ADVERTISEMENT

HAL Dhruv NG: ವಾಣಿಜ್ಯ ಬಳಕೆಗೆ ‘ಧ್ರುವ ಎನ್‌–ಜೆನ್‌’

ನಾಗರಿಕ ವಾಯುಯಾನಕ್ಕೆ ಎಚ್‌ಎಎಲ್‌ * 1,500 ಹೆಲಿಕಾಪ್ಟರ್‌ ಮಾರಾಟದ ಗುರಿ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 0:30 IST
Last Updated 31 ಡಿಸೆಂಬರ್ 2025, 0:30 IST
<div class="paragraphs"><p>ಎಚ್‌ಎಎಲ್‌ನ ‘ಧ್ರುವ ಎನ್‌–ಜೆನ್‌’ ಹೆಲಿಕಾಪ್ಟರ್‌ನ ಹಾರಾಟಕ್ಕೆ ಚಾಲನೆ ನೀಡುವುದಕ್ಕೂ ಮುನ್ನ ಸಚಿವ ಕೆ.ರಾಮಮೋಹನ್‌ ನಾಯ್ಡು ಅವರು ಕ್ಯಾಮೆರಾಕೆ ಪೋಸು ನೀಡಿದರು –</p></div>

ಎಚ್‌ಎಎಲ್‌ನ ‘ಧ್ರುವ ಎನ್‌–ಜೆನ್‌’ ಹೆಲಿಕಾಪ್ಟರ್‌ನ ಹಾರಾಟಕ್ಕೆ ಚಾಲನೆ ನೀಡುವುದಕ್ಕೂ ಮುನ್ನ ಸಚಿವ ಕೆ.ರಾಮಮೋಹನ್‌ ನಾಯ್ಡು ಅವರು ಕ್ಯಾಮೆರಾಕೆ ಪೋಸು ನೀಡಿದರು –

   

ಪ್ರಜಾವಾಣಿ ಚಿತ್ರ

ಬೆಂಗಳೂರು: ನಾಗರಿಕ–ವಾಣಿಜ್ಯ ಬಳಕೆಗೆಂದೇ ಮಾರ್ಪಾಡು ಮಾಡಲಾದ, ಎಚ್‌ಎಎಲ್‌ನ ‘ಧ್ರುವ ಎನ್‌–ಜೆನ್‌ (ನ್ಯೂ ಜನರೇಷನ್‌)’ ಹೆಲಿಕಾಪ್ಟರ್‌ ಅನ್ನು ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್‌ ನಾಯ್ಡು ಅವರು ಮಂಗಳವಾರ ಅನಾವರಣ ಮಾಡಿ ಹಾರಾಟಕ್ಕೆ ಚಾಲನೆ ನೀಡಿದರು.

ADVERTISEMENT

2004ರಲ್ಲಿ ಅಭಿವೃದ್ಧಿಪಡಿಸಲಾದ ಧ್ರುವ ಹೆಲಿಕಾಪ್ಟರ್‌ನ ಸೇನಾ ಅವತರಣಿಕೆಯನ್ನು ಭಾರತೀಯ ಸೇನೆಯ ಮೂರೂ ಪಡೆಗಳು ಬಳಸುತ್ತಿವೆ. ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಈ ಹೆಲಿಕಾಪ್ಟರ್‌ ಅನ್ನು ನಾಗರಿಕ–ವಾಣಿಜ್ಯ ಬಳಕೆಗೂ ಬಿಡುಗಡೆ ಮಾಡುವ ಗುರಿಯನ್ನು ಎಚ್‌ಎಎಲ್‌ ಹಾಕಿಕೊಂಡಿದೆ. ಇದರ ಭಾಗವಾಗಿ ಧ್ರುವ್‌ ಹೆಲಿಕಾಪ್ಟರ್‌ನಲ್ಲಿ ಗಣನೀಯ ಬದಲಾವಣೆಗಳನ್ನು ಮಾಡಿ, ‘ಧ್ರುವ ಎನ್‌–ಜೆನ್‌’ ಅನ್ನು ಎಚ್‌ಎಎಲ್‌ ರೂಪಿಸಿದೆ.

‘ಧ್ರುವ ಎನ್‌–ಜೆನ್‌’ ಅನ್ನು ನಾಗರಿಕ ಬಳಕೆಗೆ ಬಿಡುಗಡೆ ಮಾಡುವುದಕ್ಕೂ ಮುನ್ನ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ), ಹೆಲಿಕಾಪ್ಟರ್‌ಗೆ ಪ್ರಮಾಣ ಪತ್ರ ನೀಡಬೇಕಿದೆ. ಅದರ ಭಾಗವಾಗಿ ಹೆಲಿಕಾಪ್ಟರ್‌ನ ತಾಂತ್ರಿಕ ವಿವರಗಳು ಮತ್ತು ನಾಗರಿಕ ಬಳಕೆಯ ಸಾಧ್ಯತೆಗಳ ಕುರಿತಾಗಿ ಎಚ್‌ಎಎಲ್‌, ವಿಮಾನಯಾನ ಸಚಿವರಿಗಾಗಿ ಪ್ರಾತ್ಯಕ್ಷಿಕೆಯನ್ನು ಆಯೋಜಿಸಿತ್ತು.

ಈ ಹೆಲಿಕಾಪ್ಟರ್‌ನಲ್ಲಿ ‘ಶಕ್ತಿ 1ಎಚ್‌1ಸಿ’ ಸರಣಿಯ ಎಂಜಿನ್‌ಗಳನ್ನು ಅವಳಿ ಸಂಯೋಜನೆಯಲ್ಲಿ ಕೂರಿಸಲಾಗಿದೆ. ಈ ಸಂಯೋಜನೆಗೆ ಡಿಜಿಸಿಎಯು ಈಗಾಗಲೇ ಪ್ರಮಾಣಪತ್ರ ನೀಡಿದೆ. ಹೆಲಿಕಾಪ್ಟರ್‌ನಲ್ಲಿ ಇರುವ ಇತರ ಸವಲತ್ತುಗಳ ಬಗ್ಗೆ ಮಾಹಿತಿ ಪಡೆದುಕೊಂಡ ಸಚಿವ ನಾಯ್ಡು ಅವರು, ‘ಎರಡು–ಮೂರು ತಿಂಗಳಲ್ಲಿ ಪ್ರಮಾಣಪತ್ರ ಒದಗಿಸಲು ಕ್ರಮವಹಿಸಲಾಗುವುದು’ ಎಂದರು.

ಎಚ್‌ಎಎಲ್‌ ಅಧ್ಯಕ್ಷ ಡಿ.ಕೆ.ಸುನಿಲ್‌, ‘ಧ್ರುವ ಹೆಲಿಕಾಪ್ಟರ್‌ 20 ವರ್ಷಗಳಿಂದ ಬಳಕೆಯಲ್ಲಿದೆ. ಇಷ್ಟು ದೀರ್ಘ ಅವಧಿಯಲ್ಲಿ ಎದುರಾದ ತಾಂತ್ರಿಕ ಸಮಸ್ಯೆಗಳು, ಸವಾಲುಗಳು ಮತ್ತು ಹೆಲಿಕಾಪ್ಟರ್‌ನ ಹೆಗ್ಗಳಿಕೆಗಳನ್ನು ಗಮನದಲ್ಲಿ ಇರಿಸಿಕೊಂಡು ‘ಧ್ರುವ ಎನ್‌–ಜೆನ್‌’ ಅನ್ನು ರೂಪಿಸಲಾಗಿದೆ. ನಾಗರಿಕರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಶೀಘ್ರದಲ್ಲೇ ನಾಗರಿಕ ಬಳಕೆ ಪ್ರಮಾಣ ಪತ್ರ ದೊರೆಯುವ ನಿರೀಕ್ಷೆ ಇದೆ’ ಎಂದು ಹೇಳಿದರು.

‘ಮುಂದಿನ ಹತ್ತು ವರ್ಷಗಳಲ್ಲಿ ಪ್ರವಾಸೋದ್ಯಮ, ಹೆಲಿ–ಆಂಬುಲೆನ್ಸ್, ಸಾಗರದಲ್ಲಿನ ತೈಲ ಬಾವಿ ಘಟಕಗಳ ಕ್ಷೇತ್ರದಲ್ಲಿ ಹೆಲಿಕಾಪ್ಟರ್‌ಗಳಿಗೆ ಬೇಡಿಕೆ ಹೆಚ್ಚಲಿದೆ. ಈ ಅವಧಿಯಲ್ಲಿ 1,000–1,500 ಧ್ರುವ ಎನ್‌–ಜೆನ್‌ ಹೆಲಿಕಾಪ್ಟರ್‌ಗಳನ್ನು ಮಾರಾಟ ಮಾಡುವ ಗುರಿ ಹಾಕಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

‘ಆತ್ಮನಿರ್ಭರ ಭಾರತದ ಹೆಜ್ಜೆ’

‘ದೇಶದ ನಾಗರಿಕ– ವಾಣಿಜ್ಯ ಹೆಲಿಕಾಪ್ಟರ್‌ ಸೇವಾ ಕ್ಷೇತ್ರವು ಅತ್ಯಂತ ಕ್ಷಿಪ್ರವಾಗಿ ಬೆಳೆಯುತ್ತಿದೆ. ಆದರೆ ಈ ಕ್ಷೇತ್ರದಲ್ಲಿ ರಷ್ಯಾ ಅಮೆರಿಕ ಮತ್ತು ಐರೋಪ್ಯ ಕಂಪನಿಗಳದ್ದೇ ಏಕಸ್ವಾಮ್ಯ ಇದೆ. ಇದರಲ್ಲಿ ಸ್ವಾವಲಂಬನೆ ಸಾಧಿಸಬೇಕಿದೆ. ಎಚ್‌ಎಎಲ್‌ನ ಈ ಪ್ರಯತ್ನವು ಆತ್ಮನಿರ್ಭರ ಭಾರತದತ್ತ ಮಹತ್ವದ ಹೆಜ್ಜೆಯಾಗಿದೆ’ ಎಂದು ಸಚಿವ ಕೆ.ರಾಮಮೋಹನ್‌ ನಾಯ್ಡು ಹೇಳಿದರು. ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ‘ಐದಾರು ರಾಜ್ಯಗಳು ತೈಲ ಕಂಪನಿಗಳು ಪ್ರವಾಸೋದ್ಯಮ ಸಂಸ್ಥೆಗಳು ಹೆಲಿಕಾಪ್ಟರ್‌ಗಳನ್ನು ದೊಡ್ಡ ಸಂಖ್ಯೆಯಲ್ಲಿ ಖರೀದಿಸುತ್ತಿವೆ.

ಧ್ರುವ್‌ ಎನ್‌–ಜೆನ್‌ ನಾಗರಿಕ ಬಳಕೆಗೆ ಲಭ್ಯವಾದರೆ ಆ ಮಾರುಕಟ್ಟೆಯ ದೊಡ್ಡ ಪಾಲನ್ನು ಪಡೆದುಕೊಳ್ಳಬಹುದು. ಇದಕ್ಕಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ’ ಎಂದು ವಿವರಿಸಿದರು. ‘ವಿದೇಶಿ ಹೆಲಿಕಾಪ್ಟರ್‌ಗಳ ನಿರ್ವಹಣೆ ಬಿಡಿಭಾಗಗಳು ದುಬಾರಿ. ಅವುಗಳ ನಿರ್ವಹಣಾ ಕಾರ್ಯಕ್ಕೆ ವಿದೇಶಿಯರನ್ನೇ ಅವಲಂಬಿಸಬೇಕಿದೆ. ಆದರೆ ಧ್ರುವ ಎನ್‌–ಜೆನ್‌ ಈ ಸಮಸ್ಯೆಗಳನ್ನು ನಿವಾರಿಸಲಿದೆ. ವರ್ಷದ 365 ದಿನವೂ ಎಚ್‌ಎಎಲ್‌ನಿಂದ ನಿರ್ವಹಣಾ ಸೇವೆ ಲಭ್ಯವಿರಲಿದೆ. ಹೀಗಾಗಿ ಈ ಹೆಲಿಕಾಪ್ಟರ್‌ಗೆ ಮಾರುಕಟ್ಟೆಯಿಂದ ಉತ್ತಮ ಸ್ಪಂದನೆ ದೊರೆಯುವ ನಿರೀಕ್ಷೆ ಇದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಂತ್ರಿಕ ವಿವರ

* ಹಗಲು ರಾತ್ರಿ ಮತ್ತು ಮಂಜಿನ ವಾತಾವರಣದಲ್ಲೂ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ

* ಎರಡು ಎಂಜಿನ್‌ಗಳಿದ್ದು ಒಂದು ವಿಫಲವಾದರೂ ಮತ್ತೊಂದರಲ್ಲಿ ಹಾರಾಟ ನಡೆಸಬಹದು

* ನೆಲ ಮತ್ತು ನೀರು ಎರಡರ ಮೇಲೂ ಲ್ಯಾಂಡಿಂಗ್‌ ಸವಲತ್ತು

* ಆಂಬುಲೆನ್ಸ್‌ ಸರಕು ಸಾಗಣೆ ಐಷಾರಾಮದ ಪ್ರಯಾಣಕ್ಕೆ ತಕ್ಕಂತೆ ಮಾರ್ಪಡಿಸಿಕೊಳ್ಳುವ ಸವಲತ್ತು 5500 ಕೆ.ಜಿ.ಹೆಲಿಕಾಪ್ಟರ್‌ನ ಭರ್ತಿ ತೂಕ 1055 ಕೆ.ಜಿ.ತೂಕದಷ್ಟು ಇಂಧನ ಸಾಮರ್ಥ್ಯ 250 ಕಿ.ಮೀ.ಗರಿಷ್ಠ ಹಾರಾಟ ವೇಗ 630 ಕಿ.ಮೀ.ಒಮ್ಮೆಗೆ ಕ್ರಮಿಸಬಹುದಾದ ಗರಿಷ್ಠ ಅಂತರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.