ADVERTISEMENT

ವೇತನ ಪಾವತಿಗೂ ಸರ್ಕಾರದಲ್ಲಿ ಹಣವಿಲ್ಲ: ಯಡಿಯೂರಪ್ಪ ಆರೋಪ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2023, 12:26 IST
Last Updated 7 ನವೆಂಬರ್ 2023, 12:26 IST
<div class="paragraphs"><p> ಯಡಿಯೂರಪ್ಪ</p></div>

ಯಡಿಯೂರಪ್ಪ

   

ಬೆಂಗಳೂರು: ಸರ್ಕಾರಿ ನೌಕರರಿಗೆ ವೇತನ ಪಾವತಿಸಲು ಮತ್ತು ವೇತನ ಪರಿಷ್ಕರಣೆಗೂ ಸರ್ಕಾರದ ಬಳಿ ಹಣವಿಲ್ಲ. ಆದ್ದರಿಂದ ವೇತನ ಆಯೋಗದ ಅವಧಿಯನ್ನು ವಿಸ್ತರಿಸಿದೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ರಾಜ್ಯ ಸರ್ಕಾರಿ ನೌಕರರಿಗೆ ಈಗಾಗಲೇ ಮಧ್ಯಂತರ ಪರಿಹಾರ ನೀಡಬೇಕಿತ್ತು. ಆದರೆ, ಸರ್ಕಾರದಲ್ಲಿ ಹಣವೇ ಇಲ್ಲ ಕಾರಣ ಆಯೋಗದ ಅವಧಿ ವಿಸ್ತರಿಸುವ ಮೂಲಕ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿದೆ ಎಂದು ಅವರು ಸುದ್ದಿಗಾರರ ಜತೆ ಮಾತನಾಡಿ ತಿಳಿಸಿದರು.

ADVERTISEMENT

ಸರ್ಕಾರದ ಬಳಿ ಬರ ಪರಿಸ್ಥಿತಿ ನಿಭಾಯಿಸಲು ಹಣವಿಲ್ಲ. ಗ್ಯಾರಂಟಿ ಬಗ್ಗೆ ಅಬ್ಬರದ ಪ್ರಚಾರ ಮಾಡುತ್ತಿದೆಯೇ ಹೊರತು ಫಲಾನುಭವಿಗಳಿಗೆ ಕೊಡಲು ಹಣವಿಲ್ಲ. ಕಾಂಗ್ರೆಸ್‌ ಸರ್ಕಾರ ರಾಜ್ಯವನ್ನು ದಿವಾಳಿ ಅಂಚಿಗೆ ತಂದು ನಿಲ್ಲಿಸಿದೆ. ಅಧಿಕಾರಕ್ಕೆ ಬಂದ ಆರು ತಿಂಗಳಲ್ಲೇ ಎಲ್ಲಾ ರಂಗಗಳಲ್ಲೂ ವಿಫಲವಾಗಿದೆ. ಕುಂಟುನೆಪ ಹೇಳಿಕೊಂಡು ಕಾಲ ಹರಣ ಮಾಡುತ್ತಿದ್ದಾರೆ. ಜನಸಾಮಾನ್ಯರ ಬಗ್ಗೆ ಕಾಳಜಿ ಮತ್ತು ಕಳಕಳಿ ಈ ಸರ್ಕಾರಕ್ಕೆ ಇಲ್ಲ ಎಂದು ಯಡಿಯೂರಪ್ಪ ಕಿಡಿಕಾರಿದರು.

ಅಭಿವೃದ್ಧಿ ಕೆಲಸಕ್ಕೆ ಒಂದು ಪೈಸೆ ಬಿಡುಗಡೆ ಮಾಡದೇ, ಇಲ್ಲ ಸಲ್ಲದ ನೆಪಗಳನ್ನು ಹೇಳುತ್ತಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಅಭಿವೃದ್ಧಿ ಹೊಂದಿದ ರಾಜ್ಯವಾಗಿತ್ತು. ಈಗ ಹಿಮ್ಮುಖವಾಗಿ ಚಲಿಸುತ್ತಿದೆ. ಬಹಳ ಕಾಲ ಇವರನ್ನು ಹೀಗೆ ಬಿಡಲು ಸಾಧ್ಯವಿಲ್ಲ. ನಮ್ಮೆಲ್ಲ ಮುಖಂಡರು ಸೇರಿ ಇವೆಲ್ಲದರ ವಿರುದ್ಧ ಹೋರಾಟ ಮಾಡಲು ಚಿಂತನೆ ನಡೆಸುತ್ತಿದ್ದೇವೆ ಎಂದು ಯಡಿಯೂರಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.