ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಸೋಮವಾರ ಆರಂಭವಾದ ಏರೊ ಇಂಡಿಯಾದಲ್ಲಿ ಎಚ್‌ಎಎಲ್ ಫ್ಯಾಮಿಲಿ ವೆಲ್‌ಫೇರ್ ಅಸೋಸಿಯೇಷನ್ ಸದಸ್ಯರು ನಡೆಸುತ್ತಿರುವ ಮಳಿಗೆಯಲ್ಲಿ ಜನರು ಖರೀದಿಯಲ್ಲಿ ತೊಡಗಿದ್ದರು
ಪ್ರಜಾವಾಣಿ ಚಿತ್ರ:ಕೃಷ್ಣಕುಮಾರ್ ಪಿ.ಎಸ್.
ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ಆಯೋಜನೆಗೊಂಡಿರುವ ಏರೊ ಇಂಡಿಯಾದ 15ನೇ ಆವೃತ್ತಿಯಲ್ಲಿ ಜಗತ್ತಿನ ಹಲವು ರಾಷ್ಟ್ರಗಳ ಕಂಪನಿಗಳು ಬಹುಕೋಟಿ ಮೊತ್ತದ ಯುದ್ಧವಿಮಾನಗಳ ಖರೀದಿ, ಮಾರಾಟದ ಮಾತುಕತೆಯಲ್ಲಿ ತೊಡಗಿವೆ. ಆದರೆ ಇಲ್ಲಿ ಜನಸಾಮಾನ್ಯರೂ ಕೆಲವೇ ನೂರು ರೂಪಾಯಿಗಳಿಗೆ ವಿಮಾನದ ಮಾದರಿ ಖರೀದಿಸುವ ಅವಕಾಶವೂ ಇದೆ.
ಹೌದು, ಎಚ್‌ಎಎಲ್ ಮತ್ತು ಭಾರತೀಯ ವಾಯುಸೇನೆಯ ನೌಕರರ ಪತ್ನಿಯರೇ ಸೇರಿಕೊಂಡು ಕಟ್ಟಿರುವ ಎರಡು ಪ್ರತ್ಯೇಕ ಫ್ಯಾಮಿಲಿ ವೆಲ್‌ಫೇರ್ ಸಂಘಗಳು ಏರೊ ಇಂಡಿಯಾ 2025ರಲ್ಲಿ ಮಳಿಗೆಗಳನ್ನು ಹೊಂದಿವೆ. ಹಲವು ಬಗೆಯ ಯುದ್ಧ ವಿಮಾನಗಳ ಮಾದರಿಗಳು, ಶರ್ಟ್, ಕ್ಯಾಪ್, ಆಭರಣ ಸೇರಿದಂತೆ ವಿವಿಧ ವಸ್ತುಗಳನ್ನು ಇಲ್ಲಿ ಕೆಲವೇ ನೂರು ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಇಲ್ಲಿಗೆ ಭೇಟಿ ನೀಡುತ್ತಿರುವ ಗ್ರಾಹಕರು ಬಗೆಬಗೆಯ ವಸ್ತುಗಳ ಖರೀದಿಯಲ್ಲಿ ತೊಡಗಿರುವ ದೃಶ್ಯ ಮೂರನೇ ದಿನವಾದ ಬುಧವಾರವೂ ಕಂಡುಬಂತು.
ಎಚ್‌ಎಎಲ್ ಮತ್ತು ಭಾರತೀಯ ವಾಯು ಸೇನೆಯಲ್ಲಿ ಕೆಲಸ ಮಾಡುವ ನೌಕರರ ಪತ್ನಿಯರೇ ಕಟ್ಟಿರುವ ಈ ಎರಡು ಸಂಘಟನೆಗಳು ಸುವರ್ಣ ಮಹೋತ್ಸವ ಆಚರಿಸಿಕೊಂಡಿವೆ. ಹತ್ತಾರು ಮಹಿಳೆಯರಿಗೆ ಉದ್ಯೋಗ ನೀಡಿವೆ. ನೌಕರಸ್ತರ ಮಕ್ಕಳ ಆರೈಕೆ ಮತ್ತು ಮಧ್ಯಾಹ್ನದ ಊಟ, ವಸ್ತ್ರ, ವಿಮಾನಗಳ ಮಾದರಿ ಸಹಿತ ಹಲವು ವಸ್ತುಗಳ ತಯಾರಿಕೆ ಮತ್ತು ಮಾರಾಟದ ಮೂಲಕ ಆದಾಯ ಗಳಿಸುತ್ತಿವೆ. ಬಂದ ಆದಾಯದಲ್ಲಿ ಕಾಡಿನಂಚಿನ, ಸೌಲಭ್ಯ ವಂಚಿತ ಶಾಲೆಗಳಿಗೆ ನೆರವು ನೀಡುತ್ತಿರುವುದು ವಿಶೇಷ.
‘ನಮ್ಮ ಸಂಸ್ಥೆ 1975ರಲ್ಲಿ ಹಪ್ಪಳ ತಯಾರಿಕೆ ಮೂಲಕ ಹುಟ್ಟಿಕೊಂಡಿತು. ಹಂತಹಂತವಾಗಿ ಬೆಳೆದ ಸಂಘವು ಸದ್ಯ 60 ಮಹಿಳಾ ನೌಕರರನ್ನು ಹೊಂದಿದೆ. ಒಂಬತ್ತು ವಿಭಾಗಗಳಲ್ಲಿ ಹಲವು ಬಗೆಯ ಕಾರ್ಯಚಟುವಟಿಕೆಗಳು ನಡೆಯುತ್ತಿವೆ. ಬರುವ ಆದಾಯದಲ್ಲಿ ಶೇ 60ರಿಂದ 70ರಷ್ಟನ್ನು ಸೌಲಭ್ಯವಂಚಿತ ಶಾಲೆಗಳಿಗೆ ದೇಣಿಗೆಯಾಗಿ ಅಥವಾ ವಸ್ತು ರೂಪದಲ್ಲಿ ನೀಡುತ್ತಾ ಬರಲಾಗಿದೆ. ಇತ್ತೀಚೆಗೆ ನಾಗರಹೊಳೆಯಲ್ಲಿರುವ ಆದಿವಾಸಿಗಳಿರುವ ಪ್ರದೇಶದ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಫಿಲ್ಟರ್‌ಗಳು, ವೃದ್ಧಾಶ್ರಮಗಳಿಗೆ ಸೌಲಭ್ಯಗಳನ್ನು ನೀಡಲಾಯಿತು’ ಎಂದು ಎಚ್‌ಎಎಲ್ ಕುಟುಂಬ ಕಲ್ಯಾಣ ಸಂಘದ ಕಾರ್ಯದರ್ಶಿ ರಶ್ಮಿ ತಿಳಿಸಿದರು.
‘ಎಚ್‌ಎಎಲ್ ಸಂಘವು ಕೇವಲ ವಸ್ತುಗಳನ್ನಷ್ಟೇ ತಯಾರಿಸುವುದಿಲ್ಲ. ಗಣಿತ, ಭೌತ ವಿಜ್ಞಾನ, ಗಣಕ ವಿಜ್ಞಾನ, ರಸಾಯನ ವಿಜ್ಞಾನ ಸಹಿತ ವಿವಿಧ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸ, ಪ್ರಾತ್ಯಕ್ಷಿಕೆಯನ್ನೂ ನಡೆಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಸಂಘ ಬೆಳೆಯುತ್ತಿದ್ದು, ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ. ಎಚ್‌ಎಎಲ್ ಒಳಗೆ ನಮ್ಮ ಸಂಘದ ಮಳಿಗೆ ಇದೆ. ಇಂಥ ಪ್ರದರ್ಶನವಿದ್ದಾಗ ಮಾತ್ರ ಹೊರಗೆ ಮಳಿಗೆ ಸ್ಥಾಪಿಸಲಾಗುತ್ತದೆ. ಪ್ರತಿ ವರ್ಷದಂತೆ ಈ ಬಾರಿಯೂ ಉತ್ಪನ್ನಗಳಿಗೆ ಹೆಚ್ಚು ಬೇಡಿಕೆ ಇದೆ’ ಎಂದು ಸಂಘದ ಸದಸ್ಯೆ ಡಾ. ಶುಭಾ ತಿಳಿಸಿದರು.
ಭಾರತೀಯ ವಾಯು ಸೇನೆಯ ಕುಟುಂಬ ಕಲ್ಯಾಣ ಸಂಘದ ಮಳಿಗೆಯಲ್ಲೂ ತರಹೇವಾರಿ ಆಭರಣಗಳು, ಆಲಂಕಾರಿಕ ವಸ್ತುಗಳು ಕಂಡುಬಂದವು. ಚನ್ನಪಟ್ಟಣದ ಗೊಂಬೆಗಳು, ಪಶ್ಚಿಮ ಬಂಗಾಳದ ಕಲಾವಿದರು ಸಿದ್ಧಪಡಿಸಿದ ಆಲಂಕಾರಿಕ ವಸ್ತುಗಳು, ಮಸಾಲಾ ಪದಾರ್ಥಗಳು, ಬಣ್ಣ ಬಣ್ಣದ ಗಾಜಿನ ಆಲಂಕಾರಿಕ ಬಾಟಲಿಗಳು, ತರಹೇವಾರಿ ಕ್ಯಾಂಡಲ್‌ಗಳು, ಡೈಕಾಸ್ಟ್‌ನ ವಿಮಾನಗಳನ್ನು ಇಲ್ಲಿ ಮಾರಾಟಕ್ಕೆ ಇಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.