ADVERTISEMENT

ಬೆಂಗಳೂರು ಉತ್ತರಕ್ಕೆ ಎಚ್.ಡಿ. ದೇವೇಗೌಡ, ಚಿಕ್ಕಬಳ್ಳಾಪುರಕ್ಕೆ ಗೋಪಾಲಗೌಡ?

ಇದು ಜೆಡಿಎಸ್ ಲೆಕ್ಕಾಚಾರ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2019, 5:15 IST
Last Updated 28 ಫೆಬ್ರುವರಿ 2019, 5:15 IST
ಎಚ್.ಡಿ. ದೇವೇಗೌಡ
ಎಚ್.ಡಿ. ದೇವೇಗೌಡ   

ಬೆಂಗಳೂರು: ಬೆಂಗಳೂರು ಉತ್ತರ ಕ್ಷೇತ್ರದಿಂದ ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸುಪ್ರೀಂಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ವಿ. ಗೋಪಾಲಗೌಡ ಅವರನ್ನು ಕಣಕ್ಕೆ ಇಳಿಸುವ ಬಗ್ಗೆ ಆ ಪಕ್ಷದ ವಲಯದಲ್ಲಿ ಚರ್ಚೆ ನಡೆದಿದೆ.

ಹಾಸನ ಪ್ರತಿನಿಧಿಸುತ್ತಿರುವ ದೇವೇಗೌಡರು, ಈ ಬಾರಿ ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಕ್ಷೇತ್ರ ಬಿಟ್ಟುಕೊಡಲಿದ್ದಾರೆ. ಆದರೆ, ಅರಕಲಗೂಡು ಕ್ಷೇತ್ರದ ಮಾಜಿ ಶಾಸಕ ಕಾಂಗ್ರೆಸ್‌ನ ಎ. ಮಂಜು, ‘ದೇವೇಗೌಡರು ಸ್ಪರ್ಧಿಸಿದರೆ ಮಾತ್ರ ಬೆಂಬಲಿಸುತ್ತೇವೆ; ಪ್ರಜ್ವಲ್‌ ಗೆ ಬೆಂಬಲ ನೀಡುವುದಿಲ್ಲ’ ಎಂದು ಹೇಳಿದ್ದಾರೆ. ಇತರ ಕ್ಷೇತ್ರಗಳ ಪರಾಜಿತ ಅಭ್ಯರ್ಥಿಗಳೂ ಇದಕ್ಕೆ ಪರೋಕ್ಷವಾಗಿ ಧ್ವನಿ ಗೂಡಿಸಿದ್ದಾರೆ.

ದೇವೇಗೌಡರ ತಯಾರಿ: ಹಾಸನ ಜಿಲ್ಲೆ ತೊರೆಯಲು ನಿಶ್ಚಯಿಸಿರುವ ದೇವೇಗೌಡರು, ಕೇಂದ್ರ ಸಚಿವರೂ ಆಗಿರುವ ಬಿಜೆಪಿಯ ಡಿ.ವಿ. ಸದಾನಂದಗೌಡ ಪ್ರತಿನಿಧಿಸುವ ಬೆಂಗಳೂರು ಉತ್ತರಕ್ಕೆ ಬರಲು ತಯಾರಿ ನಡೆಸಿದ್ದಾರೆ. ಈ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕು ಎಂದು ಕಾಂಗ್ರೆಸ್‌ ನಾಯಕರಲ್ಲಿ ಬೇಡಿಕೆ ಮಂಡಿಸಿದ್ದಾರೆ ಎನ್ನಲಾಗುತ್ತಿದೆ.

ADVERTISEMENT

ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ನಲ್ಲಿ ಹಿರಿಯರ ಯಾದಿ ಅಷ್ಟಾಗಿ ಇಲ್ಲ. ಮಲ್ಲೇಶ್ವರ ಕ್ಷೇತ್ರದ ಮಾಜಿ ಶಾಸಕ ಎಂ.ಆರ್. ಸೀತಾರಾಂ ಪುತ್ರ ರಕ್ಷ ರಾಮಯ್ಯ ಆಕಾಂಕ್ಷಿ. ವಿವಿಧ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ, ನಾಯಕರ ಜತೆ ಸಮಾಲೋಚನೆಯನ್ನೂ ನಡೆಸಿದ್ದಾರೆ. ಹೈಕಮಾಂಡ್ ಸೂಚಿಸಿದರೆ ಕಣಕ್ಕೆ ಇಳಿಯುವ ಇರಾದೆಯಲ್ಲಿದ್ದಾರೆ ಬ್ಯಾಟರಾಯನ ಪುರ ಕ್ಷೇತ್ರದ ಶಾಸಕ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ.

ದೇವೇಗೌಡರೇ ಪಟ್ಟು ಹಿಡಿದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಲ್ಲ ಎಂದು ಹೇಳಲಾರರು ಎಂಬ ಮಾತುಗಳು ಆ ಪಕ್ಷದಲ್ಲಿದೆ.

ಉತ್ತರ ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 2 ಜೆಡಿಎಸ್‌, 1 ಬಿಜೆಪಿ ಹಾಗೂ 5 ಕಡೆಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಈ ಹಿಂದೆ ಪುಲಕೇಶಿ ನಗರದಲ್ಲೂ ಜೆಡಿಎಸ್‌ ಗೆದ್ದಿತ್ತು. ಈ ಕಾರಣಕ್ಕಾಗಿ ಕ್ಷೇತ್ರ ಬಿಟ್ಟುಕೊಡಿ ಎಂಬುದು ಗೌಡರ ಬೇಡಿಕೆಯ ತಿರುಳು. ಒಂದು ವೇಳೆ ಗೌಡರಿಗೆ ಬಿಟ್ಟುಕೊಟ್ಟು, ಗೆದ್ದ ಬಳಿಕ ಸಮಸ್ಯೆಯಾಗಲಿದೆ. ಮುಂದಿನ ವಿಧಾನಸಭಾ ಚುನಾವಣೆ ಹೊತ್ತಿಗೆ ಕೆಲವು ಕ್ಷೇತ್ರಗಳಿಗೆ ಬೇಡಿಕೆ ಮಂಡಿಸಬಹುದು. ಈ ಕಾರಣಕ್ಕಾಗಿ ಅವರಿಗೆ ಬಿಟ್ಟುಕೊಡುವುದು ಬೇಡ ಎಂಬುದು ಕಾಂಗ್ರೆಸ್ ಶಾಸಕರ ತಕರಾರು.

ಸಂಸದ ವೀರಪ್ಪ ಮೊಯಿಲಿ ಪ್ರತಿನಿಧಿಸುವ ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಬಿಟ್ಟುಕೊಡುವಂತೆ ಜೆಡಿಎಸ್‌ ಪಟ್ಟು ಹಾಕಿದೆ. ವಿ. ಗೋಪಾಲಗೌಡ ಅವರನ್ನು ಈ ಕ್ಷೇತ್ರದಲ್ಲಿ ಕಣಕ್ಕೆ ಇಳಿಸಿದರೆ ಬಿಜೆಪಿಯ ಎದುರಾಳಿ ಬಿ.ಎನ್. ಬಚ್ಚೇಗೌಡರನ್ನು ಸೋಲಿಸಬಹುದು ಎಂಬುದು ಗೌಡರ ಲೆಕ್ಕಾಚಾರ ಎನ್ನಲಾಗುತ್ತಿದೆ.

ಕ್ಷೇತ್ರದಲ್ಲಿ ನಿರ್ಣಾಯಕವಾಗಿರುವ ಒಕ್ಕಲಿಗರ ಮತ, ಗೋಪಾಲಗೌಡರ ಜನಪ್ರಿಯತೆಗಳು ವರವಾಗಬಹುದು ಎಂಬುದು ಅವರ ತರ್ಕ. ರೈತರು, ಕ್ಷೇತ್ರದ ಮತದಾರರು, ಪಕ್ಷದ ನಾಯಕರು ಗೋಪಾಲಗೌಡರನ್ನು ಭೇಟಿಯಾಗಿ ಈ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೈಸೂರಿಗೆ ಕೆ.ಎಸ್‌. ರಂಗಪ್ಪ?
ಸದ್ಯ ಬಿಜೆಪಿಯ ಪ್ರತಾಪ್‌ ಸಿಂಹ ಪ್ರತಿನಿಧಿಸುವ ಮೈಸೂರು–ಕೊಡಗು ಕ್ಷೇತ್ರವನ್ನೂ ತಮಗೆ ನೀಡುವಂತೆ ಜೆಡಿಎಸ್‌ ಬೇಡಿಕೆ ಮಂಡಿಸಿದೆ. ಈಗ ಹುಣಸೂರು ಕ್ಷೇತ್ರದ ಜೆಡಿಎಸ್ ಶಾಸಕರಾಗಿರುವ ಎಚ್. ವಿಶ್ವನಾಥ್2014ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಅಲ್ಲಿ ಜೆಡಿಎಸ್‌ನಿಂದ ಚಂದ್ರಶೇಖರಯ್ಯ ಕಣಕ್ಕೆ ಇಳಿದಿದ್ದರು.

‌ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಒಂಬತ್ತು ವಿಧಾನಸಭೆಗಳ ಪೈಕಿ ಜೆಡಿಎಸ್‌, ಬಿಜೆಪಿ ತಲಾ 4 ಹಾಗೂ ಕಾಂಗ್ರೆಸ್‌ 1 ಸ್ಥಾನ ಪಡೆದಿವೆ. ಸಿದ್ದರಾಮಯ್ಯ ಪುತ್ರ ಯತೀಂದ್ರ ಪ್ರತಿನಿಧಿಸುವ ವರುಣಾದ ಕೆಲವು ಭಾಗ ಮಾತ್ರ ಈ ಕ್ಷೇತ್ರ ವ್ಯಾಪ್ತಿಯಲ್ಲಿದೆ. ಕಾಂಗ್ರೆಸ್ ಬಲವೇ ಇಲ್ಲದಿರುವುದರಿಂದ ಜೆಡಿಎಸ್‌ಗೆ ಬಿಟ್ಟುಕೊಡಬೇಕು ಎಂಬ ಹಕ್ಕೊತ್ತಾಯ ಮಂಡಿಸಲಾಗುತ್ತಿದೆ. ಒಂದು ವೇಳೆ ಸಿಕ್ಕಿದರೆ, ಅಲ್ಲಿ ವಿಶ್ರಾಂತ ಕುಲಪತಿ ಕೆ.ಎಸ್‌. ರಂಗಪ್ಪ ಅವರನ್ನು ಕಣಕ್ಕೆ ಇಳಿಸುವ ಲೆಕ್ಕಾಚಾರ ಗೌಡರದ್ದಾಗಿದೆ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.