ADVERTISEMENT

ಎರಡು ಮಸೂದೆಗಳಿಗೆ ರಾಜ್ಯಪಾಲರ ಅಂಕಿತ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 15:54 IST
Last Updated 29 ಸೆಪ್ಟೆಂಬರ್ 2022, 15:54 IST
   

ಬೆಂಗಳೂರು: ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಮಸೂದೆ–2022 ಮತ್ತು ಕರ್ನಾಟಕ ಹಣಕಾಸು ಸಂಸ್ಥೆಗಳ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ತಿದ್ದುಪಡಿ) ಮಸೂದೆ–2022ಕ್ಕೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ಬುಧವಾರ ಅಂಕಿತ ಹಾಕಿದ್ದಾರೆ.

ಸೆಪ್ಟೆಂಬರ್‌ 23ಕ್ಕೆ ಕೊನೆಗೊಂಡ ವಿಧಾನಮಂಡಲದ ಅಧಿವೇಶನದಲ್ಲಿ ಎರಡೂ ತಿದ್ದುಪಡಿ ಮಸೂದೆಗಳನ್ನು ಅಂಗೀಕರಿಸಲಾಗಿತ್ತು. ಬಳಿಕ ರಾಜ್ಯಪಾಲರ ಒಪ್ಪಿಗೆಗಾಗಿ ರಾಜಭವನಕ್ಕೆ ಕಳುಹಿಸಲಾಗಿತ್ತು. ರಾಜ್ಯಪಾಲರು ಸಹಿ ಮಾಡಿದ ಬಳಿಕ ಎರಡೂ ತಿದ್ದುಪಡಿ ಕಾಯ್ದೆಗಳನ್ನು ಜಾರಿಗೊಳಿಸಿ ಬುಧವಾರ ರಾತ್ರಿಯೇ ಅಧಿಸೂಚನೆ ಹೊರಡಿಸಲಾಗಿದೆ.

ರೈತರು ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಮಾಡುತ್ತಿರುವ ಸಾಗುವಳಿಯನ್ನು (ಬಗರ್‌ ಹುಕುಂ) ಸಕ್ರಮಗೊಳಿಸುವಂತೆ ಕೋರಿ ನಮೂನೆ–57ರ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅವಧಿಯನ್ನು ಒಂದು ವರ್ಷಗಳವರೆಗೆ ವಿಸ್ತರಿಸಲು ಭೂ ಕಂದಾಯ ಕಾಯ್ದೆಯ ತಿದ್ದುಪಡಿಯು ಅವಕಾಶ ಕಲ್ಪಿಸಲಿದೆ. ಮೇ 29ರಂದು ಸುಗ್ರೀವಾಜ್ಞೆ ಮೂಲಕ ಅದನ್ನು ಜಾರಿಗೊಳಿಸಲಾಗಿತ್ತು. ಅದಕ್ಕೆ ಪೂರಕವಾಗಿ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ.

ADVERTISEMENT

ಹಣಕಾಸು ಸಂಸ್ಥೆಗಳಲ್ಲಿನ ಹೂಡಿಕೆದಾರರಿಗೆ ವಂಚಿಸುವ ವ್ಯಕ್ತಿಗಳ ವಿರುದ್ಧ ವಿವಿಧೆಡೆ ದಾಖಲಾಗುವ ಪ್ರಕರಣಗಳನ್ನು ಒಂದೇ ಕಡೆಗೆ ವರ್ಗಾಯಿಸಿ, ತನಿಖೆ ನಡೆಸುವುದಕ್ಕೆ ಅವಕಾಶ ಕಲ್ಪಿಸುವುದಕ್ಕಾಗಿ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಮೊದಲು ಪ್ರಕರಣ ದಾಖಲಾದ ಸ್ಥಳಕ್ಕೆ ಇತರ ಪ್ರಕರಣಗಳನ್ನು ವರ್ಗಾಯಿಸಿ, ಒಟ್ಟಾಗಿ ತನಿಖೆ ನಡೆಸಲು ಈ ತಿದ್ದುಪಡಿ ಅವಕಾಶ ಕಲ್ಪಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.