ADVERTISEMENT

‘ಅತಿಥಿ’ ಉಪನ್ಯಾಸಕರ ನೇಮಕಾತಿ ಸ್ಥಗಿತಕ್ಕೆ ಹೊರಟ್ಟಿ ಪತ್ರ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 16:15 IST
Last Updated 27 ನವೆಂಬರ್ 2025, 16:15 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ   

ಪ್ರಜಾವಾಣಿ ವಾರ್ತೆ

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸುವಂತೆ ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಅವರಿಗೆ ಪತ್ರ ಬರೆದಿದ್ದಾರೆ. 

ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನಿಗದಿಪಡಿಸಿದ ವಿದ್ಯಾರ್ಹತೆಯ ಕಾರಣ ನೀಡಿ, ಎರಡು ದಶಕಗಳಿಂದ ಕೆಲಸ ಮಾಡಿದ ಅತಿಥಿ ಉಪನ್ಯಾಸಕರನ್ನು ಕೈಬಿಟ್ಟು, 2025–26ನೇ ಸಾಲಿನ ಎರಡು, ನಾಲ್ಕು ಹಾಗೂ ಆರನೇ ಸೆಮಿಸ್ಟರ್‌ಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿರುವುದು ಸರಿಯಲ್ಲ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪಪ್ಯಾಸಕರ ಸಂಘ ಹೇಳಿದಂತೆ ಸರ್ಕಾರದ ಈ ನಿರ್ಧಾರದಿಂದ 6,000ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಂಡಿದ್ದಾರೆ. ಅವರಿಗೆ ಸೇವಾ ಭದ್ರತೆ ನೀಡಲು ಹೊಸ ಕಾನೂನು ರೂಪಿಸಬೇಕು. ಗೌರವಯುತ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಸಲಹೆ ನೀಡಿದ್ದಾರೆ.

ADVERTISEMENT

ಅಂಗವಿಕಲರ ಪ್ರಮಾಣಪತ್ರ ಸಲ್ಲಿಸಿದ ಎಲ್ಲರಿಗೂ ಪ್ರಥಮ ಸುತ್ತಿನಲ್ಲೇ ಆಯ್ಕೆಗೆ ಅವಕಾಶ ನೀಡಿರುವ ಸೂಚನೆಯನ್ನು ಹಿಂದಕ್ಕೆ ಪಡೆಯಬೇಕು. ಯುಜಿಸಿ ಶೈಕ್ಷಣಿಕ ಅರ್ಹತೆ ಹೊರತುಪಡಿಸಿ, ಶೈಕ್ಷಣಿಕ, ಸೇವಾನುಭವ, ಅಂಗವಿಕಲರ ಕೃಪಾಂಕದ ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.