ADVERTISEMENT

'ಗ್ಯಾರಂಟಿ'ಗೆ ಪರಿಶಿಷ್ಟರ ನಿಧಿಯಿಂದ ₹13,433 ಕೋಟಿ: : ಸಚಿವ ಎಚ್‌.ಸಿ.ಮಹದೇವಪ್ಪ

ಬಳಕೆಗೆ ಕಾಯ್ದೆಯ ಬಲವಿದೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 20:54 IST
Last Updated 20 ಆಗಸ್ಟ್ 2025, 20:54 IST
<div class="paragraphs"><p>ವಿಧಾನಸಭೆ ಕಲಾಪ (ಸಂಗ್ರಹ ಚಿತ್ರ)</p></div>

ವಿಧಾನಸಭೆ ಕಲಾಪ (ಸಂಗ್ರಹ ಚಿತ್ರ)

   

ಬೆಂಗಳೂರು: ಐದು ಗ್ಯಾರಂಟಿ ಯೋಜನೆಗಳಿಗಾಗಿ 2025–26 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ) ಹಾಗೂ ಗಿರಿಜನ ಉಪ ಯೋಜನೆ (ಟಿಎಸ್‌ಪಿ) ಅನುದಾನದಲ್ಲಿ ಒಟ್ಟು ₹13,433 ಕೋಟಿ ಬಳಕೆ ಮಾಡಿರುವ ಬಗ್ಗೆ ವಿಧಾನಸಭೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ‘ಪರಿಶಿಷ್ಟರಿಗೆ ಮೀಸಲಾದ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸುತ್ತಿರುವುದು, ದಲಿತರಿಗೆ ಮಾಡುತ್ತಿರುವ ದ್ರೋಹ’ ಎಂದು ಕಿಡಿಕಾರಿದರು.

ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಎಂ.ಚಂದ್ರಪ್ಪ ಅವರ ಪ್ರಶ್ನೆಗೆ ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ನೀಡಿದ ಉತ್ತರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ದಲಿತ ಸಮುದಾಯದ ನಿರಂತರ ಧ್ವನಿಯಾಗಿ ಬಂದಿದ್ದ, ಮಹದೇವಪ್ಪ ಅವರೇ ಅನ್ಯಾಯ ಮಾಡಿದ್ದಾರೆ ಎಂದು ಹರಿಹಾಯ್ದರು.

ADVERTISEMENT

ಚಂದ್ರಪ್ಪ ಮಾತನಾಡಿ, ₹42,017.5 ಕೋಟಿ ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಅನುದಾನದಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಕೇವಲ ₹5,104 ಕೋಟಿಯನ್ನು ನೀಡಿದ್ದು, ಉಳಿದ ಮೊತ್ತವನ್ನು 33 ಇಲಾಖೆಗಳಿಗೆ ಹಂಚಲಾಗಿದೆ. ಅಷ್ಟೂ ಮೊತ್ತವನ್ನು ಸಮಾಜ ಕಲ್ಯಾಣ ಇಲಾಖೆಗೆ ನೀಡಬೇಕಿತ್ತು ಎಂದು ಹೇಳಿದರು.

‘ಬಿಜೆಪಿ ಸರ್ಕಾರ ಶೇ 40 ರಷ್ಟು ಕಮಿಷನ್‌ ಪಡೆಯುತ್ತಿದೆ ಎಂದು ದೂರಿದ್ದ ನೀವು ಅದನ್ನು ನಿಲ್ಲಿಸಿ, ಅದರಿಂದ ಸಿಗುವ ಮೊತ್ತವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುವುದಾಗಿ ಹೇಳಿದ್ದೀರಿ. ಈಗ ಗ್ಯಾರಂಟಿಗಳಿಗೆ ₹13,433 ಕೋಟಿ ಬಳಕೆ ಮಾಡಿದ್ದೀರಿ? ಯಾವ ಪುರುಷಾರ್ಥಕ್ಕೆ ಇಷ್ಟು ಹಣ ಕೊಟ್ಟಿದ್ದೀರಿ’ ಎಂದು ಪ್ರಶ್ನಿಸಿದರು.

‘ಪರಿಶಿಷ್ಟ ಫಲಾನುಭವಿಗಳ ಪಟ್ಟಿ ಕೇಳಿದ್ದೇನೆ’

ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಕಾಯ್ದೆ ಸೆಕ್ಷನ್‌ 7 ಸಿ ಅಡಿಯಲ್ಲಿ ಈ ಅನುದಾನ ಬಳಸಲಾಗಿದೆ. ಬಳಕೆಗೆ ಅವಕಾಶವೂ ಇದೆ ಎಂದು ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರು ಸಮಜಾಯಿಷಿ ನೀಡಿದರು.

ಹಿಂದೆ ಸೆಕ್ಷನ್‌ 7 ಡಿ ಅಡಿ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಸಿ ಕೊಳ್ಳಲಾಗುತ್ತಿತ್ತು. ಬಿಜೆಪಿ ಅವಧಿಯಲ್ಲಿ ₹8,000 ಕೋಟಿ ಮತ್ತು ಕಾಂಗ್ರೆಸ್‌ನ ಈ ಹಿಂದಿನ ಅವಧಿಯಲ್ಲಿ ₹4,000 ಕೋಟಿ ಅನ್ಯ ಉದ್ದೇಶಗಳಿಗೆ ಬಳಸಿ ಕೊಳ್ಳಲಾಗಿತ್ತು. ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳಲು ಇದ್ದ ಸೆಕ್ಷನ್‌ 7 ಡಿ ಅನ್ನು ತೆಗೆದು ಹಾಕಲಾಗಿದೆ ಎಂದರು.

‘ಐದು ಗ್ಯಾರಂಟಿ ಯೋಜನೆಗಳಡಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಎಷ್ಟು ಫಲಾನುಭವಿಗಳಿಗೆ ಇದರ ಪ್ರಯೋಜನ ಸಿಕ್ಕಿದೆ ಎಂಬುದರ ಪಟ್ಟಿ ನೀಡುವಂತೆ ಕೇಳುತ್ತೇವೆ. ಪ್ರತಿಯೊಂದು ಇಲಾಖೆಯೂ ಪಟ್ಟಿ ಕೊಡಬೇಕು ಇಲ್ಲವಾದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ. ನಾನು ಆತ್ಮಸಾಕ್ಷಿಗೆ ಅನುಗುಣವಾಗಿಯೇ ನಡೆದುಕೊಂಡಿದ್ದೇನೆ’ ಎಂದು ಮಹದೇವಪ್ಪ ಹೇಳಿದರು.

ಪರಿಶಿಷ್ಟ ಹುಲಿಗಳೂ ಇವೆಯಾ: ಅಶೋಕ

ಪರಿಶಿಷ್ಟರಿಗೆ ಮೀಸಲಾದ ಅನುದಾನವನ್ನು ಹುಲಿ ಯೋಜನೆಗೆ ನೀಡಿದ್ದಾರೆ, ಹುಲಿಗಳಲ್ಲೂ ಪರಿಶಿಷ್ಟ ಹುಲಿಗಳೆಂದು ಇವೆಯೇ ಎಂದು ವಿರೋಧಪಕ್ಷದ ನಾಯಕ ಆರ್‌.ಅಶೋಕ ಪ್ರಶ್ನಿಸಿದರು.

‘ಈ ಅನುದಾನವನ್ನು ‍ಪರಿವೀಕ್ಷಣಾ ಬಂಗಲೆಗೆ (ಐಬಿ) ನೀಡಲಾಗಿದೆ. ದಲಿತರು ಅಲ್ಲಿ ಹೋಗಿ ಕೂರುತ್ತಾರೆಯೇ? ನೀವು ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಬೇಕು ದಲಿತರ ಹಣವನ್ನು ಸದ್ದುಗದ್ದಲವಿಲ್ಲದೇ ನುಂಗುವ ಕೆಲಸ ಆಗುತ್ತಿದೆ. ದಲಿತರ ಹಣ ನುಂಗಲು ಎಷ್ಟು ಧೈರ್ಯ’ ಎಂದು ಅವರು ಕೇಳಿದರು.

‘ಪರಿಶಿಷ್ಟರ ಟಿಕೆಟ್‌ ಸಂಗ್ರಹಿಸುತ್ತೀರಾ?’

‘ಶಕ್ತಿ’ ಯೋಜನೆಯಡಿ ಬಸ್‌ಗಳಲ್ಲಿ ಟಿಕೆಟ್‌ ಕೊಡುವಾಗ ಸಾಮಾನ್ಯ ವರ್ಗ ಮತ್ತು ಪರಿಶಿಷ್ಟ ವರ್ಗದವರು ಯಾರು ಎಂದು ಕೇಳಿ ಟಿಕೆಟ್‌ ಕೊಡುತ್ತೀರಾ? ಎಷ್ಟು ಜನ ಪರಿಶಿಷ್ಟರಿಗೆ ಟಿಕೆಟ್‌ ನೀಡಿದ್ದೀರಿ ಎಂಬುದನ್ನು ಹೇಗೆ ಪರೀಕ್ಷಿಸುತ್ತೀರಿ’ ಎಂದು ಬಿಜೆಪಿ ವಿ.ಸುನಿಲ್‌ಕುಮಾರ್ ಪ್ರಶ್ನಿಸಿದರು.

‘ಗ್ಯಾರಂಟಿ ಯೋಜನೆಯಡಿ ಐದು ಯೋಜನೆಗಳಿಗೆ ಸಂಬಂಧಿಸಿದ ಇಲಾಖೆಯಿಂದ ಫಲಾನುಭವಿಗಳ ಪಟ್ಟಿ ಪಡೆಯುತ್ತೇನೆ’ ಎಂದು ಹೇಳಿದ ಸಚಿವ ಮಹದೇವಪ್ಪ ಅವರಿಗೆ ಸುನಿಲ್ ಕುಮಾರ್ ಈ ಪ್ರಶ್ನೆ ಕೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.