ADVERTISEMENT

ಚಾಕ್‌ಪೀಸ್‌ ಖರೀದಿಸಲೂ ಹಣದ ಕೊರತೆ

ಶಿಕ್ಷಣ ಇಲಾಖೆಯಿಂದ ಇನ್ನೂ ಬಿಡುಗಡೆಯಾಗದ ಶಾಲಾ ನಿರ್ವಹಣೆಯ ಅನುದಾನ

ಪೀರ್‌ ಪಾಶ, ಬೆಂಗಳೂರು
Published 28 ಮಾರ್ಚ್ 2019, 10:40 IST
Last Updated 28 ಮಾರ್ಚ್ 2019, 10:40 IST
   

ಬೆಂಗಳೂರು: ಸ್ವಚ್ಛತೆ, ಕೊಠಡಿಗಳ ದುರಸ್ತಿ, ಪಾಠ ಮತ್ತು ಪೀಠೋಪಕರಣ, ಕ್ರೀಡಾ ಸಾಮಗ್ರಿ ಖರೀದಿ ಸೇರಿದಂತೆ ನಿರ್ವಹಣೆಗಾಗಿ ಬಿಡುಗಡೆ ಆಗಬೇಕಾಗಿದ್ದ ಅನುದಾನ ಸಿಗದೆ ರಾಜ್ಯ ಸರ್ಕಾರಿ ಶಾಲೆಗಳು ಸೊರಗುತ್ತಿವೆ.

ಶಾಲಾ ನಿರ್ವಹಣೆಯ ಕನಿಷ್ಠ ವೆಚ್ಚಗಳನ್ನು ಆಯಾ ಶಾಲಾ ಶಿಕ್ಷಕರು ತಮ್ಮ ಸಂಬಳದಿಂದ ಭರಿಸುತ್ತಿದ್ದಾರೆ. ಚಾಕ್‌ಪೀಸ್‌, ಡಸ್ಟರ್‌, ದಿನಪತ್ರಿಕೆ ಖರೀದಿಯಿಂದ ಹಿಡಿದು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲು, ಜಯಂತಿಗಳನ್ನು ಆಚರಿಸಲು ಜೇಬಿ ನಿಂದ ಖರ್ಚು ಮಾಡುವ ಸ್ಥಿತಿ ಬಂದಿದೆ ಎಂದು ಮುಖ್ಯ ಶಿಕ್ಷಕರೊಬ್ಬರು ಹೇಳಿದರು.

ಶೈಕ್ಷಣಿಕ ವರ್ಷ ಮತ್ತು ಹಣಕಾಸಿನ ವರ್ಷ ಮುಗಿಯುತ್ತ ಬಂದರೂ, ಅನುದಾನ ಬಿಡುಗಡೆ ಮಾಡಲು ಶಿಕ್ಷಣ ಇಲಾಖೆ ಮುತುವರ್ಜಿ ತೋರುತ್ತಿಲ್ಲ. ‘ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ (ಎಂಎಚ್‌ಆರ್‌ಡಿ) ಅನುದಾನ ಬಂದಿಲ್ಲ. ಹಾಗಾಗಿ ಹಣ ಬಿಡುಗಡೆ ಮಾಡಿಲ್ಲ’ ಎಂದು ಸರ್ವಶಿಕ್ಷಣ ಅಭಿಯಾನದ ಅಧಿಕಾರಿಗಳು ಕೇಂದ್ರ ದತ್ತ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ.

ADVERTISEMENT

ಶಾಲೆಗಳ ನಿರ್ವಹಣೆಯ ಅನುದಾನದ ಶೇ 50ರಷ್ಟು ಪಾಲು ಪ್ರತಿವರ್ಷದ ಜೂನ್‌ ಆರಂಭದಲ್ಲಿ, ಉಳಿದ ಅರ್ಧ ಮೊತ್ತವನ್ನು ಅಕ್ಟೋಬರ್‌ನಲ್ಲಿ ಶಾಲಾಭಿವೃದ್ಧಿ ಖಾತೆಗೆ ವರ್ಗಾಯಿಸುವ ಪರಿಪಾಟ ಹಿಂದಿನಿಂದಲೂ ಇತ್ತು. ಆದರೆ, ‘ಮೂರು ವರ್ಷಗಳಿಂದ ಇದನ್ನು ಇಲಾಖೆ ಪಾಲಿಸುತ್ತಿಲ್ಲ' ಎಂದು ಮುಖ್ಯ ಶಿಕ್ಷಕರೊಬ್ಬರು ತಿಳಿಸಿದರು.

‘ಸಣ್ಣಪುಟ್ಟ ದುರಸ್ತಿ, ನಿರ್ವಹಣೆಗೆ ನಾವೇ ಖರ್ಚು ಮಾಡುತ್ತೇವೆ. ಪ್ರತಿ ತಿಂಗಳಿಗೆ ಒಂದೆರಡು ಜಯಂತಿಗಳು, ರಾಷ್ಟ್ರೀಯ ಹಬ್ಬ ಬರುತ್ತವೆ. ಅವುಗಳ ಆಚರಣೆ ಮತ್ತು ಆಗ ಬರುವ ಅತಿಥಿಗಳ ಸತ್ಕಾರಕ್ಕೂ ಶಿಕ್ಷಕರಿಂದಲೇ ಹಣ ಹೊಂದಿಸುತ್ತೇವೆ’ ಎಂದು ಚಿತ್ರದುರ್ಗದ ಶಿಕ್ಷಕರೊಬ್ಬರು ತಿಳಿಸಿದರು.

‘ಎಂಎಚ್‌ಆರ್‌ಡಿಯಿಂದ ಆನು ಮೋದಿತ ಅನುದಾನ ಬಂದಿಲ್ಲ. ಹೀಗಾಗಿ, ಶಾಲೆಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ’ ಎಂದು ಸರ್ವ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕ ಎಂ.ಟಿ.ರೇಜು ಹೇಳಿದರು.

*
ಸಕಾಲಕ್ಕೆ ಅನುದಾನ ಸಿಗದೆ, ಶಿಕ್ಷಕರ ಮೇಲೆ ಆರ್ಥಿಕ ಹೊರೆ ಬೀಳುತ್ತಿದೆ. ಆದಷ್ಟು ಬೇಗ ಎರಡನೇ ಕಂತು ಬಿಡುಗಡೆ ಮಾಡಬೇಕು. -ವಿ.ಎಂ.ನಾರಾಯಣಸ್ವಾಮಿ, ಅಧ್ಯಕ್ಷ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ

*
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆಂದು ಕೊಡುವುದೇ ಮೂರು ಕಾಸು, ಅದನ್ನು ಸರಿಯಾಗಿ ಕೊಡುತ್ತಿಲ್ಲ. ಇದೇ ಸ್ಥಿತಿ ಮುಂದುವರಿದರೆ ಬಹುತೇಕ ಶಾಲೆಗಳು ಮುಚ್ಚಲಿವೆ.
-ವಿ.ಪಿ.ನಿರಂಜನಾರಾಧ್ಯ, ಶಿಕ್ಷಣ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.