ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಪ್ರತಿಭಟಿಸಿದರು
ಬೆಂಗಳೂರು: ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನಿಗದಿಪಡಿಸಿದ ‘ಅರ್ಹತೆ’ ವಿಷಯ ಕೋರ್ಟ್‌ನಲ್ಲಿರುವ ಕಾರಣಕ್ಕೆ ಅತಿಥಿ ಉಪನ್ಯಾಸಕರ ನೇಮಕ ವಿಳಂಬವಾಗಿದೆ. ಇದರಿಂದಾಗಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ತರಗತಿಗಳು ಸುಗಮವಾಗಿ ನಡೆಯದೇ ವಿದ್ಯಾರ್ಥಿಗಳ ಕಲಿಕೆಗೆ ತೊಡಕಾಗಿದೆ.
ಶೇ 50ಕ್ಕೂ ಹೆಚ್ಚು ಪ್ರಥಮ ದರ್ಜೆ ಕಾಲೇಜುಗಳು ಬೋಧನೆಗಾಗಿ ಅತಿಥಿ ಉಪನ್ಯಾಸಕರನ್ನೇ ಅವಲಂಬಿಸಿವೆ. ಎರಡು ದಶಕಗಳಿಗೂ ಹೆಚ್ಚು ಸಮಯದಿಂದ ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಲೇಜು ಶಿಕ್ಷಣ ಇಲಾಖೆ ಬಳಸಿಕೊಳ್ಳುತ್ತಾ ಬಂದಿದೆ. ನಿಯಮದಂತೆ, ಅವರನ್ನು ಶೈಕ್ಷಣಿಕ ವರ್ಷದ ಆರಂಭದಲ್ಲಿ ನೇಮಕ ಮಾಡಿಕೊಂಡು, ವರ್ಷದ ಅಂತ್ಯಕ್ಕೆ ಕರ್ತವ್ಯದಿಂದ ಬಿಡುಗಡೆ ಮಾಡಲಾಗುತ್ತದೆ. 2024–25ನೇ ಸಾಲಿನಲ್ಲಿ ನೇಮಕವಾದ ಅತಿಥಿ ಉಪನ್ಯಾಸಕರನ್ನು ಇದೇ ಆಗಸ್ಟ್ 2ರಂದು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿತ್ತು. ಮತ್ತೆ ಆ.2ಕ್ಕೆ ಮರು ನೇಮಕ ಮಾಡಿಕೊಳ್ಳಬೇಕಿತ್ತು. ಆದರೆ, ಒಂದು ತಿಂಗಳು ಕಳೆದರೂ ನೇಮಕ ಮಾಡಿಕೊಂಡಿಲ್ಲ. ಇದರಿಂದ ಪದವಿ ತರಗತಿಗಳ 1, 3 ಹಾಗೂ 5ನೇ ಸೆಮಿಸ್ಟರ್ ವಿದ್ಯಾರ್ಥಿಗಳು ಪಾಠಗಳು ನಡೆಯದೆ ನಿತ್ಯವೂ ಪರಿತಪಿಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಂತೂ ಶೈಕ್ಷಣಿಕ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗಿದೆ.
‘ಹಳ್ಳಿಗಳಲ್ಲಿ ಹೆಣ್ಣು ಮಕ್ಕಳನ್ನು ಉನ್ನತ ಶಿಕ್ಷಣಕ್ಕೆ ಕಳುಹಿಸುವುದು ಇಂದಿಗೂ ದುಸ್ತರವಾಗಿದೆ. ನಿತ್ಯವೂ 15 ಕಿ.ಮೀ ದೂರದಿಂದ ಬರುತ್ತೇವೆ. ನಿತ್ಯವೂ ಒಂದೆರಡು ತರಗತಿಯಷ್ಟೇ ನಡೆಯುತ್ತವೆ. ವಿಜ್ಞಾನ ವಿಷಯಗಳ ತರಗತಿ ತೆಗೆದುಕೊಳ್ಳದೇ ತಿಂಗಳಾಯಿತು. ಖಾಸಗಿ ಕಾಲೇಜಿಗೆ ಸೇರಲು ಮನೆಯ ಸ್ಥಿತಿ ಅನುಕೂಲವಾಗಿಲ್ಲ. ಮನೆಯಲ್ಲಿ ಈ ಕಾಲೇಜಿನ ಸ್ಥಿತಿ ಹೇಳಿದರೆ ಬಿಡುವಂತೆ ಹೇಳುತ್ತಾರೆ. ನಮ್ಮದು ಮೂಕವೇದನೆಯಾಗಿದೆ’ ಎನ್ನುತ್ತಾರೆ ಚಳ್ಳಕೆರೆ ತಾಲ್ಲೂಕು ಸಾಣೆಕೆರೆಯ ಎನ್.ಎಚ್. ಪುಟ್ಟಮ್ಮ.
ಯುಜಿಸಿ ವಿದ್ಯಾರ್ಹತೆ ಕಡ್ಡಾಯವೇ ತೊಡಕು: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕರಾಗಿ ಕೆಲಸ ಮಾಡುವವರು ಸ್ನಾತಕೋತ್ತರ ಪದವಿಯ ಜತೆಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ) ಇಲ್ಲವೇ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್) ತೇರ್ಗಡೆಯಾಗಿರಬೇಕು, ಪಿಎಚ್.ಡಿ ಪಡೆದಿರಬೇಕು ಎಂದು ಕೆಲ ವರ್ಷಗಳ ಹಿಂದೆಯೇ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನಿಯಮ ರೂಪಿಸಿತ್ತು. ಪ್ರಥಮ ದರ್ಜೆ ಕಾಲೇಜುಗಳಲ್ಲೂ ಇಂತಹ ಅರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರನ್ನೇ ನೇಮಕ ಮಾಡಿಕೊಳ್ಳಬೇಕು ಎಂದು ಸೂಚಿಸಿತ್ತು.
ಯುಜಿಸಿ ವಿದ್ಯಾರ್ಹತೆ ಇಲ್ಲದ ಉಪನ್ಯಾಸಕರು ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಕೋರ್ಟ್, ‘ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಯುಜಿಸಿ ನಿಗದಿ ಮಾಡಿರುವ ಅರ್ಹತೆಗಳನ್ನೇ ಅತಿಥಿ ಉಪನ್ಯಾಸಕರ ಆಯ್ಕೆಗೂ ಅನ್ವಯಿಸಬೇಕು’ ಎಂದು ತೀರ್ಪು ನೀಡಿತ್ತು. ಅದರ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ಉನ್ನತ ಶಿಕ್ಷಣ ಇಲಾಖೆ, ಯುಜಿಸಿ ನಿಗದಿ ಮಾಡಿರುವ ಅರ್ಹತೆ ಹೊಂದಿಲ್ಲದ ಅತಿಥಿ ಉಪನ್ಯಾಸಕರ ಸೇವೆಯನ್ನು 2024–25ನೇ ಸಾಲಿಗೆ ಮುಂದುವರಿಸಿತ್ತು. ಇದನ್ನು ಪ್ರಶ್ನಿಸಿ ಹೊಸದಾಗಿ ಯುಜಿಸಿ ಅರ್ಹತೆ ಪಡೆದಿದ್ದ ಕೆಲವರು ರಿಟ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಯುತ್ತಿದ್ದು, ನೇಮಕಾತಿ ಪ್ರಕ್ರಿಯೆ ವಿಳಂಬವಾಗಿದೆ.
ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿದವರು ಮತ್ತು ಹೊಂದದವರ ಮಧ್ಯೆ ನಡೆಯುತ್ತಿರುವ ಕಾನೂನು ಹೋರಾಟ ಉನ್ನತ ಶಿಕ್ಷಣ ಇಲಾಖೆಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಪ್ರಕರಣದ ವಿಚಾರಣೆ ಹೈಕೋರ್ಟ್‌ನಲ್ಲಿ ಸೆ.8ರಂದು ವಿಚಾರಣೆಗೆ ಬರಲಿದ್ದು, ನಂತರ ನಿರ್ಧಾರ ತೆಗೆದುಕೊಳ್ಳಲು ಇಲಾಖೆ ನಿರ್ಧರಿಸಿದೆ.
‘ಯುಜಿಸಿ ವಿದ್ಯಾರ್ಹತೆಯ ನಿಯಮ ಕಡ್ಡಾಯಗೊಳಿಸುವುದಕ್ಕೂ ಹಿಂದಿನಿಂದಲೂ ಸ್ನಾತಕೋತ್ತರ ಪದವಿ ಪಡೆದ ಸಾವಿರಾರು ಉಪನ್ಯಾಸಕರು ಕೆಲಸ ಮಾಡುತ್ತಾ ಬಂದಿದ್ದಾರೆ. ಒಮ್ಮೆಲೇ ಅವರನ್ನು ಕೆಲಸದಿಂದ ಕೈಬಿಡುವುದು ಸಹಜ ನ್ಯಾಯಕ್ಕೆ ವಿರುದ್ಧವಾದುದು. ಈ ಅಂಶವನ್ನು ಕೋರ್ಟ್‌ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಾಗಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಒಂದು ತರಗತಿಯಲ್ಲಿ ಗರಿಷ್ಠ ವಿದ್ಯಾರ್ಥಿಗಳ ಸಂಖ್ಯೆ 90 ಇತ್ತು. ಇದರಿಂದ ಸುಗಮ ಕಲಿಕೆಗೆ ಅಡ್ಡಿಯಾಗುತ್ತದೆ ಎಂದು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಮನವಿಗೆ ಸ್ಪಂದಿಸಿದ ಉನ್ನತ ಶಿಕ್ಷಣ ಇಲಾಖೆ ಒಂದು ತರಗತಿಯ ವಿದ್ಯಾರ್ಥಿಗಳ ಸಂಖ್ಯೆಯನ್ನು 75ಕ್ಕೆ ಇಳಿಸಿದೆ.
‘ಹೊಸ ಆದೇಶ 2025–26ನೇ ಸಾಲಿನಿಂದ ಅನ್ವಯವಾಗುತ್ತಿದ್ದು, ತರಗತಿಗಳ ಸಂಖ್ಯೆ ಹೆಚ್ಚಾಗಲಿದೆ. ಹೆಚ್ಚುವರಿಯಾಗಿ ಸುಮಾರು 2,000 ಅತಿಥಿ ಉಪನ್ಯಾಸಕರಿಗೆ ಕೆಲಸ ಸಿಗಲಿದೆ. ಆದರೆ, ಯುಜಿಸಿ ವಿದ್ಯಾರ್ಹತೆಯ ಆಧಾರದಲ್ಲೇ ನೇಮಕ ಮಾಡಿಕೊಂಡರೆ ಸಾಕಷ್ಟು ಕಾರ್ಯಭಾರ ಉಳಿಯಲಿದ್ದು, ಬೋಧನೆಗೆ ಮತ್ತೂ ತೊಡಕಾಗಲಿದೆ’ ಎನ್ನುತ್ತಾರೆ ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಹನುಮಂತಗೌಡ ಕಲ್ಮನಿ.
ತೀರ್ಪು ಎರಡು ದಿನಗಳಲ್ಲಿ ಹೊರ ಬರುವ ನಿರೀಕ್ಷೆ ಇದ್ದು, ಆದೇಶದ ಬಳಿಕ ನೇಮಕಾತಿ ಮಾಡಲಾಗುವುದು. ಕಾಲಮಿತಿ ಒಳಗೆ ಪಠ್ಯ ಚಟುವಟಿಕೆ ಮುಗಿಸಲು ಕ್ರಮವಹಿಸಲಾಗುವುದು.–ಡಾ.ಎಂ.ಸಿ.ಸುಧಾಕರ್, ಉನ್ನತ ಶಿಕ್ಷಣ ಸಚಿವ
ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ 2007–08ರಲ್ಲಿ ನಡೆದಿದ್ದ ನೇಮಕಾತಿಯಲ್ಲಿ ಎಂ.ಫಿಲ್ ಆದವರಿಗೂ ಅವಕಾಶ ನೀಡಲಾಗಿತ್ತು. ಆದರೆ, ಅತಿಥಿ ಉಪನ್ಯಾಸಕರ ನೇಮಕಕ್ಕೆ ಏಕೆ ಪರಿಗಣಿಸುತ್ತಿಲ್ಲ?–ಹನುಮಂತಗೌಡ ಕಲ್ಮನಿ, ಅಧ್ಯಕ್ಷ, ರಾಜ್ಯ ಅತಿಥಿ ಉಪನ್ಯಾಸಕರ ಸಂಘ
440: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು
6,295: ಕಾಯಂ ಅಧ್ಯಾಪಕರು
10,972: 2024-25ರಲ್ಲಿದ್ದ ಅತಿಥಿ ಉಪನ್ಯಾಸಕರು
4,068: ಯುಜಿಸಿ ವಿದ್ಯಾರ್ಹತೆ ಹೊಂದಿದವರು
6,904: ಯುಜಿಸಿ ವಿದ್ಯಾರ್ಹತೆ ಪಡೆಯದವರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.