ADVERTISEMENT

ಇನ್ನು ಮಹಿಳೆಗೆ ‘ಸಾಂತ್ವನ’ ಇಲ್ಲ, ‘ಮಾತೃಶ್ರೀ’ ಮಾಯ

ಆರ್ಥಿಕ ಬಿಕ್ಕಟ್ಟು: ಅನುದಾನ ಬಿಡುಗಡೆಗೆ ಹಣಕಾಸು ಇಲಾಖೆ ತಡೆ

​ಪ್ರಜಾವಾಣಿ ವಾರ್ತೆ
Published 15 ಮೇ 2020, 20:00 IST
Last Updated 15 ಮೇ 2020, 20:00 IST
ವಿಧಾನಸೌಧ
ವಿಧಾನಸೌಧ   

ಬೆಂಗಳೂರು: ಕೋವಿಡ್‌–19 ಹಿನ್ನೆಲೆಯಲ್ಲಿ ಹೇರಿರುವ ಲಾಕ್‌ಡೌನ್‌ನಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರ್ಕಾರ, ಎಲ್ಲ ತಾಲ್ಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸಾಂತ್ವನ ಕೇಂದ್ರಗಳಿಗೆ ಅನುದಾನ ನೀಡುವುದನ್ನು ರದ್ದುಪಡಿಸಿದೆ. ಜತೆಗೆ ಬಡ ಗರ್ಭಿಣಿಯರಿಗೆ, ಬಾಣಂತಿಯರಿಗೆ ನೆರವಾಗುತ್ತಿದ್ದ ‘ಮಾತೃಶ್ರೀ’ ಯೋಜನೆಯನ್ನೂ ಸ್ಥಗಿತಗೊಳಿಸಿದೆ.

‘ರಾಜ್ಯದಲ್ಲಿರುವ 192 ಸಾಂತ್ವನ ಕೇಂದ್ರಗಳನ್ನು ಮುಚ್ಚಿಲ್ಲ. ಸರ್ಕಾರೇತರ ಸಂಸ್ಥೆಗಳು ಅವುಗಳನ್ನು ಮುನ್ನಡೆಸಬಹುದು. ಆರ್ಥಿಕ ಬಿಕ್ಕಟ್ಟಿನ ಕಾರಣಕ್ಕೆ ಈ ಕೇಂದ್ರಗಳಿಗೆ ಅನುದಾನ ಬಿಡುಗಡೆ ಮಾಡುವುದನ್ನು ಸದ್ಯ ತಡೆ ಹಿಡಿಯಲಾಗಿದೆ ಅಷ್ಟೇ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕ ಕೆ.ಎ.ದಯಾನಂದ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಹಿಳೆಯರ ಸಾಂತ್ವನಕ್ಕೆ ಈಗಲೂ ಅವಕಾಶ ಇದ್ದೇ ಇದೆ. ಕೇಂದ್ರ ಸರ್ಕಾರದ ‘ಸಖಿ’ ಆಪ್ತ ಸಮಾಲೋಚನಾ ಕೇಂದ್ರ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಸ್ವಾಧಾರ, ಉಜ್ವಲ ಯೋಜನೆಗಳು ಇರುವುದೂ ಇದೇ ಉದ್ದೇಶಕ್ಕೆ’ ಎಂದು ಅವರು ಹೇಳಿದರು.

ADVERTISEMENT

2001ರಲ್ಲಿ ಮಹಿಳಾ ಸಾಂತ್ವನ ಕೇಂದ್ರಗಳು ಆರಂಭವಾಗಿದ್ದವು. ವರದಕ್ಷಿಣೆ ಕಿರುಕುಳ, ಅತ್ಯಾಚಾರ, ಕೌಟುಂಬಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಇಲ್ಲಿ ಸಾಂತ್ವನ, ಆಪ್ತ ಸಮಾಲೋಚನೆ, ತಾತ್ಕಾಲಿಕ ಆಸರೆ ನೀಡಲಾಗುತ್ತಿತ್ತು. ರಾಜ್ಯ ಸರ್ಕಾರ ಪ್ರತಿ ವರ್ಷ ₹ 10 ಕೋಟಿ ಅನುದಾನ ನೀಡುತ್ತಿತ್ತು. ಒಂದೊಂದು ಕೇಂದ್ರದಲ್ಲಿ 2ರಿಂದ 5 ಮಂದಿ ಕೆಲಸ ಮಾಡುತ್ತಿದ್ದಾರೆ.

ಮಾತೃಶ್ರೀಗೆ ಇತಿಶ್ರೀ: ಕೇಂದ್ರ ಪುರಸ್ಕೃತ ಯೋಜನೆಯಾದ ಮಾತೃ ವಂದನಾ ಯೋಜನೆಯಡಿ ಗರ್ಭಿಣಿ, ಬಾಣಂತಿಯರಿಗೆ ₹5,000 ಕೇಂದ್ರ ಮತ್ತು ರಾಜ್ಯ ಸರ್ಕಾರ 60:40 ರ ಅನುಪಾತದಲ್ಲಿ ನೀಡಲಾಗುತ್ತದೆ. ಇದರ ಜತೆಗೆ ಪೂರಕ ಪೌಷ್ಟಿಕ ಆಹಾರ ನೀಡುವ ಮಾತೃಪೂರ್ಣ ಯೋಜನೆಯೂ ಜಾರಿಯಲ್ಲಿರುವುದರಿಂದ 2020–21 ನೇ ಸಾಲಿನಿಂದ ಮಾತೃಶ್ರೀ ಯೋಜನೆಯನ್ನು ನಿಲ್ಲಿಸಲು ಸರ್ಕಾರ ತೀರ್ಮಾನಿಸಿದೆ.

2018ರಲ್ಲಿ ಈ ಯೋಜನೆ ಆರಂಭಗೊಂಡಿತ್ತು. ಇದರ ಅನುಷ್ಠಾನ ಹೊಣೆಯನ್ನೂ ಮಹಿಳಾ ಸಾಂತ್ವನ ಕೇಂದ್ರಗಳಿಗೆ ವಹಿಸಲಾಗಿತ್ತು. ಮಾತೃವಂದನಾ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಮತ್ತೆ ₹ 6 ಸಾವಿರ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಯೋಜನೆಯನ್ನೇ ಕೈಬಿಡಲಾಗಿದೆ.

ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರನ್ನು ಸಂಪರ್ಕಿಸಲು ಯತ್ನಿಸಿದರೂ ಅವರು ಸಿಗಲಿಲ್ಲ.

‘ಭಾಗ್ಯಲಕ್ಷ್ಮಿ’ಯಿಂದ ಎಲ್‌ಐಸಿ ಹೊರಕ್ಕೆ

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನೆಚ್ಚಿನ ಯೋಜನೆಯಾದ ‘ಭಾಗ್ಯಲಕ್ಷ್ಮಿ’ಗೆ 2020–21 ನೇ ಸಾಲಿನಿಂದ ಭಾರತೀಯ ಜೀವ ವಿಮಾ ನಿಗಮದ ಬದಲು ಅಂಚೆ ಇಲಾಖೆಯನ್ನೇ ಏಜೆನ್ಸಿಯಾಗಿಸಲುಸರ್ಕಾರ ತೀರ್ಮಾನಿಸಿದೆ. ಈ ಸಂಬಂಧ ಹಣಕಾಸು ಇಲಾಖೆ ಆದೇಶವೊಂದನ್ನು ಹೊರಡಿಸಿದ್ದು, ಯೋಜನೆಯನ್ನು ಮರು ವಿನ್ಯಾಸಗೊಳಿಸಿ ಜಾರಿಗೆ ತರಲಿದೆ. ಇದರಿಂದ ಫಲಾನುಭವಿಗಳಿಗೆ ಸರ್ಕಾರ ಭರವಸೆ ನೀಡಿದಂತೆ ₹1 ಲಕ್ಷ ಸಿಗಲಿದೆ. ಸರ್ಕಾರಕ್ಕೂ ಹಣ ಉಳಿತಾಯವಾಗುತ್ತದೆ.

‘ಎಲ್‌ಐಸಿ ಈ ಹಿಂದೆ ಒಪ್ಪಂದ ಮಾಡಿಕೊಂಡಂತೆ ಬಾಂಡ್‌ ಅವಧಿ ಮುಕ್ತಾಯವಾದ ಬಳಿಕ ₹1 ಲಕ್ಷ ನೀಡಲು ತಕರಾರು ಮಾಡುತ್ತಲೇ ಇತ್ತು. ಬಡ್ಡಿ ದರ ಕಡಿಮೆ ಇರುವುದರಿಂದ ಕಡಿಮೆ ಬೀಳುವ ಮೊತ್ತವನ್ನು ಸರ್ಕಾರವೇ ಭರಿಸಿಕೊಡಬೇಕು ಎಂದು ಒತ್ತಾಯಿಸಿತ್ತು. ಆ ಕಾರಣಕ್ಕೆ ಭಾಗ್ಯಲಕ್ಷ್ಮಿ ಯೋಜನೆಯನ್ನು ಸುಕನ್ಯಾ ಸಮೃದ್ಧಿಗೆ ವರ್ಗಾಯಿಸಲಿದ್ದೇವೆ. ಎಲ್ಐಸಿ ಬೇಡಿಕೆ ಈಡೇರಿಸಲು ಹೊರಟರೆ ರಾಜ್ಯ ಸರ್ಕಾರ ₹2,000 ಕೋಟಿಗೂ ಹೆಚ್ಚು ಹಣ ತುಂಬಿ ಕೊಡಬೇಕಾಗುತ್ತದೆ’ ಎಂದು ಕೆ.ಎ.ದಯಾನಂದ ತಿಳಿಸಿದರು.

***

ಲಾಕ್‌ಡೌನ್‌ ಕಾಲದಲ್ಲಿ ಸಾಂತ್ವನ ಕೇಂದ್ರ ಮುಚ್ಚಿ, ಮದ್ಯದಂಗಡಿ ತೆರೆದು ದೌರ್ಜನ್ಯ ಹೆಚ್ಚಳಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದು ಖಂಡನೀಯ
- ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.