ADVERTISEMENT

ರಾಜ್ಯಪಾಲರು ನಾಮಕಾವಸ್ಥೆ ಮುಖ್ಯಸ್ಥರು: ರಾಜ್ಯ ವಾದ 

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 16:07 IST
Last Updated 9 ಸೆಪ್ಟೆಂಬರ್ 2025, 16:07 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಸಂವಿಧಾನದ ಪ್ರಕಾರ, ರಾಷ್ಟ್ರಪತಿ ಹಾಗೂ ರಾಜ್ಯಪಾಲರು ಕೇವಲ ನಾಮಕಾವಸ್ಥೆ ಮುಖ್ಯಸ್ಥರು. ಕೇಂದ್ರ ಹಾಗೂ ರಾಜ್ಯ ಸಚಿವ ಸಂಪುಟದ ಸಲಹೆ ಮೇರೆಗೆ ಕಾರ್ಯನಿರ್ವಹಿಸಲು ಬದ್ಧರು ಎಂದು ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಪ್ರತಿಪಾದಿಸಿದೆ. 

ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ಹಾಕುವುದಕ್ಕೆ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ನ್ಯಾಯಾಲಯ ಗಡುವು ನಿಗದಿ ಮಾಡಬಹುದೇ ಎಂಬ ವಿಷಯದ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು ಕೇಳಿರುವ ಸಲಹೆಗೆ ಸಂಬಂಧಿಸಿದ ವಿಚಾರಣೆ ವೇಳೆ ಕರ್ನಾಟಕ ಈ ಅಭಿಪ್ರಾಯ ವ್ಯಕ್ತಪಡಿಸಿತು. ರಾಜ್ಯ ಸರ್ಕಾರದ ಪರ ಹಿರಿಯ ವಕೀಲ ಗೋಪಾಲ್ ಸುಬ್ರಹ್ಮಣ್ಯನ್‌ ವಾದ ಮಂಡಿಸಿದರು. 

‘ರಾಷ್ಟ್ರಪತಿ ಹಾಗೂ ರಾಜ್ಯಪಾಲರು ಸಚಿವ ಸಂಪುಟದ ನೆರವು ಮತ್ತು ಸಲಹೆಗೆ ಬದ್ಧರಾಗಿದ್ದಾರೆ. ಇದು ಭಾರತದಲ್ಲಿ ಆಡಳಿತದ ಮೂಲಭೂತ ಕಲ್ಪನೆಯಾಗಿದೆ ಮತ್ತು ಸುಪ್ರೀಂ ಕೋರ್ಟ್ ಇದನ್ನು ಅನುಮೋದಿಸಿದೆ‘ ಎಂದು ಅವರು ವಾದಿಸಿದರು. 

ADVERTISEMENT

’ನಿಯಮಗಳ ಪ್ರಕಾರ ರಾಜ್ಯಪಾಲರಿಗೆ ವಿಟೋ ಅಧಿಕಾರ ಇಲ್ಲ. ರಾಜ್ಯಪಾಲರು ಮಸೂದೆಯನ್ನು ಮರುಪರಿಶೀಲನೆಗಾಗಿ ವಿಧಾನಸಭೆಗೆ ಮರಳಿಸುವ ಉದ್ದೇಶದಿಂದ ಅಂಕಿತ ಹಾಕುವುದನ್ನು ತಡೆಹಿಡಿಯುವ ಅಧಿಕಾರವನ್ನಷ್ಟೇ ಹೊಂದಿದ್ದಾರೆ. ಆದರೆ, ವಿಧಾನಸಭೆಯಲ್ಲಿ ಮತ್ತೊಮ್ಮೆ ಮಸೂದೆ ಅನುಮೋದನೆಗೊಂಡಲ್ಲಿ ರಾಜ್ಯಪಾಲರು ಅಂಕಿತ ನೀಡಲೇಬೇಕು‘ ಎಂದು ವಾದಿಸಿದರು.

‘ಸಂಸದೀಯ ಪ್ರಜಾಪ್ರಭುತ್ವವು ಶಾಸಕಾಂಗದ ಮೂಲಕ ವ್ಯಕ್ತವಾಗುವ ಸಾಮೂಹಿಕ ಅಭಿವ್ಯಕ್ತಿಯಾಗಿದೆ. ಕಾರ್ಯಾಂಗವು ಶಾಸಕಾಂಗದಿಂದ ರೂಪುಗೊಳ್ಳುತ್ತದೆ ಮತ್ತು ಅದಕ್ಕೆ ಉತ್ತರದಾಯಿಯಾಗಿರುತ್ತದೆ. ಕಾನೂನನ್ನು ರೂಪಿಸುವ ಅಂತಿಮ ಜವಾಬ್ದಾರಿ ಶಾಸಕಾಂಗದ ಮೇಲಿದೆ‘ ಎಂದು ಅವರು ಹೇಳಿದರು.

ಸೂಕ್ತ ಸಮಯದಲ್ಲಿ ಮಸೂದೆಗೆ ಅಂಗೀಕಾರ: ಸುಪ್ರೀಂ ಸಲಹೆ  

ರಾಜ್ಯ ವಿಧಾನಸಭೆಯಲ್ಲಿ ಅನುಮೋದನೆಗೊಂಡ ಮಸೂದೆಗಳಿಗೆ ಅಂಕಿತ ಹಾಕುವ ಅಧಿಕಾರ ನೀಡುವ ಸಂವಿಧಾನದ 200 ನೇ ‍ಪರಿಚ್ಛೇದದಲ್ಲಿ ‘ಸಾಧ್ಯವಾದಷ್ಟು ಬೇಗ’ ಎಂಬ ಅಂಶ ಇಲ್ಲದೆ ಇದ್ದರೂ ಕೂಡ ರಾಜ್ಯಪಾಲರು ‘ಸೂಕ್ತ ಸಮಯ‘ದಲ್ಲಿ ಕ್ರಮ ಕೈಗೊಳ್ಳುವುದನ್ನು ನಿರೀಕ್ಷಿಸಲಾಗುತ್ತಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. 

ಎಂಟನೇ ದಿನದ ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಐದು–ಸದಸ್ಯರ ಸಾಂವಿಧಾನಿಕ ಪೀಠ, ‘ಕೇವಲ ಸಂವಿಧಾನವನ್ನಷ್ಟೇ ವಿಶ್ಲೇಷಿಸಲಾಗುವುದು, ವೈಯಕ್ತಿಕ ಪ್ರಕರಣಗಳನ್ನಲ್ಲ’ ಎಂದು ಸ್ಪಷ್ಟಪಡಿಸಿದೆ.

‘ತುರ್ತು ಪ್ರಕರಣಗಳಲ್ಲಿ ರಾಜ್ಯಪಾಲರು 24 ಗಂಟೆಗಳ ಒಳಗೆ ಕಾರ್ಯನಿರ್ವಹಿಸಬೇಕಾಗಬಹುದು’ ಎಂದು ಪೀಠ ಹೇಳಿದೆ.

ಸಂವಿಧಾನ 200 ಪರಿಚ್ಛೇದವು ರಾಜ್ಯಪಾಲರಿಗೆ ವಿಧಾನಸಭೆಯಲ್ಲಿ ಅನುಮೋದನೆಗೊಂಡ ಮಸೂದೆಗಳಿಗೆ ಅಂಕಿತ ನೀಡುವ, ಮಸೂದೆ ತಡೆ ಹಿಡಿಯುವ ಅಥವಾ ಮಸೂದೆಯನ್ನು ಮರಳಿ ಕಳುಹಿಸುವ ಅಥವಾ ಮಸೂದೆಯನ್ನು ರಾಷ್ಟ್ರಪತಿಗಳ ಪರಿಗಣನೆಗೆ ಮೀಸಲಿರಿಸುವ ಅಧಿಕಾರ ನೀಡುತ್ತದೆ. 

ಪರಿಚ್ಛೇದ 200ರ ಮೊದಲ ನಿಯಮದ ಅನುಸಾರ, ರಾಜ್ಯಪಾಲರು ತಮಗೆ ಬಂದ ಮಸೂದೆಯನ್ನು ಸಾಧ್ಯವಾಷ್ಟು ಶೀಘ್ರದಲ್ಲಿ ಅಂಕಿತ ಹಾಕಬೇಕು ಅಥವಾ  ಮರುಪರಿಶೀಲನೆಗಾಗಿ ಸದನಕ್ಕೆ ಮರಳಿ ಕಳುಹಿಸಬೇಕು (ಹಣಕಾಸಿನ ಮಸೂದೆ ಹೊರತುಪಡಿಸಿ). ವಿಧಾನಸಭೆಯಲ್ಲಿ ಅದನ್ನು ಮರುಪರಿಶೀಲಿಸಿ ಕಳುಹಿಸಿದ ನಂತರ ಅದಕ್ಕೆ ಅಂಕಿತ ಹಾಕುವುದಕ್ಕೆ ವಿಳಂಬ ಮಾಡಬಾರದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.