ಬೆಂಗಳೂರು: ಭಯೋತ್ಪಾದನೆ ಚಟುವಟಿಕೆಯಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಟಿ.ನಾಸೀರ್, ಜೈಲಿನ ಅಧಿಕಾರಿ ಜತೆಗೆ ಸೇರಿಕೊಂಡು ವಿದೇಶಕ್ಕೆ ಪರಾರಿಯಾಗಲು ಸಂಚು ರೂಪಿಸಿದ್ದ ಎನ್ನುವ ಸ್ಪೋಟಕ ಮಾಹಿತಿ ರಾಷ್ಟ್ರೀಯ ತನಿಖಾ ದಳಕ್ಕೆ(ಎನ್‌ಐಎ) ಸಿಕ್ಕಿದೆ. ಆ ಮಾಹಿತಿ ಆಧರಿಸಿ ಎನ್ಐಎ ಅಧಿಕಾರಿಗಳು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಉಗ್ರ ನಾಸೀರ್ ಹಾಗೂ ಆತನ ಸಹಚರರಿಗೆ ನೆರವು ನೀಡಿದ್ದ ಆರೋಪದಡಿ ಜೈಲಿನ ಎಎಸ್‌ಐ ಚಾಂದ್ ಪಾಷಾ, ಮನೋವೈದ್ಯ ನಾಗರಾಜ್ ಹಾಗೂ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜುನೈದ್ ಅಹಮದ್ ತಾಯಿ ಅನೀಸ್ ಫಾತಿಮಾಳನ್ನು ಬಂಧಿಸಿರುವ ಎನ್‌ಐಎ ಅಧಿಕಾರಿಗಳು, ಮೂವರು ಶಂಕಿತ ಉಗ್ರರನ್ನು ತಮ್ಮ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಅಬ್ದುಲ್ ನಾಸೀರ್ ಮದನಿಯ ಸಹಚರ ಎಲ್‌ಇಟಿ ಮುಖಂಡ ಟಿ.ನಾಸೀರ್. 2008ರಲ್ಲಿ ಬೆಂಗಳೂರಿನಲ್ಲಿ ಸರಣಿ ಸ್ಫೋಟ ಪ್ರಕರಣಗಳು ನಡೆದಿದ್ದವು. ಘಟನೆಯಲ್ಲಿ ಇಬ್ಬರು ಮೃತಪಟ್ಟು, 20 ಮಂದಿ ಗಾಯಗೊಂಡಿದ್ದರು. ಆ ಪ್ರಕರಣದಲ್ಲಿ ಟಿ.ನಾಸೀರ್‌ನನ್ನು ಎನ್‌ಐಎ ಬಂಧಿಸಿತ್ತು. ಬೇರೆ ಬೇರೆ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗಿ ಪರಪ್ಪನ ಅಗ್ರಹಾರಕ್ಕೆ ಬರುತ್ತಿದ್ದ ಯುವಕರ ಮನವೊಲಿಸಿ ಅವರಿಗೆ ನಾಸೀರ್ ಉಗ್ರ ಚಟುವಟಿಕೆಯ ತರಬೇತಿ ನೀಡುತ್ತಿದ್ದ ಎಂದು ಮೂಲಗಳು ಹೇಳಿವೆ.
ಎಎಸ್‌ಐ ಸೂತ್ರಧಾರ: ‘ಜೈಲಿನಲ್ಲಿದ್ದ ಶಂಕಿತ ಉಗ್ರರ ತಂಡವು ಕಾರಾಗೃಹದ ಅಧಿಕಾರಿಗಳ ಜತೆಗೆ ಸೇರಿಕೊಂಡು ಟಿ.ನಾಸೀರ್ ಜೈಲಿನಿಂದ ಪರಾರಿಯಾಗುವಂತೆ ಮಾಡಲು ಸಂಚು ರೂಪಿಸಿತ್ತು. ಅದಕ್ಕೆ ಯೋಜನೆ ಸಹ ಸಿದ್ಧಗೊಂಡಿತ್ತು. ಚಾಂದ್ ಪಾಷಾಗೆ ನಾಸೀರ್‌ನನ್ನು ಕೋರ್ಟ್‌ಗೆ ಕರೆದೊಯ್ಯುವ ಜವಾಬ್ದಾರಿ ವಹಿಸಲಾಗಿತ್ತು. ನಾಸೀರ್ ಕರೆದೊಯ್ಯಲು ಒಂದು ಜೀಪ್, ಇನ್‌ಸ್ಪೆಕ್ಟರ್ ಅಥವಾ ಪಿಎಸ್ಐ ನಿಯೋಜನೆ ಮಾಡಲಾಗುತ್ತಿತ್ತು. ದಾರಿ ಮಧ್ಯೆ ಗ್ರೆನೇಡ್ ಸ್ಫೋಟಿಸಿ ಗಮನ ಬೇರೆಡೆ ಸೆಳೆದು ನಾಸೀರ್ ಪರಾರಿ ಆಗುವಂತೆ ಮಾಡುವುದು ಸಂಚಿನ ಭಾಗ ಆಗಿತ್ತು. ಈ ಎಲ್ಲ ಮಾಹಿತಿಯನ್ನು ಫಾತಿಮಾ ಮೂಲಕ ಶಂಕಿತ ಉಗ್ರ ಜುನೈದ್ಗೆ ರವಾನೆ ಮಾಡಲಾಗಿತ್ತು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾರಿ ಮಧ್ಯೆ ಸ್ಫೋಟಿಸಲು ಸಂಚುಕೋರರಿಗೆ ಗ್ರೆನೇಡ್ ಪೂರೈಕೆ ಮಾಡಲಾಗಿತ್ತು. 2023ರಲ್ಲಿ ಸಿಸಿಬಿ ದಾಳಿಯ ವೇಳೆ ಕೊಡಿಗೇಹಳ್ಳಿ ಮನೆಯ ಮೇಲೆ ದಾಳಿ ನಡೆಸಿ, ಶೋಧ ನಡೆಸಿದಾಗ ಅಪಾರ ಪ್ರಮಾಣದ ಗ್ರೆನೇಡ್ ಪತ್ತೆಯಾಗಿತ್ತು ಎಂದು ಮೂಲಗಳು ತಿಳಿಸಿವೆ.
ಎಎಸ್‌ಐ ಚಾಂದ್ ಪಾಷಾಗೆ ಎಲ್‌ಇಟಿ ಉಗ್ರ ಟಿ.ನಾಸೀರ್ ಸಹಚರರಿಂದ ಲಕ್ಷಾಂತರ ರೂಪಾಯಿ ಪೂರೈಕೆ ಆಗಿರುವುದು ಬ್ಯಾಂಕ್‌ಗಳ ಪರಿಶೀಲನೆ ವೇಳೆ ಪತ್ತೆಯಾಗಿದೆ. ಹಣವನ್ನು ತನ್ನ ಬ್ಯಾಂಕ್ ಖಾತೆಯ ಬದಲಿಗೆ ಎಂಜಿನಿಯರ್ ವ್ಯಾಸಂಗ ಮಾಡುತ್ತಿರುವ ಪುತ್ರ ಹಾಗೂ ಸಂಬಂಧಿಯೊಬ್ಬರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.
ಜುನೈದ್ ಅಹಮದ್ ತನ್ನ ತಾಯಿ ಅನೀಸ್ ಫಾತಿಮಾ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುತ್ತಿದ್ದ. ಪುತ್ರನ ಸೂಚನೆಯ ಮೇರೆಗೆ ಟಿ.ನಾಸೀರ್ ಜತೆ ಸಂಪರ್ಕ ಹೊಂದಿ, ಆತ ಸೂಚಿಸಿದಂತೆ ಕೆಲಸ ಮಾಡುತ್ತಿದ್ದಳು ಎಂದು ಮೂಲಗಳು ತಿಳಿಸಿವೆ.
ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮನೋವೈದ್ಯನಾಗಿದ್ದ ನಾಗರಾಜ್ 14 ವರ್ಷಗಳಿಂದ ಜೈಲಿನ ಕೈದಿಗಳಿಗೆ ಅಂದಾಜು 300ಕ್ಕೂ ಹೆಚ್ಚು ಮೊಬೈಲ್ ಮಾರಾಟ ಮಾಡಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ. ₹10 ಸಾವಿರ ಬೆಲೆಯ ಮೊಬೈಲ್ ಅನ್ನು ₹30 ಸಾವಿರದಿಂದ ₹35 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ. ಸದ್ಯ ಆರೋಪಿ ಖರೀದಿಸಿರುವ 90 ಮೊಬೈಲ್‌ಗಳಿಗೆ ಡಿಜಿಟಲ್ ಸಾಕ್ಷ್ಯಗಳು ಸಿಕ್ಕಿವೆ. ಕೈದಿಗಳಿಗೆ ಮೊಬೈಲ್ ಮಾರಾಟ ಮಾಡಿ ನಾಗರಾಜ್ ₹70 ಲಕ್ಷ ಗಳಿಸಿದ್ದ ಎಂದು ಮೂಲಗಳು ತಿಳಿಸಿವೆ.
‘ಮೊಬೈಲ್ ಮಾರಾಟ ಮಾಡಿ ಬಂದ ಹಣವನ್ನು ತನ್ನ ಸ್ನೇಹಿತೆ ಪಲ್ಲವಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುತ್ತಿದ್ದ. ಪಲ್ಲವಿ ಖಾಸಗಿ ಆಸ್ಪತ್ರೆಯ ನರ್ಸ್ ಆಗಿದ್ದು ತನ್ನ ಸಹಾಯಕಿಯಾಗಿ ನೇಮಿಸಿಕೊಂಡಿದ್ದ’ ಎಂದು ಮೂಲಗಳು ತಿಳಿಸಿವೆ. ‘ಜೈಲಿನಲ್ಲಿದ್ದ ರೌಡಿಗಳು ಹಾಗೂ ಶಂಕಿತ ಉಗ್ರರ ಬೇಡಿಕೆಗೆ ಅನುಗುಣವಾಗಿ ಹೊಸ ಸಿಮ್‌ಕಾರ್ಡ್‌ಗಳನ್ನೂ ಖರೀದಿಸುತ್ತಿದ್ದ. ಅವುಗಳನ್ನು 10 ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದ. ಜತೆಗೆ ತನ್ನ ಬಳಿ ಚಿಕಿತ್ಸೆಗೆ ಬರುತ್ತಿದ್ದ ಕೈದಿಗಳಿಗೆ ಅವರ ಕುಟುಂಬಸ್ಥರೊಂದಿಗೆ ಮೊಬೈಲ್‌ನಲ್ಲಿ ಮಾತನಾಡಲು ವ್ಯವಸ್ಥೆ ಮಾಡುತ್ತಿದ್ದ. ಪ್ರತ್ಯೇಕ ಮೊಬೈಲ್ ಬಳಕೆ ಮಾಡುತ್ತಿದ್ದ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.