ADVERTISEMENT

ಐದು ಪಾಲಿಕೆ ರಚಿಸಿ ಶೀಘ್ರ ಚುನಾವಣೆ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 15:11 IST
Last Updated 15 ಜುಲೈ 2025, 15:11 IST
   

ಬೆಂಗಳೂರು: ‘ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಡಿಯಲ್ಲಿ ಐದು ಪಾಲಿಕೆ ರಚಿಸಿ ಶೀಘ್ರ ಚುನಾವಣೆ ನಡೆಸುತ್ತೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಐದು ಪಾಲಿಕೆಗಳ ರಚನೆಗೆ ಕೆಲವರು ಸಾರ್ವಜನಿಕವಾಗಿ ವಿರೋಧ ಮಾಡಬಹುದು. ಆದರೆ, ಆಡಳಿತ ದೃಷ್ಟಿಯಿಂದ ಇದನ್ನು ಮಾಡಲೇಬೇಕಾಗಿದೆ’ ಎಂದರು.

‘ಪಾಲಿಕೆಗಳು ರಚನೆಯಾದರೆ ನಮ್ಮ ಪಕ್ಷದ ಕಾರ್ಯಕರ್ತರಿಗೆ ಹೆಚ್ಚಿನ ಸ್ಥಾನಮಾನ ನೀಡಲೇಬೇಕೆಂದು ತೀರ್ಮಾನಿಸಿದ್ದೇವೆ. ಇದಕ್ಕೆ ಅಡಿಪಾಯ ತಯಾರಿ ಮಾಡಬೇಕಿದೆ. ಡಿ.ಕೆ.ಶಿವಕುಮಾರ್ ಒಬ್ಬನೇ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಧ್ಯವಿಲ್ಲ. ಕಾರ್ಯಕರ್ತರೇ ಜೀವಾಳ’ ಎಂದರು.

ADVERTISEMENT

‘ಸುರಂಗ ರಸ್ತೆ ನಿರ್ಮಾಣ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿದೆ’ ಎನ್ನುವ ಸಂಸದ ತೇಜಸ್ವಿ ಸೂರ್ಯ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ದೆಹಲಿ, ಮುಂಬೈ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸುರಂಗ ರಸ್ತೆ ಮಾಡಲಾಗುತ್ತಿದೆ. ಅಲ್ಲೆಲ್ಲ ಯಾವ ಕಾರಣಕ್ಕೆ ಸುರಂಗ ರಸ್ತೆ ಮಾಡಲಾಗುತ್ತಿದೆ. ಇಲ್ಲಿ ಮಾತ್ರ ಯಾಕೆ ವಿರೋಧ. ನಾವು ಏನೇ ಮಾಡಿದರೂ ಟೀಕೆ ಮಾಡುತ್ತಾರೆ. ಬಿಜೆಪಿ ಯಾವತ್ತಿಗೂ ಅಭಿವೃದ್ಧಿಯ ವಿರುದ್ಧವಾಗಿರುವ ಪಕ್ಷ. ಬೆಂಗಳೂರಿಗೆ ಅವರ ಕೊಡುಗೆ ಶೂನ್ಯ’ ಎಂದರು.

‘ಮೆಟ್ರೊ ಡಿಪಿಆರ್‌ ಅನ್ನೇ ಸುರಂಗ ರಸ್ತೆಯ ಡಿಪಿಆರ್‌ ಆಗಿ ನಕಲು ಮಾಡಲಾಗಿದೆ’ ಎಂದು ತೇಜಸ್ವಿ ದೂರಿರುವ ಬಗ್ಗೆ ಗಮನಸೆಳೆದಾಗ, ‘ಆತನಿಗೆ ಉತ್ತರ ಕೊಡಲು ಹೋಗುವುದಿಲ್ಲ. ಮೆಟ್ರೊ ಯೋಜನೆಯು ಕಾಂಗ್ರೆಸ್‌ ಪಕ್ಷದ ಕೊಡುಗೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.