ಬೆಂಗಳೂರು: ‘ಒದಗಿಸಿದ ಅನುದಾನ ಸಂಪೂರ್ಣ ವೆಚ್ಚ ಮಾಡಿ, ಬಳಕೆ ಪ್ರಮಾಣಪತ್ರ ಸಲ್ಲಿಸಿದ ತಕ್ಷಣ ಕೃಷಿ ಹಾಗೂ ಇತರ ಇಲಾಖೆಗಳಿಗೆ ಹೆಚ್ಚುವರಿ ಅನುದಾನ ನೀಡಲಾಗುವುದು. ಆತ್ಮ ಯೋಜನೆಯಡಿ ಅಗತ್ಯ ಪ್ರಮಾಣದ ಸಿಬ್ಬಂದಿಯನ್ನೂ ಒದಗಿಸಲಾಗುವುದು’ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಭರವಸೆ ನೀಡಿದರು.
ನಗರದ ಕುಮಾರಕೃಪಾ ಅತಿಥಿಗೃಹದಲ್ಲಿ ಚೌಹಾಣ್ ಅವರನ್ನು ಭೇಟಿ ಮಾಡಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ರಾಜ್ಯದಲ್ಲಿ ಕೃಷಿ ಕ್ಷೇತ್ರದ ಬಲವರ್ಧನೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯವಾದ ವಿವಿಧ ಸಹಾಯ ಮತ್ತು ಆರ್ಥಿಕ ನೆರವು ಶೀಘ್ರ ಒದಗಿಸುವಂತೆ ಮನವಿ ಮಾಡಿದರು.
ಅದಕ್ಕೆ ಪ್ರತಿಕ್ರಿಯಿಸಿದ ಚೌಹಾಣ್, ‘ರಾಜ್ಯಕ್ಕೆ ಎಲ್ಲ ರೀತಿಯ ನೆರವು ಒದಗಿಸಲು ಕೇಂದ್ರ ಸರ್ಕಾರ ಸಿದ್ಧವಿದೆ’ ಎಂದರು.
ಕಂದಾಯ ಸಚಿವ ಕೃಷ್ಣ ಬೈರೇಗೌಡ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಕೂಡಾ ಚೌಹಾಣ್ ಅವರನ್ನು ಭೇಟಿ ಮಾಡಿ ರಾಜ್ಯದ ಬೇಡಿಕೆಗಳನ್ನು ಮಂಡಿಸಿದರು.
‘ರಾಜ್ಯದಲ್ಲಿ ಕೃಷಿ ಇಲಾಖೆ ಶೇ 99ರಷ್ಟು ಆರ್ಥಿಕ ಹಾಗೂ ಭೌತಿಕ ಗುರಿ ಸಾಧನೆ ಮಾಡಿದೆ. ಕೇಂದ್ರ ಪುರಸ್ಕೃತ ಯೋಜನೆಗಳಲ್ಲೂ ಅನುದಾನ ಬಳಸಿಕೊಂಡಿದೆ. ಹೀಗಾಗಿ ಈ ಬಾರಿಯೂ ಕೃಷಿ ಯಾಂತ್ರೀಕರಣ ಸೇರಿದಂತೆ ವಿವಿಧ ಯೋಜನೆಗಳಿಗೆ ಆರ್ಥಿಕ ನೆರವು ಒದಗಿಸಬೇಕು, ಆನೇಕಲ್ ತಾಲ್ಲೂಕಿನ ಕಾಚನಾಯಕನಹಳ್ಳಿ ಗ್ರಾಮದಲ್ಲಿ 20 ಎಕರೆ ಪ್ರದೇಶದಲ್ಲಿ ಪೆಸ್ಟಿಸೈಡ್ಸ್ ಫಾರ್ಮುಲೇಷನ್ ಟೆಕ್ನಾಲಜಿ ಸಂಸ್ಥೆ ಆರಂಭಿಸಲು ಅನುಮೋದನೆ ನೀಡಬೇಕು, ಜೋಳಕ್ಕೆ ಹಿಂಗಾರು ಅವಧಿಯಲ್ಲಿ ನೀಡುತ್ತಿರುವ ಬೆಂಬಲ ಬೆಲೆ ಸೌಲಭ್ಯವನ್ನು ಮುಂಗಾರು ಅವಧಿಯಲ್ಲೂ ನೀಡಬೇಕು, ರಾಗಿ, ಜೋಳಗಳಂತೆ ಇತರ ಸಿರಿಧಾನ್ಯಗಳನ್ನೂ ಕನಿಷ್ಠ ಬೆಂಬಲ ಬೆಲೆ ಯೋಜನೆಯ ವ್ಯಾಪ್ತಿಗೆ ಸೇರಿಸಬೇಕು’ ಎಂದು ಕೇಂದ್ರ ಕೃಷಿ ಸಚಿವರಿಗೆ ಚಲುವರಾಯಸ್ವಾಮಿ ಮನವಿ ಮಾಡಿದರು.
‘ಆತ್ಮ ಯೋಜನೆಯಡಿ ಹೊಸದಾಗಿ 177 ಸಹಾಯಕ ತಾಂತ್ರಿಕ ನಿರ್ವಾಹಕರ ನೇಮಕಕ್ಕೆ ಮಂಜೂರಾತಿ ಮತ್ತು ಅನುದಾನ ನೀಡಬೇಕು, ರಾಜ್ಯದಲ್ಲಿ ಇನ್ನೂ 59.69 ಹೆಕ್ಟೇರ್ ಪ್ರದೇಶವನ್ನು ಜಲಾನಯನ ಅಭಿವೃದ್ಧಿ ಯೋಜನೆಯ ವ್ಯಾಪ್ತಿಗೆ ಸೇರಿಸಿ ಹೊಸದಾಗಿ 92 ಯೋಜನೆಗಳಿಗೆ ಸಂಬಂಧಿಸಿದಂತೆ ಸಲ್ಲಿಸಿರುವ ಪ್ರಸ್ತಾವಕ್ಕೆ ಅನುಮೋದನೆ ಮತ್ತು ಅನುದಾನ ನೀಡಬೇಕು, ಗುಣಮಟ್ಟ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹಾಲಿ ಇರುವ ವಿವಿಧ ಕಾಯ್ದೆಗಳಿಗೆ ತಿದ್ದುಪಡಿ ತರಬೇಕು’ ಎಂದೂ ಚಲುವರಾಯಸ್ವಾಮಿ ಕೋರಿದರು.
ಸಂಸದ ಬಿ.ವೈ. ರಾಘವೇಂದ್ರ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳೂ ಇದ್ದರು.
ಬೆಂಗಳೂರು: ‘ರಾಜ್ಯದಲ್ಲಿ ಕೇಂದ್ರ ಯೋಜನೆಗಳ ಜಾರಿಗೆ ಸಂಬಂಧಿಸಿದಂತೆ ನಿಯಮಾವಳಿಗಳಲ್ಲಿ ಕೆಲವು ಬದಲಾವಣೆ ಮಾಡಬೇಕು’ ಎಂದು ಪ್ರಿಯಾಂಕ್ ಖರ್ಗೆ ಮನವಿ ಮಾಡಿದರು.
ಪ್ರಧಾನಮಂತ್ರಿ ಗ್ರಾಮ ಸಡಕ್ ಮಾರ್ಗಸೂಚಿಯಡಿ 500ಕ್ಕಿಂತಲೂ ಕಡಿಮೆ ಜನಸಂಖ್ಯೆ ಹೊಂದಿರುವ ವಸತಿಗಳನ್ನು ಪರಿಗಣಿಸಬೇಕು ನರೇಗಾ ಯೋಜನೆಯಡಿ ಅಂಗನವಾಡಿ ಕಟ್ಟಡಗಳು ಮತ್ತು ಸರ್ಕಾರಿ ಕಟ್ಟಡಗಳಿಗೆ ಆವರಣ ಗೋಡೆ ನಿರ್ಮಾಣ ಗ್ರಾಮ ಪಂಚಾಯತ್ ಗ್ರಂಥಾಲಯ ನಿರ್ಮಾಣಕ್ಕೆ ಅವಕಾಶ ರೈತರಿಗೆ ಕೃಷಿ ನಂತರದ ಕೊಯ್ಲು ಶೇಖರಣಾ ಘಟಕಗಳ ನಿರ್ಮಾಣಕ್ಕೆ ಅವಕಾಶ ರೇಷ್ಮೆ ಕೃಷಿ ಘಟಕದ ನಿರ್ಮಾಣಕ್ಕೆ ಅವಕಾಶ ನೀಡಬೇಕು ಎಂದು ಪ್ರಿಯಾಂಕ್ ಮನವಿ ಸಲ್ಲಿಸಿದರು.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿ ಕೈಗೊಳ್ಳುವ ಸಮುದಾಯ ಆಧಾರಿತ ಕಾಮಗಾರಿಗಳಿಗೆ ವಿಧಿಸಿರುವ ಮಿತಿಯನ್ನು ಹಿಂಪಡೆಯಬೇಕು. ಸ್ಥಳೀಯ ಪರಿಸ್ಥಿತಿ ಮತ್ತು ಅವಶ್ಯಕತೆಗಳ ಆಧಾರದಲ್ಲಿ ಮಾದರಿ ವೆಚ್ಚಗಳನ್ನು ನಿರ್ಧರಿಸಲು ರಾಜ್ಯ ಸರ್ಕಾರಗಳಿಗೇ ಅವಕಾಶ ನೀಡಬೇಕು. ನರೇಗಾದಡಿ ಉದ್ಯೋಗ ಅವಕಾಶವನ್ನು 150 ದಿನಗಳವರೆಗೆ ಹೆಚ್ಚಿಸಲು ರಾಜ್ಯ ಸರ್ಕಾರಗಳಿಗೆ ಅವಕಾಶ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಅವರು ಕೇಂದ್ರ ಸಚಿವರ ಮುಂದಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.