ADVERTISEMENT

ರಾಜಕೀಯ ಮುಖಂಡರ ‘ಹಳ್ಳಿ ಸುತ್ತಾಟ’

ಗ್ರಾಮ ಪಂಚಾಯಿತಿ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಸಿದ್ಧತೆ, ‘ಕೈ’ ಪಡೆಯಿಂದ ಕಾರ್ಯಪಡೆ

ಅದಿತ್ಯ ಕೆ.ಎ.
Published 21 ನವೆಂಬರ್ 2020, 1:07 IST
Last Updated 21 ನವೆಂಬರ್ 2020, 1:07 IST
ಕೆ.ಕೆ.ಮಂಜುನಾಥ್‌ ಕುಮಾರ್‌
ಕೆ.ಕೆ.ಮಂಜುನಾಥ್‌ ಕುಮಾರ್‌   

ಮಡಿಕೇರಿ: ಸದ್ಯದಲ್ಲೇ ಗ್ರಾಮ ಪಂಚಾಯಿತಿ ಚುನಾವಣೆಗೆ ದಿನಾಂಕ ಘೋಷಣೆಯಾಗುವ ಸಾಧ್ಯತೆಯಿದ್ದು ಕೊಡಗು ಜಿಲ್ಲೆಯಲ್ಲೂ ಚಳಿಯ ನಡುವೆಯೂ ಚುನಾವಣೆ ಕಾವೇರಲು ಆರಂಭಿಸಿದೆ. ಅಲ್ಲಲ್ಲಿ ಹಳ್ಳಿ ರಾಜಕೀಯದ ಚರ್ಚೆ ಆರಂಭವಾಗಿದೆ. ಯುವ ನೇತಾರರು ಹಳ್ಳಿಯತ್ತ ಮುಖಮಾಡಿದ್ದಾರೆ.

ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಖಂಡರೂ ಸಹ ‘ಹಳ್ಳಿ ಸುತ್ತಾಟ’ ನಡೆಸುತ್ತಿದ್ದಾರೆ. ಅದರಲ್ಲೂ ಶಾಸಕರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಸದಸ್ಯರು, ಆಯಾ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಒಂದು ಹೆಜ್ಜೆ ಮುಂದೆ ಹೋಗಿದ್ದು, ಗ್ರಾಮೀಣ ಭಾಗದ ಮತದಾರರ ಮನಗೆಲ್ಲಲು ‘ಅಭಿವೃದ್ಧಿ ಕಾಮಗಾರಿ ಅಸ್ತ್ರ’ ಬಳಸಲು ಆರಂಭಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಕಳೆದ ನಾಲ್ಕೈದು ತಿಂಗಳಿಂದ ಕಾಮಗಾರಿಗಳಿಗೆ ಭೂಮಿ ಪೂಜೆಯ ಯೋಗಾಯೋಗ ಒದಗಿ ಬಂದಿದೆ.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದಿಂದ ನೇರ ಸ್ಪರ್ಧೆ ಇರುವುದಿಲ್ಲ. ಹೀಗಾಗಿ, ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಕಸರತ್ತಿಗೆ ರಾಜಕೀಯ ಪಕ್ಷಗಳು ಮುಂದಾಗಿವೆ.

ADVERTISEMENT

ಕಳೆದ ಕೆಲವು ವರ್ಷಗಳಿಂದ ಕೊಡಗು ಬಿಜೆಪಿಯ ಭದ್ರಕೋಟೆಯಾಗಿ ಬದಲಾಗಿದೆ. ಇಬ್ಬರು ಶಾಸಕರು, ಒಬ್ಬ ವಿಧಾನ ಪರಿಷತ್‌ ಸದಸ್ಯರು ಬಿಜೆಪಿಯವರೇ. ಅದಲ್ಲದೇ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿಗಳಲ್ಲೂ ಬಿಜೆಪಿಯದ್ದೇ ಅಧಿಕಾರ. ಕಾಂಗ್ರೆಸ್‌ನಿಂದ ಒಬ್ಬರು ಮಾತ್ರ ವಿಧಾನ ಪರಿಷತ್‌ ಸದಸ್ಯರಿದ್ದಾರೆ. ಜೆಡಿಎಸ್‌ ಇನ್ನೂ ನೆಲೆಕಂಡುಕೊಳ್ಳುವ ಪ್ರಯತ್ನದಲ್ಲಿದೆ. ಗ್ರಾಮ ಪಂಚಾಯಿತಿಯಲ್ಲಿ ತಮ್ಮ ಬೆಂಬಲಿತರೇ ಗೆದ್ದು ಬಂದರೆ ಭವಿಷ್ಯದಲ್ಲಿ ಬರುವ ದೊಡ್ಡ ದೊಡ್ಡ ಚುನಾವಣೆಗಳನ್ನು ಎದುರಿಸಲು ಸುಲಭವಾಗಲಿದೆ ಎಂಬುದು ರಾಜಕೀಯ ಪಕ್ಷಗಳ ಲೆಕ್ಕಾಚಾರ.

ಬಿಜೆಪಿಯಲ್ಲಿ ಸಿದ್ಧತೆ ಹೇಗಿದೆ?:

ಗ್ರಾಮ ಪಂಚಾಯಿತಿ ಚುನಾವಣೆ ಎದುರಿಸಲು ಬಿಜೆಪಿ ಈಗಾಗಲೇ ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿ ಕಾರ್ಯಕಾರಿಣಿ ನಡೆಸಿ, ಮುಖಂಡರಿಗೆ ಸಂದೇಶ ರವಾನಿಸಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರೇ ಈ ಸಭೆಗೆ ಆಗಮಿಸಿ, ಜಿಲ್ಲೆಯ ಶೇ 80ರಷ್ಟು ಗ್ರಾಮ ಪಂಚಾಯಿತಿಗಳಲ್ಲೇ ಪಕ್ಷದ ಬೆಂಬಲಿತ ಅಭ್ಯರ್ಥಿಗಳೇ ಅಧಿಕಾರಕ್ಕೆ ಬರಬೇಕು ಎಂದು ಸೂಚನೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನ ಹಾಕಬೇಕು ಎಂದೂ ಜಿಲ್ಲಾ ವರಿಷ್ಠರಿಗೆ ಸಂದೇಶ ರವಾನಿಸಿದ್ದಾರೆ.

ಕೈ ನಾಯಕರಲ್ಲೀಗ ‘ಒಗ್ಗಟ್ಟಿನ ಮಂತ್ರ’:

ಕಾಂಗ್ರೆಸ್‌ನಲ್ಲೂ ಮುಖಂಡರು ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ. ಸಭೆಯ ಮೇಲೆ ಸಭೆ ನಡೆಸುತ್ತಿದ್ದಾರೆ.

‘ಕಳೆದ ಆರು ತಿಂಗಳಿಂದಲೂ ಕಾಂಗ್ರೆಸ್‌ ಗ್ರಾಮ ಪಂಚಾಯಿತಿ ಚುನಾವಣೆ ಎದುರಿಸಲು ಸಜ್ಜಾಗಿದೆ. ಪಂಚಾಯಿತಿ ಮಟ್ಟದಲ್ಲಿ ಚುನಾವಣೆ ಸಮಿತಿ ರಚಿಸಲಾಗಿದೆ. ಆ ಸಮಿತಿಯನಿಯಮಿತವಾಗಿ ಸಭೆ ನಡೆಸುತ್ತಿದೆ. ಪ್ರಚಾರಕ್ಕೆ ಸಂಬಂಧ ಸ್ಥಳೀಯ ಮುಖಂಡರಿಗೆ ತರಬೇತಿ ಸಹ ನೀಡಲಾಗಿದೆ. ಆಯಾ ಭಾಗದ ಪಕ್ಷದ ಮುಖಂಡ ಅಭೂತಪೂರ್ವ ಬೆಂಬಲ ಸಿಗುತ್ತಿದೆ’ ಎಂದು ಕಾಂಗ್ರೆಸ್‌ ಕೊಡಗು ಜಿಲ್ಲಾ ಅಧ್ಯಕ್ಷ ಕೆ.ಕೆ.ಮಂಜುನಾಥ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಇನ್ನು ಜೆಡಿಎಸ್‌ ಸಹ ಚುನಾವಣೆ ತಯಾರಿಯಲ್ಲಿ ನಿರತವಾಗಿದೆ. ಆದರೆ, ಅದು ದೊಡ್ಡಮಟ್ಟದಲ್ಲಿ ಸದ್ದು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮೀಣ ಪ್ರದೇಶ ಮತದಾರರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.