ADVERTISEMENT

ನೋಟಿಸ್‌ ಬಂದಿದ್ದರೆ ತಕ್ಷಣವೇ ಉತ್ತರಿಸಿ: ಟೀ–ಅಂಗಡಿ ಮಾಲೀಕರಿಗೆ GST ತಜ್ಞರ ಸಲಹೆ

ಜಯಸಿಂಹ ಆರ್.
Published 12 ಜುಲೈ 2025, 23:52 IST
Last Updated 12 ಜುಲೈ 2025, 23:52 IST
<div class="paragraphs"><p>ಜಿಎಸ್‌ಟಿ</p></div>

ಜಿಎಸ್‌ಟಿ

   

ಬೆಂಗಳೂರು: ಜಿಎಸ್‌ಟಿಗೆ ನೋಂದಣಿ ಮಾಡಿಸದೇ ಇದ್ದರೂ ತೆರಿಗೆ ಕಟ್ಟಿ ಎಂದು ನೋಟಿಸ್‌ ಬಂದಿರುವ ಬೇಕರಿ, ಹೋಟೆಲ್‌, ಟೀ–ಅಂಗಡಿ ಮಾಲೀಕರು, ಶೀಘ್ರವೇ ನೋಟಿಸ್‌ಗೆ ಉತ್ತರ ನೀಡಬೇಕು. ಇದರಿಂದ ದಂಡ ಮತ್ತು ಬಡ್ಡಿ ವಿಧಿಸಿಕೊಳ್ಳುವುದರಿಂದ ತಪ್ಪಿಸಿಕೊಳ್ಳಬಹುದು.

ರಾಜ್ಯದ ಎಲ್ಲೆಡೆ ಸಣ್ಣ ಬೇಕರಿ, ಹೋಟೆಲ್‌, ಟೀ ಅಂಗಡಿ, ಸಲೂನ್‌ಗಳನ್ನು ನಡೆಸುತ್ತಿರುವ ವ್ಯಾಪಾರಿಗಳು ಯುಪಿಐ ಮೂಲಕ ಹಣ ಪಡೆಯುತ್ತಿದ್ದರೆ, ಅಂತಹವರ ಹಣಕಾಸು ವಹಿವಾಟಿನ ವಿವರವನ್ನು ವಾಣಿಜ್ಯ ತೆರಿಗೆ ಇಲಾಖೆಯು ಕಲೆಹಾಕಿದೆ. ಇಲಾಖೆಯು ಈಗಾಗಲೇ ಹೇಳಿರುವಂತೆ, ಯುಪಿಐ ಮೂಲಕ ವಾರ್ಷಿಕ ₹40 ಲಕ್ಷಕ್ಕಿಂತ ಹೆಚ್ಚು ಇದ್ದವರಿಗೆ ನೋಟಿಸ್ ನೀಡಲಾಗಿದೆ.

ADVERTISEMENT

‘ನೋಟಿಸ್‌ ಪಡೆದವರು ಜಿಎಸ್‌ಟಿ ನೋಂದಣಿ ಮಾಡಿಸಲೇಬೇಕು ಮತ್ತು ಜಿಎಸ್‌ಟಿ ಕಟ್ಟದೇ ವಿಧಿ ಇಲ್ಲ. ಆದರೆ, ತಾವು ನಡೆಸಿದ ವಹಿವಾಟಿನಲ್ಲಿ ಯಾವುದಕ್ಕೆ ಮಾತ್ರ ಜಿಎಸ್‌ಟಿ ಅನ್ವಯವಾಗುತ್ತದೆ, ಎಂಬುದನ್ನು ಕಂಡುಕೊಂಡರೆ ತೆರಿಗೆಯ ಪ್ರಮಾಣ ಕಡಿಮೆ ಆಗುತ್ತದೆ’ ಎನ್ನುತ್ತಾರೆ ನಗರದ ರೆಜಿನಾ ಜಿಎಸ್‌ಟಿ ಕನ್ಸಲ್ಟೆಂಟ್ಸ್‌ನ ಎಂ.ಚಂದ್ರಶೇಖರ್‌.

‘ವಾರ್ಷಿಕ ₹40 ಲಕ್ಷ ವಹಿವಾಟು ದಾಟಿದ ಸರಕು ಪೂರೈಕೆದಾರರು, ವಾರ್ಷಿಕ ₹20 ಲಕ್ಷ ವಹಿವಾಟು ದಾಟಿದ ಸೇವಾ ಪೂರೈಕೆದಾರರು ಜಿಎಸ್‌ಟಿಗೆ ನೋಂದಣಿ ಮಾಡಿಸುವುದು ಕಡ್ಡಾಯ. ಹೀಗಾಗಿ ಅಷ್ಟು ಮೊತ್ತದ ವಹಿವಾಟು ನಡೆಸುತ್ತಿರುವವರು ಶೀಘ್ರವೇ ಜಿಎಸ್‌ಟಿ ನೋಂದಣಿ ಮಾಡಿಸಿ’ ಎಂಬುದು ಅವರ ಸಲಹೆ.

‘ರಾಜಿ ತೆರಿಗೆ ಆಯ್ಕೆ ಮಾಡಿ’

‘ಜಿಎಸ್‌ಟಿ ನೋಟಿಸ್‌ಗೆ ಉತ್ತರ ನೀಡಲು ಕಾಲಾವಕಾಶ ಇರುತ್ತದೆ. ಆ ಗಡುವಿನೊಳಗೆ ತೆರಿಗೆ ಕಟ್ಟಲೇಬೇಕು ಎಂದೇನಿಲ್ಲ. ಬದಲಿಗೆ ನೋಟಿಸ್‌ನಲ್ಲಿ ಉಲ್ಲೇಖಿಸಿರುವ ವಹಿವಾಟಿಗೆ ಸಂಬಂಧಿಸಿದ ಉತ್ತರವನ್ನು ಆನ್‌ಲೈನ್‌ನಲ್ಲಿ ಅಥವಾ ಜಿಎಸ್‌ಟಿ ಕಚೇರಿಗೆ ಖುದ್ದು ಹಾಜರಾಗಿ ಲಿಖಿತ ರೂಪದಲ್ಲಿ ಸಲ್ಲಿಸಬಹುದಾಗಿದೆ. ಹೀಗೆ ಮಾಡುವುದರಿಂದ ದಂಡವನ್ನು ತಪ್ಪಿಸಬಹುದಾಗಿದೆ’ ಎಂಬುದು ಅವರ ವಿವರಣೆ.‘ರಾಜಿ ತೆರಿಗೆ ಆಯ್ಕೆ ಮಾಡಿ’

‘ವಾರ್ಷಿಕ ₹40 ಲಕ್ಷಕ್ಕಿಂತ ಹೆಚ್ಚು ವಹಿವಾಟು ನಡೆಸುತ್ತಿರುವ ವರ್ತಕರು ಜಿಎಸ್‌ಟಿಗೆ ನೋಂದಣಿ ಮಾಡದೇ ಇದ್ದರೆ, ಅವರಿಗೆ ನೋಟಿಸ್‌ ನೀಡುವ ಅಧಿಕಾರ ಜಿಎಸ್‌ಟಿ ಅಧಿಕಾರಿಗಳಿಗೆ ಇದೆ. ಅಂತಹ ವರ್ತಕರು ನೋಟಿಸ್‌ಗೆ ಉತ್ತರ ನೀಡಿ, ರಾಜಿ ತೆರಿಗೆ ಅಡಿಯಲ್ಲಿ ಜಿಎಸ್‌ಟಿ ಪಾವತಿಸುವ ಮೂಲಕ ಕಾನೂನು ಕ್ರಮಗಳನ್ನು ತಪ್ಪಿಸಬಹುದು’ ಎನ್ನುತ್ತಾರೆ ಯು.ರಾವ್ ಅಂಡ್‌ ಅಸೋಸಿಯೇಟ್ಸ್‌ನ ಮಧುಕುಮಾರ್ ಡಿ.

‘ವಾರ್ಷಿಕ ₹1.50 ಕೋಟಿಗಿಂತ ಕಡಿಮೆ ವಹಿವಾಟು ನಡೆಸುವ ವರ್ತಕರು ರಾಜಿ ತೆರಿಗೆ ಯೋಜನೆಯ ಲಾಭ ಪಡೆಯಬಹುದು. ಅವರು ನಡೆಸುವ ವಾರ್ಷಿಕ ವಹಿವಾಟಿನ ಶೇ 1ರಷ್ಟು ಮಾತ್ರ ಜಿಎಸ್‌ಟಿ ಪಾವತಿಸಬಹುದು. ರಾಜಿ ತೆರಿಗೆ ಆಯ್ಕೆ ಮಾಡಿಕೊಂಡರೆ, ಅಂತಹವರು ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಪಡೆಯಲು ಸಾಧ್ಯವಿಲ್ಲ. ಆದರೆ ಒಟ್ಟಾರೆ ತೆರಿಗೆ ಪ್ರಮಾಣ ಕಡಿಮೆ ಇರುತ್ತದೆ. ರಾಜಿ ತೆರಿಗೆ ಆಯ್ಕೆ ಮಾಡಿಕೊಳ್ಳದೇ ಇದ್ದರೆ, ತಾವು ಮಾರಾಟ ಮಾಡಿದ ಸರಕು–ಸೇವೆಗಳ ಮೇಲೆ ಅನ್ವಯವಾಗುವ ಜಿಎಸ್‌ಟಿಯನ್ನು ಪೂರ್ಣ ಪ್ರಮಾಣದಲ್ಲಿ ಕಟ್ಟಬೇಕಾಗುತ್ತದೆ’ ಎಂಬುದು ಅವರ ಎಚ್ಚರಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.