ADVERTISEMENT

ಜ.26: 3 ಸಾವಿರ ಕೇಂದ್ರಗಳಲ್ಲಿ ‘ಗ್ರಾಮ ಒನ್‌’ ಸೇವೆ ಜಾರಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 19:51 IST
Last Updated 17 ಜನವರಿ 2022, 19:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಸರ್ಕಾರದ ವಿವಿಧಸೇವೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ತ್ವರಿತವಾಗಿ ಒದಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗ್ರಾಮ ಒನ್’ ಯೋಜನೆ ಗಣರಾಜ್ಯೋತ್ಸವ ದಿನದಿಂದ 12 ಜಿಲ್ಲೆಗಳಲ್ಲಿ ಜಾರಿಗೆ ಬರಲಿದೆ.

ಈ ಯೋಜನೆಯ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ವರ್ಚುವಲ್ ಸಭೆ ನಡೆಯಿತು.

ಸಭೆಯಲ್ಲಿ ಬೊಮ್ಮಾಯಿ ಅವರು, ‘ಜ.26ರಂದು 12 ಜಿಲ್ಲೆಗಳಲ್ಲಿ ಯೋಜನೆ ಜಾರಿಗೆ ಬರಲಿದೆ. ಮುಂದಿನ ದಿನಗಳಲ್ಲಿ ಎಲ್ಲ ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗುವುದು. ಪ್ರಮುಖ ಇಲಾಖೆಗಳ ಎಲ್ಲ ಸೇವೆಗಳು ಗ್ರಾಮೀಣ ಜನರಿಗೆ ಸುಲಭವಾಗಿ ಸಿಗಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಬೆಂಗಳೂರು ಒನ್, ಕರ್ನಾಟಕ ಒನ್ ಮಾದರಿ ಈ ಯೋಜನೆಯು ಮೊದಲ ಹಂತದಲ್ಲಿ ಬೀದರ್, ಕೊಪ್ಪಳ, ಬಳ್ಳಾರಿ, ಬೆಳಗಾವಿ, ಹಾವೇರಿ, ವಿಜಯಪುರ, ದಾವಣಗೆರೆ, ಶಿವಮೊಗ್ಗ, ತುಮಕೂರು, ಚಿಕ್ಕಮಗಳೂರು, ಉಡುಪಿ, ಕೊಡಗು ಜಿಲ್ಲೆಗಳಲ್ಲಿ ಒಟ್ಟು 3 ಸಾವಿರ ಗ್ರಾಮ ಒನ್ ಸೇವಾ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ.

ಕಂದಾಯ, ಆಹಾರ, ಆರೋಗ್ಯ, ಕಾರ್ಮಿಕ ಸೇರಿದಂತೆ ವಿವಿಧ ಇಲಾಖೆಗಳ ಅಂದಾಜು 100 ಸೇವೆಗಳು ಗ್ರಾಮ ಒನ್ ಕೇಂದ್ರದಲ್ಲಿ ಲಭ್ಯವಾಗಲಿವೆ. ಈ ಕೇಂದ್ರಗಳಿಗೆ ನಿರಂತರ ವಿದ್ಯುತ್ ಹಾಗೂ ಅಂತರ್ಜಾಲ (ಇಂಟರ್ನೆಟ್) ಸಂಪರ್ಕ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ಇ– ಆಡಳಿತ) ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.