ADVERTISEMENT

ಜಿಲ್ಲೆಗಳಲ್ಲೂ ನವೋದ್ಯಮಗಳಿಗೆ ಉತ್ತೇಜನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2022, 19:30 IST
Last Updated 16 ಜನವರಿ 2022, 19:30 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದ ನವೋದ್ಯಮಗಳ ಸ್ಥಾಪನೆಗೆ ಉತ್ತೇಜನ ನೀಡಲಾಗುವುದು. ‘ಬಿಯಾಂಡ್‌ ಬೆಂಗಳೂರು’ ಯೋಜನೆಯಡಿ ನವೋದ್ಯಮಿಗಳಿಗೆ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

‘ನವೋದ್ಯಮ ದಿನಾಚರಣೆ’ ಪ್ರಯುಕ್ತ ಭಾನುವಾರ ಆನ್‌ಲೈನ್‌ ಮೂಲಕ ಸಂದೇಶ ನೀಡಿದ ಅವರು, ‘ಬೆಂಗಳೂರಿಗೆ ಸೀಮಿತವಾಗಿರುವ ನವೋದ್ಯಮಗಳ ಚಟುವಟಿಕೆಗಳನ್ನು ಇತರ ಜಿಲ್ಲೆಗಳಿಗೆ ವಿಸ್ತರಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ’ ಎಂದರು.

ಸಣ್ಣ ಗ್ಯಾರೇಜಿನಿಂದ ದೊಡ್ಡ ಕೈಗಾರಿಕೆಗಳವರೆಗೆ ಎಲ್ಲ ಹಂತದ ಸಂಶೋಧನೆಗಳಿಗೆ ಸರ್ಕಾರ ಸಹಕಾರ ನೀಡಲಿದೆ. ಇದಕ್ಕಾಗಿ ನೂತನ ‘ಅಭಿವೃದ್ಧಿ ಮತ್ತು ಸಂಶೋಧನಾ ನೀತಿ’ ರೂಪಿಸಿ, ಅನುಷ್ಠಾನಕ್ಕೆ ತರಲಾಗುವುದು. ಶಾಲಾ ಶಿಕ್ಷಣದ ಹಂತದಿಂದಲೇ ಸಂಶೋಧನೆಗೆ ಒತ್ತು ನೀಡಲಾಗುವುದು. ನವೋದ್ಯಮಗಳ ಬೆಳವಣಿಗೆಗೆ ಪೂರಕವಾದ ಚಟುವಟಿಕೆಗಳನ್ನು ಶಾಲೆಗಳಲ್ಲೇ ಆರಂಭಿಸಲಾಗುವುದು ಎಂದು ತಿಳಿಸಿದರು.

ADVERTISEMENT

ವಿವಿಧ ಯೋಜನೆಗಳ ಅಡಿಯಲ್ಲಿ ನವೋದ್ಯಮಿಗಳಿಗೆ ನೆರವು ನೀಡಲಾಗುತ್ತಿದೆ. ಈವರೆಗೆ ರಾಜ್ಯದಲ್ಲಿ ಒಟ್ಟು 482 ನವೋದ್ಯಮಗಳಿಗೆ ₹ 120 ಕೋಟಿ ನೆರವು ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ದೇಶದಲ್ಲಿ ಒಟ್ಟು 54,000 ನವೋದ್ಯಮಗಳಿವೆ. ಅವುಗಳಲ್ಲಿ 13,000 ಕರ್ನಾಟಕದಲ್ಲಿವೆ. ಭವಿಷ್ಯದ ದಿನಗಳಲ್ಲಿ ದೇಶದ ಆರ್ಥಿಕತೆಗೆ ನವೋದ್ಯಮಗಳ ಕೊಡುಗೆ ಅಗಾಧವಾಗಿರಲಿದೆ. ಹೆಚ್ಚಿನ ನವೋದ್ಯಮಗಳನ್ನು ಹೊಂದಿರುವ ಕರ್ನಾಟಕ ರಾಜ್ಯವು ದೇಶದ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.