ADVERTISEMENT

ಪಾಲಿಕೆ ಫಲಿತಾಂಶದಲ್ಲಿ ಮುನ್ನಡೆ: ಸರ್ಕಾರಕ್ಕೆ ಜನಬೆಂಬಲ ಸಾಬೀತು ಎಂದ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 10:15 IST
Last Updated 6 ಸೆಪ್ಟೆಂಬರ್ 2021, 10:15 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ   

ಬೆಂಗಳೂರು: ಮೂರು ಮಹಾನಗರ ಪಾಲಿಕೆಗಳೂ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶವು ರಾಜ್ಯದ ಬಿಜೆಪಿ ಸರ್ಕಾರಕ್ಕೆ ಜನಬೆಂಬಲ ಇರುವುದನ್ನು ಸಾಬೀತುಪಡಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ಕಚೇರಿಯಲ್ಲಿ ಸೋಮವಾರ ನಡೆದ ಐಪಿಎಸ್‌ ಅಧಿಕಾರಿಗಳ ಸಮ್ಮೇಳನದ ಬಳಿಕ ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ಅವರು, ‘ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದೆ. ರಾಷ್ಟ್ರೀಯ ಪಕ್ಷವಾದ ಬಿಜೆಪಿ ಜತೆ ಬೆಳಗಾವಿ ಜನರು ಇರುವುದು ಸಾಬೀತಾಗಿದೆ. ಕಲಬುರ್ಗಿ ಮತ್ತು ಧಾರವಾಡ ಮಹಾನಗರ ಪಾಲಿಕೆಗಳಲ್ಲೂ ನಮ್ಮ ಪಕ್ಷ ಅಧಿಕಾರ ಹಿಡಿಯಲಿದೆ’ ಎಂದರು.

ಹುಬ್ಬಳ್ಳಿ– ಧಾರವಾಡ ಬಿಜೆಪಿಯ ಭದ್ರಕೋಟೆ. ಅಲ್ಲಿ ಮತ್ತೊಮ್ಮೆ ಹೆಚ್ಚಿನ ಸ್ಥಾನಗಳು ಲಭಿಸಿವೆ. ಈ ಚುನಾವಣೆಯು ಭವಿಷ್ಯದ ದಿನಗಳ ದಿಕ್ಸೂಚಿಯಂತೆ ಇದೆ ಎಂದು ಹೇಳಿದರು.

ADVERTISEMENT

‘ಪಕ್ಷದ ಸ್ಥಳೀಯ ಘಟಕಗಳ ಅಧ್ಯಕ್ಷರು, ಹಿರಿಯ ಮುಖಂಡರ ಶ್ರಮದಿಂದ ಹೆಚ್ಚು ಸ್ಥಾನಗಳು ದೊರಕಿವೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರೂ ಹೆಚ್ಚು ಶ್ರಮ ಹಾಕಿದ್ದರು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.