ADVERTISEMENT

ಕಲಬುರ್ಗಿ| ವ್ಯಾಪಾರ- ವಹಿವಾಟಿಗೆ ಮತ್ತೆ ಬೀಗ: ವಾಹನ ಓಡಾಟಕ್ಕೆ ಇಲ್ಲ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 8 ಮೇ 2020, 8:09 IST
Last Updated 8 ಮೇ 2020, 8:09 IST
   

ಕಲಬುರ್ಗಿ: ಕೊರೊನಾ ವೈರಾಣು ಹರಡುವ ಭೀತಿಯಿಂದ ನಗರದಲ್ಲಿ ಎಲ್ಲ ಬಗೆಯ ವಾಣಿಜ್ಯ ಚಟುವಟಿಕೆಗಳಿಗೂ ಜಿಲ್ಲಾಡಳಿತ ಮತ್ತೆ ಬೀಗ ಜಡಿದಿದೆ. ಒಂದು ದಿನ ಮಾತ್ರ ತೀವ್ರ ಹುಮ್ಮಸ್ಸಿನಲ್ಲಿ ವ್ಯಾಪಾರ ಮಾಡಿದ ವರ್ತಕರು ಈಗ ಮರಳಿ 'ಮನೆ ಸೇರಿದ್ದಾರೆ'.

ಗುರುವಾರ ಏಕಾಏಕಿ ಅಪಾರ ಸಂಖ್ಯೆಯ ಜನ ಮಾರುಕಟ್ಟೆಗೆ ಲಗ್ಗೆ ಇಟ್ಟರು. ಕನಿಷ್ಠ ಅಂತರ ಕಾಯ್ದುಕೊಳ್ಳದೇ ಬೇಕಾಬಿಟ್ಟಿ ಓಡಾಟ ಆರಂಭಿಸಿದರು. ಜಿಲ್ಲೆಯಲ್ಲಿ ಗುರುತಿಸಿದ 25 ಕಂಟೇನ್ಮೆಂಟ್ ಝೋನುಗಳ ಪೈಕಿ 20 ಝೋನುಗಳು ನಗರದ ಕೆಂದ್ರ ಭಾಗದಲ್ಲೇ ಇವೆ. ಅಲ್ಲಿ ಇನ್ನೂ ಸೀಲ್ ಡೌನ್ ಮುಂದುವರಿದಿದ್ದರೂ ಜನರು ಕದ್ದುಮುಚ್ಚಿ ಮಾರುಕಟ್ಟೆಗಳತ್ತ ಬರತೊಡಗಿದರು.

ತರಕಾರಿ, ಹಣ್ಣು, ಖರ್ಜೂರ, ಬಟ್ಟೆ, ಕೂಲರ್, ಎ.ಸಿ ಮುಂತಾದ ಅಗತ್ಯ ವಸ್ತುಗಳನ್ನು ಖರೀದಿಸಲು ಮುಗಿಬಿದ್ದರು. ವ್ಯಾಪಾರಿಗಳು ಕೂಡ ಮಾಸ್ಕ್, ಕೈಗವಸು, ಸ್ಯಾನಿಟೈಸರ್, ಸುರಕ್ಷಿತ ಅಂತರಕ್ಕೆ ಅರ್ಥವೇ ಇಲ್ಲದಂತೆ ವರ್ತಿಸಿದರು.

ADVERTISEMENT

ಎಲ್ಲಿ ನೋಡಿದರೂ ಜನಜಂಗುಳಿ, ವಾಹನ ದಟ್ಟಣೆ. ಈ ಪರಿಸ್ಥಿತಿ ಕಂಡು ಹಲವು ನಾಗರಿಕರೇ ಜಿಲ್ಲಾಡಳಿತವನ್ನು ತರಾಟೆ ತೆಗೆದಕೊಂಡರು. ತಕ್ಷಣ ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿ, ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಮರು ಆದೇಶ ಹೊರಡಿಸಿ, ಸಡಿಲಿಕೆ ಇಲ್ಲ- ಲಾಕ್ ಡೌನ್ ಮತ್ತಷ್ಟು ಬಿಗಿಯಾಗಲಿದೆ ಎಂದು ತಿಳಿಸಿದರು.

ಈ ಬಗ್ಗೆ ಅರಿತ ಹಲವರು ಶುಕ್ರವಾರ ಅಂಗಡಿಗಳ ಬಾಗಿಲು ತೆರೆಯಲೇ ಇಲ್ಲ. ಸೂಪರ್ ಮಾರುಕಟ್ಟೆ, ಶಹಾಬಜಾರ್, ಹಳೆ ಜೇವರ್ಗಿ ರಸ್ತೆ, ಎಂಎಸ್ಕೆ ಮಿಲ್ ಸೇರಿದಂತೆ ಅಲ್ಲಲ್ಲಿ ತೆರೆದ ಮಳಿಗಗಳನ್ನು ಪೊಲೀಸರು ಬಂದ್ ಮಾಡಿಸಿದರು.

ಇಷ್ಟು ದಿನ ತಪಸ್ಸಿಗೆ ಕುಳಿತಂತೆ ಶಾಂತವಾಗಿದ್ದ 'ಬಿಸಿಲೂರು' ಏಕಾಏಕಿ ವಾಣಿಜ್ಯ ಚಟುವಟಿಕೆಗಳಿಂದ ತನ್ನ ಹಳೆಯ ಕಳೆ ಪಡೆದುಕೊಂಡಿತ್ತು. ಆದರೆ, ಜನರ ವರ್ತನೆಯಿಂದಾಗಿ ಒಂದೇ ದಿನದಲ್ಲಿ ಮತ್ತೆ ಮೌನಕ್ಕೆ ಜಾರಿತು.

ಕೇಂದ್ರ ಸರ್ಕಾರ ಜಿಲ್ಲೆಯನ್ನು ಕಿತ್ತಳೆ ವಲಯ (ಆರೇಂಜ್ ಝೋನ್) ಎಂದು ಪರಿಗಣಿಸಿದ್ದರಿಂದ ಮೇ 4ರಿಂದ ಲಾಕ್ ಡೌನ್ ಸಡಿಲಿಕೆ ಮಾಡಲಾಗಿತ್ತು. ಮೇ 5 ಹಾಗೂ 6ರಂದು ಭಯದಿಂದಾಗಿ ಬಹುಪಾಲು ವ್ಯಾಪಾರಿಗಳು ಮಳಿಗೆಗಳ ಷಟರ್ ಏರಿಸಲಿಲ್ಲ. ಮುಖ್ಯ ರಸ್ತೆಗಳಲ್ಲಿ ಕೆಲವು ಅಂಗಡಿ ಮುಂಗಟ್ಟು ತೆರೆದಿದ್ದವು. ಆದರೆ ಗುರುವಾರ ಎಲ್ಲ ಬಗೆಯ ದಿನಸಿ ಅಂಗಡಿ, ಮೊಬೈಲ್, ಹಾರ್ಡ್ ವೇರ್ ಮಳಿಗೆ, ಎಲೆಕ್ಟ್ರಾನಿಕ್ಸ್ ಉಪಕರಣ, ಕಂಪ್ಯೂಟರ್, ವಾಹನಗಳ ಶೋರೂಮ್, ಬಟ್ಟೆ ಅಂಗಡಿ, ಪಾತ್ರೆ ಹಾಗೂ ಎಲ್ಲ ಬಗೆಯ ಗೃಹೋಪಯೋಗಿ ಸಲಕರಣೆಗಳ ಮಾರಾಟ ಕೂಡ ಆರಂಭವಾಗಿತ್ತು. ಇನ್ನೂ ಒಂದು ದಿನ ಕಾದು ನೋಡೋಣ ಎಂದು ನಿರ್ಧರಿಸಿದ ಹೋಟಲ್ ಹಾಗೂ ಬೇಕರಿ ಮಾಲೀಕರು, ಗುರುವಾರ (ಮೇ 7) ಪಾರ್ಸೆಲ್ ನೀಡಲು ಆರಂಭಿಸಿದ್ದರು.

ಬರೋಬ್ಬರಿ 56 ದಿನಗಳಿಂದ ಮನೆಯಲ್ಲೇ ಕುಳಿತಿದ್ದ ಜನ ಏಕಾಏಕಿ ಮಾರುಕಟ್ಟೆಗಳತ್ತ ಲಗ್ಗೆ ಇಟ್ಟರು.

ಪರಿಸ್ಥಿತಿ ಕೈಮೀರಬಹದು ಎಂದರಿತ ಜಿಲ್ಲಾಧಿಕಾರಿ ಸಡಿಲಿಕೆ ನೀಡಿದಷ್ಟೇ ವೇಗವಾಗಿ ಬಿಗಿ ಕ್ರಮಕ್ಕೆ ಆದೇಶಿಸಿದರು.

ಈಗ ಸ್ವಂತ ವಾಹನಗಳ ಓಡಾಟಕ್ಕೆ ಮಾತ್ರ ಅವಕಾಶ ಇದೆ. ಬೈಕಿನಲ್ಲಿ ಒಬ್ಬರು, ಕಾರಿನಲ್ಲಿ ಇಬ್ಬರು ಜಿಲ್ಲೆಯೊಳಗೆ ಪ್ರಾಣಿಸಬಹುದು.

ಆದರೆ, ಬೈಕಿನಲ್ಲಿ ಇಬ್ಬರು- ಮೂವರು, ಕಾರುಗಳಲ್ಲಿ ಐದಾರು ಜನ ಓಡಾಡುತ್ತಿರುವುದು ಸಹಜವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.