ADVERTISEMENT

ರೈತರ ಮೇಲೆ ಸೇಡು ತೀರಿಸಿಕೊಳ್ಳುವ ಯತ್ನ: ಬಡಗಲಪುರ ನಾಗೇಂದ್ರ

ರಾಕೇಶ್‌ ಟಿಕಾಯತ್ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 31 ಮೇ 2022, 19:43 IST
Last Updated 31 ಮೇ 2022, 19:43 IST
ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಚುಕ್ಕಿ ನಂಜುಂಡಸ್ವಾಮಿ, ಎಸ್.ಆರ್.ಹಿರೇಮಠ, ಬಡಗಲಪುರ ನಾಗೇಂದ್ರ, ಬಯ್ಯಾರೆಡ್ಡಿ, ಗುರುಪ್ರಸಾದ್ ಕೆರಗೋಡು, ಬಿ.ಆರ್.ಪಾಟೀಲ ಪಾಲ್ಗೊಂಡಿದ್ದರು
ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಚುಕ್ಕಿ ನಂಜುಂಡಸ್ವಾಮಿ, ಎಸ್.ಆರ್.ಹಿರೇಮಠ, ಬಡಗಲಪುರ ನಾಗೇಂದ್ರ, ಬಯ್ಯಾರೆಡ್ಡಿ, ಗುರುಪ್ರಸಾದ್ ಕೆರಗೋಡು, ಬಿ.ಆರ್.ಪಾಟೀಲ ಪಾಲ್ಗೊಂಡಿದ್ದರು   

ಬೆಂಗಳೂರು: ‘ದೆಹಲಿಯಲ್ಲಿ ರೈತರು ನಡೆಸಿದ ಹೋರಾಟಕ್ಕೆ ಮುಂಡಿ
ಯೂರಿದ್ದ ಬಿಜೆಪಿ ಸರ್ಕಾರ, ‌ಸೇಡು ತೀರಿಸಿಕೊಳ್ಳಲು ಹೋರಾಟಗಾರ ರಾಕೇಶ್ ಟಿಕಾಯತ್ ಅವರ ಮೇಲೆ ಮಸಿ ಬಳಿಸಿದೆ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ರೈತ ಹೋರಾಟಗಾರ ರಾಕೇಶ್‌ ಟಿಕಾಯತ್ ಅವರ ಮೇಲಿನ ಹಲ್ಲೆ ಖಂಡಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಯಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ರೈತರ ಹೋರಾಟ ಮುಗಿಸಲು ಬಿಜೆಪಿ ವ್ಯವಸ್ಥಿತ ಸಂಚು ರೂಪಿಸುತ್ತಿದೆ. ಟಿಕಾಯತ್ ಮೇಲಿನ ಮಸಿ ದಾಳಿ ಅದರ ಒಂದು ಭಾಗ. ಬಿಜೆಪಿ ಸಂಚಿಗೆ ರೈತ ಹೋರಾಟ ಬಗ್ಗುವುದಿಲ್ಲ’ ಎಂದರು.

ADVERTISEMENT

ರೈತ ನಾಯಕಿ ಕವಿತಾ ಕುರುಗಂಟಿ ಮಾತನಾಡಿ, ‘ಕಿಡಿಗೇಡಿ ದಾಳಿಗಳ ಮೂಲಕ ರೈತ ಹೋರಾಟವನ್ನು ಕುಗ್ಗಿಸಬಹುದು ಎಂದು ಬಿಜೆಪಿ ಭಾವಿಸಿದ್ದರೆ ಅದು ಭ್ರಮೆಯಷ್ಟೆ. ರೈತ ಹೋರಾಟ ಶೀಘ್ರದಲ್ಲೇ ರಾಜಕೀಯ ಶಕ್ತಿಯಾಗಿ ರೂಪುಗೊಳ್ಳಲಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅದರ ಪರಿಣಾಮ ಅನುಭವಿಸಲಿದೆ’ ಎಂದು ಹೇಳಿದರು.

‘ಟಿಕಾಯತ್ ಮುಖಕ್ಕೆ ಮಸಿ ಬಳಿಯಲು ಹೋಗಿ ರಾಜ್ಯ ಬಿಜೆಪಿ ಸರ್ಕಾರ ತನ್ನ ಮುಖಕ್ಕೆ ತಾನೇ ಮಸಿ ಬಳಿದುಕೊಂಡಿದೆ’ ಎಂದು ಕೃಷಿ ಆರ್ಥಿಕತೆಯ ತಜ್ಞಪ್ರಕಾಶ್ ಕಮ್ಮರಡಿ ಆಕ್ರೋಶ ವ್ಯಕ್ತಪಡಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಯಾರ ಮಾತಿಗೂ ಮಣಿಯುವುದಿಲ್ಲ ಎನ್ನುವ ಮಾತಿತ್ತು. ರೈತರು ಒಟ್ಟಾಗಿ ಮೋದಿಯನ್ನು ಮಣಿಸಿದ್ದರು. ಈ ಹೋರಾಟ ಮುನ್ನಡೆಸಿದ ನಾಯಕರ ಮೇಲೆ ಮಸಿ ದಾಳಿ ಮಾಡುವ ಮೂಲಕ ಬಿಜೆಪಿ ಸರ್ಕಾರ ತನ್ನ ಮುಖಕ್ಕೆ ತಾನೇ ಮಸಿ ಎರಚಿಕೊಂಡಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.