ADVERTISEMENT

‘ಗ್ರಾಮ ಸರ್ಕಾರ’ ಕೊನೆಗೂ ಸಾಕಾರ

ಎಂಟು ವರ್ಷಗಳ ಬಳಿಕ ನಿಯಮ ರಚನೆ | ಶಾಸಕ ಕೇಂದ್ರಿತ ವ್ಯವಸ್ಥೆಗೆ ತಿಲಾಂಜಲಿ

ಚಂದ್ರಹಾಸ ಹಿರೇಮಳಲಿ
Published 1 ಫೆಬ್ರುವರಿ 2025, 0:30 IST
Last Updated 1 ಫೆಬ್ರುವರಿ 2025, 0:30 IST
<div class="paragraphs"><p>ಬೆಳಗಾವಿಯ ಸುವರ್ಣ ವಿಧಾನಸೌಧ</p></div>

ಬೆಳಗಾವಿಯ ಸುವರ್ಣ ವಿಧಾನಸೌಧ

   

ಬೆಂಗಳೂರು: ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್ ಕಾಯ್ದೆಗೆ ಎಂಟು ವರ್ಷಗಳ ನಂತರ ಸರ್ಕಾರ ನಿಯಮ ರೂಪಿಸಿದ್ದು, ‘ಗ್ರಾಮ ಸರ್ಕಾರ’ದ ಕನಸು ಕೊನೆಗೂ ಸಾಕಾರಗೊಳ್ಳುತ್ತಿದೆ. ಏಳು ದಶಕಗಳ ಶಾಸಕ ಕೇಂದ್ರಿತ ವ್ಯವಸ್ಥೆ ಅಂತ್ಯವಾಗಲಿದೆ.

ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ಗ್ರಾಮಸಭೆ) ನಿಯಮಗಳು–2024 ಅನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆ ರೂಪಿಸಿದ್ದು, ಕರಡು ನಿಯಮಗಳನ್ನು ಬಿಡುಗಡೆ ಮಾಡಿದೆ. ರಾಜ್ಯಪತ್ರದಲ್ಲಿ ಪ್ರಕಟಿಸಿದ 30 ದಿನಗಳ ನಂತರ ನಿಯಮಗಳು ಅನುಷ್ಠಾನವಾಗಲಿವೆ. 

ADVERTISEMENT

ಹೊಸ ನಿಯಮಗಳ ಫಲವಾಗಿ ಸ್ಥಳೀಯರನ್ನು ಒಳಗೊಂಡ ‘ಗ್ರಾಮಸಭೆ’ಗಳು ಇನ್ನು ಮುಂದೆ ಬಲಿಷ್ಠ ‘ಗ್ರಾಮ ಸರ್ಕಾರ’ಗಳಾಗಿ ಕಾರ್ಯನಿರ್ವಹಿಸಲಿವೆ. ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಆಯ್ಕೆ ಮಾಡುವ, ಅನುಮೋದನೆ ನೀಡುವ, ಕುಡಿಯುವ ನೀರು, ರಸ್ತೆ, ಮೂಲ ಸೌಕರ್ಯ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾ ಯೋಜನೆ ರೂಪಿಸುವ ಸಂಪೂರ್ಣ ಅಧಿಕಾರ ಪಡೆಯಲಿವೆ. ರಾಜ್ಯ ಸರ್ಕಾರ, ಶಾಸಕರ ಮಟ್ಟದಲ್ಲಿ ಕೇಂದ್ರೀಕೃತವಾಗಿದ್ದ ಈ ಎಲ್ಲ ಅಧಿಕಾರವನ್ನೂ ಗ್ರಾಮ ಸಭೆಗಳು ಪಡೆಯಲಿವೆ.

ವರ್ಷಕ್ಕೆ ನಾಲ್ಕು ಗ್ರಾಮ ಸಭೆ:

ಹೊಸ ನಿಯಮಗಳ ಪ್ರಕಾರ ಪ್ರತಿ ಗ್ರಾಮ ಪಂಚಾಯಿತಿ ವರ್ಷಕ್ಕೆ ನಾಲ್ಕು ಗ್ರಾಮ ಸಭೆಗಳನ್ನು ನಡೆಸಬೇಕು. ಮಹಿಳೆಯರು, ಮಕ್ಕಳು, ಪರಿಶಿಷ್ಟರು, ಅಂಗವಿಕಲರು, ದುರ್ಬಲ ವರ್ಗಗಳ ಸಮಸ್ಯೆಗಳ ಕುರಿತು ಚರ್ಚಿಸಲು ವರ್ಷಕ್ಕೆ ಕನಿಷ್ಠ ಒಂದು ವಿಶೇಷ ಗ್ರಾಮ ಸಭೆ ಕರೆಯಬೇಕು. ಚರ್ಚೆ ನಡೆಸಿ, ತೆಗೆದುಕೊಂಡ ನಿರ್ಣಯಗಳನ್ನು ಆಯಾ ಇಲಾಖೆಗೆ ಕಳುಹಿಸಬೇಕು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯು ಗ್ರಾಮ ಪಂಚಾಯಿತಿ ಅಧ್ಯಕ್ಷರ ಜತೆ ಚರ್ಚಿಸಿ, ಅಧಿಕಾರಿಗಳ ನಿಯೋಜನೆ ಮಾಡಬೇಕು. ಗ್ರಾಮಸಭೆಗೆ ಎಲ್ಲ ಇಲಾಖೆಯ ನಿಯೋಜಿತ ಅಧಿಕಾರಿಗಳ ಭಾಗವಹಿಸುವಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಯಾವ ಹಂತದ ಅಧಿಕಾರಿಗಳು ಭಾಗವಹಿಸಬೇಕು ಎಂಬ ಪಟ್ಟಿಯನ್ನೂ ನಿಯಮಗಳು ಒಳಗೊಂಡಿವೆ. ಗ್ರಾಮ ಸಭೆಗಳ ಯಶಸ್ಸು, ಅಲ್ಲಿನ ತೀರ್ಮಾನಗಳ ಅನುಷ್ಠಾನಕ್ಕಾಗಿ ಗ್ರಾಮ ಪಂಚಾಯಿತಿ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ಮೂರು ‘ಗ್ರಾಮ ಸಭಾ ಸಮನ್ವಯ ಸಮಿತಿ’ಗಳನ್ನು ರಚಿಸಬೇಕು. ಮೂರು ಸಮಿತಿಗಳಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಒಕ್ಕೂಟದ ಪದಾಧಿಕಾರಿಗಳು ನಾಮನಿರ್ದೇಶಿತ ಸದಸ್ಯರಾಗಿರುತ್ತಾರೆ.

ಗ್ರಾಮಸಭೆಗಳ ಪ್ರತಿ ನಿರ್ಣಯ, ಫಲಾನುಭವಿಗಳ ಪಟ್ಟಿ, ವಿವಿಧ ಕಾಮಗಾರಿಗಳ ಕ್ರಿಯಾಯೋಜನೆ ಗ್ರಾಮ ಪಂಚಾಯಿತಿ, ತಾಲ್ಲೂಕು, ಜಿಲ್ಲಾ ಪಂಚಾಯಿತಿ ಮೂಲಕ ಸಾಗಿ ಸಂಬಂಧಿಸಿದ ಇಲಾಖೆಗಳನ್ನು ತಲುಪಲಿವೆ. 

ಅಧ್ಯಕ್ಷರ ಆಯ್ಕೆ ಅಧಿಕಾರವೂ ಸಭೆಗೆ: ಗ್ರಾಮಸಭೆಯ ಅಧ್ಯಕ್ಷತೆಯನ್ನು ಆಯಾ ಗ್ರಾಮ ಪಂಚಾಯಿತಿ ಅಧ್ಯಕ್ಷರು ವಹಿಸುತ್ತಾರೆ. ಅವರ ಗೈರುಹಾಜರಿಯಲ್ಲಿ ಉಪಾಧ್ಯಕ್ಷರು, ಇಲ್ಲವೇ, ಹಿರಿಯ ಸದಸ್ಯರು ವಹಿಸುತ್ತಾರೆ. ಎಲ್ಲರೂ ಗೈರುಹಾಜರಾದರೆ ಗ್ರಾಮಸಭೆಯೇ ಒಬ್ಬ ಅನುಭವಿ ನಾಗರಿಕರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿಕೊಂಡು ಸಭೆ ನಡೆಸುವಂತಹ ಅಧಿಕಾರ ನೀಡಲಾಗಿದೆ. ನಿಗದಿಯಾದ ಗ್ರಾಮಸಭೆಗೆ ಆ ವ್ಯಾಪ್ತಿಯ ಒಟ್ಟು ಮತದಾರರಲ್ಲಿ ಶೇ 10ರಷ್ಟು ಕೋರಂ ನಿಗದಿ ಮಾಡಲಾಗಿದೆ. 

ದಶಕಗಳ ಬೇಡಿಕೆ ಕೊನೆಗೂ ಈಡೇರಿದೆ. ಗ್ರಾಮ ಸ್ವರಾಜ್ಯದ ಕನಸು ಸಾಕಾರವಾಗುತ್ತಿದೆ. ಮೂರು ಹಂತದ ಸಮಿತಿಗಳಲ್ಲೂ ಪಂಚಾಯಿತಿ ಸದಸ್ಯರಿಗೆ ಅವಕಾಶ ನೀಡಿರುವುದು ಬಲ ತಂದಿದೆ
ಕಾಡಶೆಟ್ಟಿಹಳ್ಳಿ ಸತೀಶ್‌ ಅಧ್ಯಕ್ಷ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟ 

ಗ್ರಾಮ ಸಭೆಯ ಪ್ರಮುಖ ಅಧಿಕಾರ

* ಎಲ್ಲ ಇಲಾಖೆಗಳು ತಮ್ಮ ವ್ಯಾಪ್ತಿಯ ಕಾರ್ಯಕ್ರಮಗಳು ಅನುದಾನ ಅನುಷ್ಠಾನದ ವಿವರಗಳನ್ನು ಗ್ರಾಮ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಬೇಕು

* ಕಾಮಗಾರಿಗಳ ಅನುಷ್ಠಾನ ಮೇಲ್ವಿಚಾರಣೆ ಮೌಲ್ಯಮಾಪನಕ್ಕೆ ಸಮಿತಿ ರಚಿಸುವ ಅಧಿಕಾರ 

* ಸರ್ಕಾರದ ಎಲ್ಲ ಯೋಜನೆಗಳ ವೈಯಕ್ತಿಕ ಫಲಾನುಭವಿಗಳ ಆಯ್ಕೆ ಮಾಡಿ ಆಯಾ ಇಲಾಖೆಗೆ ಕಳುಹಿಸುವುದು

* ಸಮುದಾಯ ಆಧಾರಿತ ಮೂಲಸೌಕರ್ಯಗಳ ಪಟ್ಟಿ ಸಿದ್ಧಪಡಿಸುವುದು * ಮಹಿಳೆಯರು ಮಕ್ಕಳು ಪರಿಶಿಷ್ಟರು ಹಿಂದುಳಿದ ವರ್ಗಗಳಿಗೆ ವಿಶೇಷ ಯೋಜನೆಗಳನ್ನು ರೂಪಿಸುವುದು 

‌ಮೇಲಿನ ಹಂತದ ನಿರ್ಧಾರಕ್ಕೆ ಇತಿಶ್ರೀ

ಗ್ರಾಮ ಸ್ವರಾಜ್‌ ಕಾಯ್ದೆಯಂತೆ ಗ್ರಾಮ ಸಭೆಗಳಿಗೆ ಪರಮಾಧಿಕಾರವಿತ್ತು. ಆದರೆ ನಿಯಮಗಳನ್ನು ರೂಪಿಸದ ಕಾರಣ ಸರ್ಕಾರದ ಯೋಜನೆಗಳನ್ನು ಮೇಲು ಹಂತದ ಅಧಿಕಾರಿಗಳೇ ರೂಪಿಸಿ ಗ್ರಾಮಗಳ ಒಪ್ಪಿಗೆ ಇಲ್ಲದೆ ಅನುಷ್ಠಾನಗೊಳಿಸುವ ಪ್ರವೃತ್ತಿ ನಡೆಯುತ್ತಿತ್ತು. ಎಲ್ಲ ಯೋಜನೆಗಳಲ್ಲೂ ಶಾಸಕರ ಅನುಯಾಯಿಗಳೇ ಸಿಂಹಪಾಲು ಪಡೆಯುತ್ತಿದ್ದರು. ಎಲ್ಲ ಕಾಮಗಾರಿಗಳ ಕ್ರಿಯಾ ಯೋಜನೆಗಳೂ ಶಾಸಕರ ಆಣತಿಯಂತೆ ಸಿದ್ಧಗೊಳ್ಳುತ್ತಿದ್ದವು. ಸ್ಥಳೀಯ ಸಂಸ್ಥೆಗಳು ಸರ್ಕಾರದ ಶಾಖಾ ಕಚೇರಿಗಳಂತೆ ಕೆಲಸ ಮಾಡುತ್ತಿದ್ದವು. ಹೊಸ ನಿಯಮಗಳಿಂದಾಗಿ ಅಧಿಕಾರ ವಿಕೇಂದ್ರೀಕರಣದ ಆಶಯ ಈಡೇರುತ್ತಿದೆ.

‌ನಿಯಮಗಳು ಏಕೆ ಮಹತ್ವ?

ಸಂವಿಧಾನದ 73 ಮತ್ತು 74ನೇ ತಿದ್ದುಪಡಿ ಮೂಲಕ ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ನೀಡಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿತ್ತು. ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಈ ಆಶಯ 1993ರಲ್ಲಿ ಈಡೇರಿತ್ತು. ಇದಕ್ಕೂ ಮೊದಲೇ ರಾಜ್ಯದಲ್ಲೂ ಅಂದಿನ ರಾಮಕೃಷ್ಣ ಹೆಗಡೆ ಸರ್ಕಾರ ಮೊದಲ ಬಾರಿ 1987ರಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಮೂಲಕ ಗ್ರಾಮ ಸ್ವರಾಜ್ಯದ ಮೊದಲ ಆಶಯವನ್ನು ಸಾಕಾರಗೊಳಿಸಿತ್ತು. ಆದರೆ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಇಲ್ಲದ ಕಾರಣ ಅಂದು ಪ್ರಬಲ ಜಾತಿಗೆ ಸೇರಿದವರೇ ಅಧಿಕಾರ ಅನುಭವಿಸಿದರು. ಸಂವಿಧಾನ ತಿದ್ದುಪಡಿಯ ನಂತರ ರಾಜ್ಯದಲ್ಲೂ ‘ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಕಾಯ್ದೆ–1993’ ಜಾರಿಗೊಳಿಸಲಾಯಿತು.  ರಾಜ್ಯದಲ್ಲಿ 1993ರಲ್ಲೇ ಕಾಯ್ದೆ ಜಾರಿಯಾದರೂ ಸ್ಥಳೀಯ ಸಂಸ್ಥೆಗಳಿಗೆ ಅಗತ್ಯವಿದ್ದ ಜವಾಬ್ದಾರಿ ಜವಾಬ್ದಾರಿಗೆ ಪೂರಕವಾಗಿ ಹಣಕಾಸು ಅಧಿಕಾರ ಮಾನವ ಸಂಪನ್ಮೂಲ ಸಮರ್ಪಕವಾಗಿ ನೀಡಲಿಲ್ಲ. ಆಯಾ ಸ್ಥಳೀಯ ಸಂಸ್ಥೆಗಳ ಅಧೀನಕ್ಕೆ ಇಲಾಖೆಗಳನ್ನು ನೀಡಲಿಲ್ಲ. ಇಂತಹ ನ್ಯೂನತೆಗಳನ್ನು ಸರಿಪಡಿಸಿ ಗ್ರಾಮ ಸರ್ಕಾರದ ಆಶಯ ಈಡೇರಿಸಲು ಅಗತ್ಯವಾದ ವರದಿ ನೀಡುವಂತೆ 2013ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೆ.ಆರ್‌.ರಮೇಶ್‌ಕುಮಾರ್‌ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತ್ತು. ಸಮಿತಿಯ ಶಿಫಾರಸಿನಂತೆ ‘ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಕಾಯ್ದೆ‘ಗೆ 2016ರಲ್ಲಿ ತಿದ್ದುಪಡಿ ತರಲಾಯಿತು. ಗ್ರಾಮಗಳನ್ನು ಸಬಲಗೊಳಿಸುವ ರಾಜ್ಯಕ್ಕೆ ಅಗತ್ಯವಾದ ನೀತಿ ನಿಯಮ ರೂಪಿಸುವ ಹೊಣೆಗಾರಿಕೆ ಗ್ರಾಮಗಳಿಗೇ ನೀಡುವ ಮಹತ್ವದ ಆಶಯವನ್ನು ಕಾಯ್ದೆ ಒಳಗೊಂಡಿದ್ದರೂ ಅವುಗಳ ಸಮರ್ಪಕ ಅನುಷ್ಠಾನಕ್ಕೆ ಅಗತ್ಯವಾದ ರೂಪುರೇಷೆಗಳನ್ನು ಸರ್ಕಾರ ರೂಪಿಸಿರಲಿಲ್ಲ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.