ನವದೆಹಲಿ: 2030ರ ವೇಳೆಗೆ ಭಾರತವು ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದನೆ ಮಾಡುವ ಗುರಿ ಮುಟ್ಟುವ ದೃಷ್ಟಿಯಿಂದ ಮತ್ತೊಂದು ಸುತ್ತಿನ 'ಉತ್ಪಾದನೆ ಆಧಾರಿತ ಉತ್ತೇಜನ ಸೌಲಭ್ಯ (ಪಿಎಲ್‌ಥ) ಯೋಜನೆಗೆ ಕೇಂದ್ರ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಸೋಮವಾರ ಇಲ್ಲಿ ಚಾಲನೆ ನೀಡಿದರು.
ಉಕ್ಕು ಆಮದು ಪ್ರಮಾಣಕ್ಕೆ ಅಂಕೆ ಹಾಕುವ, ದೇಶೀಯವಾಗಿ ಹೆಚ್ಚು ಪ್ರಮಾಣದಲ್ಲಿ ಉಕ್ಕು ಉತ್ಪಾದಿಸುವ ಗುರಿಯೊಂದಿಗೆ ಈ ಸೌಲಭ್ಯ ನೀಡಲಾಗುತ್ತಿದೆ ಕುಮಾರಸ್ವಾಮಿ ಹೇಳಿದರು.
ಪಿಎಲ್ ಐ 1.1 ಪೋರ್ಟಲ್ ಈಗಿನಿಂದಲೇ ನೋಂದಣಿಗೆ ತೆರೆದುಕೊಂಡಿದೆ. ಜನವರಿ 31ರವರೆಗೂ ಉಕ್ಕು ಉದ್ಯಮಿಗಳು ನೋಂದಾಯಿಸಿಕೊಳ್ಳಲು ಅವಕಾಶವಿದೆ ಎಂದು ಸಚಿವರು ಮಾಹಿತಿ ನೀಡಿದರು.
ಈ ಯೋಜನೆಯು ಮೊದಲ ಹಂತದಲ್ಲಿ ಮಹತ್ವದ ಯಶಸ್ಸು ಸಾಧಿಸಿದೆ. ₹27,106 ಕೋಟಿ ಹೂಡಿಕೆಯ ಜತೆಗೆ 14,760 ನೇರ ಉದ್ಯೋಗ ಅವಕಾಶ ಹಾಗೂ 7.90 ದಶಲಕ್ಷ ಟನ್‌ಗಳಷ್ಟು ಹೆಚ್ಚುವರಿ ವಿಶೇಷ ಉಕ್ಕಿನ ಉತ್ಪಾದನಾ ಸಾಮರ್ಥ್ಯವನ್ನು ತೋರಿಸಿದೆ. 2024ರ ಅಕ್ಟೋಬರ್ ಹೊತ್ತಿಗೆ ₹17,581 ಕೋಟಿಗಳಷ್ಟು ಹೂಡಿಕೆ ಆಗಿದೆ. ಪರಿಣಾಮವಾಗಿ 8,660 ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಅವರು ಮಾಹಿತಿ ನೀಡಿದರು.
ಜಗತ್ತಿನ ಎರಡನೇ ಅತಿದೊಡ್ಡ ಉಕ್ಕು ಉತ್ಪಾದಕ ಮತ್ತು ಗ್ರಾಹಕ ದೇಶವಾಗಿರುವ ಭಾರತವು 2022ರಿಂದ ದೇಶೀಯ ಉಕ್ಕಿನ ಬಳಕೆಯಲ್ಲಿ ಶೇ 12ಕ್ಕಿಂತ ಹೆಚ್ಚು ವಾರ್ಷಿಕ ಬೆಳವಣಿಗೆಯನ್ನು ಕಂಡಿದೆ. ಇದು ಬಲವಾದ ಆರ್ಥಿಕ ಮೂಲಭೂತ ಮತ್ತು ಮೂಲಸೌಕರ್ಯ ಮೇಲಿನ ಹೂಡಿಕೆಗಳಿಂದ ಸಾಧ್ಯವಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.