥ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2022, 8:53 IST
Last Updated 31 ಮಾರ್ಚ್ 2022, 8:53 IST
ಎಚ್.ವಿಶ್ವನಾಥ
ಎಚ್.ವಿಶ್ವನಾಥ   

ನವದೆಹಲಿ: ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ‌ ಇದೆ. ಆರ್ ಎಸ್ ಎಸ್,‌ ಬಜರಂಗದಳ ಅಥವಾ ವಿಶ್ವ ಹಿಂದೂ ಪರಿಷತ್ ನೇತೃತ್ವದ ಸರ್ಕಾರವಲ್ಲ.‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೋಮು ಸಾಮರಸ್ಯ ಕಾಪಾಡುವತ್ತ ಕ್ರಮ ಕೈಗೊಳ್ಳುವ ಮೂಲಕ ತಮ್ಮದು ಸ್ವತಂತ್ರ ಸರ್ಕಾರ ಎಂಬುದನ್ನು ಸಾಬೀತುಪಡಿಸಬೇಕು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ ಸಲಹೆ ನೀಡಿದರು.

ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ‌ ಅವರು, ಹಿಜಾಬ್, ಹಲಾಲ್, ಟಿಪ್ಪು ಸುಲ್ತಾನ್ ಮತ್ತಿತರ ಸೂಕ್ಷ್ಮ ವಿಷಯಗಳ ಕುರಿತು ಜನರನ್ನು ಇಬ್ಭಾಗ ಮಾಡದೇ‌, ಎಲ್ಲರನ್ನೂ ಒಂದುಗೂಡಿಸುವತ್ತ ಸರ್ಕಾರ ಮುಂದಾಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಈ ರೀತಿಯ ಒಡೆದಾಳುವ ನೀತಿಯನ್ನು ಅನುಸರಿಸಿರಲಿಲ್ಲ. ಬೊಮ್ಮಾಯಿ ಆಡಳಿತದಲ್ಲಿ ಈ ರೀತಿಯ ನಿಲುವು ಸರ್ಕಾರದ ಹೆಸರು ಕೆಡಿಸುತ್ತಿದೆ. ಯಡಿಯೂರಪ್ಪ ಅವರು ಕೂಡಲೇ ಮಧ್ಯ ಪ್ರವೇಶಿಸುವ ಮೂಲಕ ಪರಿಸ್ಥಿತಿ ಸರಿಪಡಿಸಬೇಕು ಎಂದು ಅವರು ಮನವಿ ಮಾಡಿದರು.

ADVERTISEMENT

ಕರ್ನಾಟಕದಲ್ಲಿ ಈಗಿನ ಬೆಳವಣಿಗೆಗಳು ತೀವ್ರ ಆತಂಕ ಉಂಟುಮಾಡುತ್ತಿವೆ. ಪ್ರಮುಖ ನಾಯಕರೇ ಜಾತಿ, ಧರ್ಮದ ಬಗ್ಗೆ ಮಾತನಾಡುತ್ತಿದ್ದಾರೆ. ಕೆಲವರು ಬ್ರಾಹ್ಮಣರ ಬಗ್ಗೆ ವಿಧಾನಸಭೆಯಲ್ಲೂ ಟೀಕೆ ಮಾಡುತ್ತಾರೆ. 43 ವರ್ಷ ಕಾಲ ಬ್ರಾಹ್ಮಣ ಸಮುದಾಯವರು ಪ್ರಧಾನಿ ಆಗಿದ್ದರು. ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಪಿ.ವಿ. ನರಸಿಂಹರಾವ್ ಅವರು ಬ್ರಾಹ್ಮಣ ಸಮುದಾಯದವರೇ ಆಗಿದ್ದರು ಎಂದು ಅವರು, ಸಿದ್ದರಾಮಯ್ಯ ಅವರ ಹೇಳಿಕೆಗೆ‌ ತಿರುಗೇಟು ನೀಡಿದರು.

ಯಾವುದೇ ಸಮುದಾಯದ ಬಗ್ಗೆ ಕೇವಲವಾಗಿ ಮಾತನಾಡಬಾರದು ಎಂದ ಅವರು, ಪ್ರಧಾನಿ ಹುದ್ದೆಯಲ್ಲಿ ಇರುವವರ ಬಗ್ಗೆ‌ ಗೌರವದಿಂದ ಮಾತನಾಡುವುದನ್ನು ಕಲಿಯಬೇಕು‌ ಎಂದು ವಿಶ್ವನಾಥ ಹೇಳಿದರು.

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಗೆ ರೋಹಿತ್ ಚಕ್ರತೀರ್ಥ ಅವರನ್ನು ನೇಮಿಸಿದೆ. ಅವರ ಯಾವ ಅರ್ಹತೆ ನೋಡಿ ನೇಮಿಸಲಾಯಿತು. ಶಿಕ್ಷಣ ಸಚಿವರು ಈ ಬಗ್ಗೆ ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರ ಎಂಬುದರಲ್ಲಿ ಸಂಶಯವಿಲ್ಲ. ಯಾರು ಏನೇ ಹೇಳಿದರೂ ಇತಿಹಾಸವನ್ನು ಮರೆಮಾಚಲು ಆಗದು ಎಂದು ಅವರು ವಿವರಿಸಿದರು.

ಹಲಾಲ್ ಮತ್ತು ದೇವಸ್ಥಾನಗಳ ಎದುರು ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸುವ ನಿರ್ಧಾರ ಸರ್ಕಾರದ್ದಲ್ಲ. ಆದರೂ ಈ ಬಗ್ಗೆ ಸರ್ಕಾರ ಮೌನ ವಹಿಸದೆ ಸೂಕ್ತ ನಿಲುವು ಪ್ರಕಟಿಸಬೇಕು ಎಂದು ಅವರು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.