ADVERTISEMENT

ಹಂಪಿ ಸ್ಮಾರಕಕ್ಕೆ ಹಾನಿ: ನಾಲ್ವರು ವಶಕ್ಕೆ

ಬೆಂಗಳೂರಿನಲ್ಲಿ ಮೂವರು, ಹೈದರಾಬಾದ್‌ನಲ್ಲಿ ಒಬ್ಬನ ವಶ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 16:54 IST
Last Updated 7 ಫೆಬ್ರುವರಿ 2019, 16:54 IST
   

ಹೊಸಪೇಟೆ/ಬಳ್ಳಾರಿ: ಹಂಪಿಯ ವಿಷ್ಣು ದೇವಸ್ಥಾನದ ಕಲ್ಲುಕಂಬ ಬೀಳಿಸಿ ಹಾನಿಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಗುರುವಾರ ವಶಕ್ಕೆ ತೆಗೆದುಕೊಂಡಿದ್ದಾರೆ.

ಈ ವಿಷಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ರಂಗರಾಜನ್ ಅವರು ಗುರುವಾರ ಸಂಜೆ ಬಳ್ಳಾರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಬಿಹಾರದ ಆಯುಷ್‌ ಸಾಹು (24), ರಾಜ ಬಾಬು (21), ರಾಜ ಆರ್ಯನ್‌ (22) ಮೂವರನ್ನು ಬೆಂಗಳೂರಿನಲ್ಲಿ ಬೆಳಿಗ್ಗೆ ಬಂಧಿಸಿದರೆ, ರಾಜೇಶ್‌ ಚೌಧರಿ (24) ಎಂಬಾತನನ್ನು ಸಂಜೆ ಹೈದರಾಬಾದ್‌ನಲ್ಲಿ ಗುರುವಾರ ವಶಕ್ಕೆ ಪಡೆಯಲಾಗಿದೆ. ಆಯುಷ್‌ ಸಾಹು ಎಂಜಿನಿಯರಿಂಗ್‌ನಲ್ಲಿ ಓದುತ್ತಿದ್ದರೆ, ಇನ್ನುಳಿದ ಮೂವರು ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಮಧ್ಯ ಪ್ರದೇಶದ ಒಬ್ಬ ಹಾಗೂ ಬಿಹಾರದ ನಾಲ್ವರು ಒಟ್ಟಿಗೆ ಸೇರಿ ಹಂಪಿ ನೋಡಲು ಬಂದಿದ್ದರು. ಈ ಪೈಕಿ ಒಬ್ಬ ಯುವಕ ಹಂಪಿ ಸುತ್ತಾಡಲು ಒಬ್ಬನೇ ಹೋಗಿದ್ದಾನೆ. ಮೂವರು ಕಲ್ಲುಕಂಬ ಬೀಳಿಸಿದರೆ, ರಾಜೇಶ್‌ ಚೌಧರಿ ಅದನ್ನು ಮೊಬೈಲ್‌ನಲ್ಲಿ ಚಿತ್ರಿಕರಿಸಿದ್ದಾನೆ. ’ನಾಲ್ಕು ಕಂಬಗಳು ಮೊದಲೇ ಬಿದ್ದಿದ್ದವು. ಒಂದು ಕಂಬವನ್ನು ಮೋಜಿಗಾಗಿ ಬೀಳಿಸಿದ್ದೇವೆ. ಹಂಪಿ ಪರಂಪರೆಯ ಮಹತ್ವ ಗೊತ್ತಿರಲಿಲ್ಲ ಎಂದು ಯುವಕರು ತಪ್ಪು ಒಪ್ಪಿಕೊಂಡಿದ್ದಾರೆ. ಬೆದರಿಕೆ ಕರೆಗಳು ಬರುತ್ತಿವೆ’ ಎಂದೂ ಹೇಳಿಕೊಂಡಿದ್ದಾರೆ’ ಎಂದು ತಿಳಿಸಿದರು.

‘ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು (ಎ.ಎಸ್‌.ಐ.) ವರ್ಷದ ಹಿಂದೆ ಘಟನೆ ನಡೆದಿರಬಹುದು ಎಂದು ಹೇಳಿದೆ. ಅದೇ ನಿಜವಿರಬಹುದು’ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಪಿ.ಎಸ್‌.ಐ.ಗಳಾದ ಕಾಳಿಂಗ, ಚಂದನ್, ಮೊಹಮ್ಮದ್ ಗೌಸ್ ಮತ್ತು ಪಂಪನಗೌಡ ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಕಲ್ಲುಕಂಬ ಬೀಳಿಸಿದ ವಿಡಿಯೊ ವೈರಲ್‌ ಆಗಿ, ಭಾರಿ ಸುದ್ದಿ ಮಾಡಿತ್ತು. ಕೃತ್ಯವೆಸಗಿದವರ ಬಂಧನಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ’ಘಟನೆಗೆ ಸಂಬಂಧಿಸಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ’ ಎಂದು ಎ.ಎಸ್‌.ಐ. ಫೆ. 6ರಂದು ಟ್ವೀಟ್‌ ಮಾಡಿತ್ತು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.