ADVERTISEMENT

ದೃಢೀಕರಣ ಪತ್ರ ಕೇಳಿರುವುದಕ್ಕೆ ಆಕ್ರೋಶ

ವಿದ್ಯಾರ್ಥಿಗಳಿಗೆ ಕಡಿವಾಣ ಹಾಕಲು ಮುಂದಾದ ಹಂಪಿ ಕನ್ನಡ ವಿಶ್ವವಿದ್ಯಾಲಯ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 9:42 IST
Last Updated 8 ಫೆಬ್ರುವರಿ 2020, 9:42 IST

ಹೊಸಪೇಟೆ: ರ್‍ಯಾಗಿಂಗ್‌ ತಡೆಯುವ ನೆಪದಲ್ಲಿ ವಿದ್ಯಾರ್ಥಿಗಳಿಂದ ದೃಢೀಕರಣ ಪತ್ರ ಬರೆಸಿಕೊಂಡು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳ ಮಾಸಿಕ ಪ್ರೋತ್ಸಾಹ ಧನಕ್ಕೆ ಕತ್ತರಿ ಹಾಕಲು ಹಂಪಿ ಕನ್ನಡ ವಿಶ್ವವಿದ್ಯಾಲಯ ಮುಂದಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಮಾಸಿಕ ಧನ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಇತ್ತೀಚೆಗೆ ವಿಶ್ವವಿದ್ಯಾಲಯದ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಅದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದಲೇ ವಿದ್ಯಾರ್ಥಿಗಳು, ಅವರ ಪೋಷಕರಿಂದ ದೃಢೀಕರಣ ಪತ್ರ ಬರೆಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಇತ್ತೀಚೆಗೆ ನಡೆದ ವಿಶ್ವವಿದ್ಯಾಲಯದ 202ನೇ ಕಾರ್ಯಕಾರಿ ಸಮಿತಿ ಸಭೆಯಲ್ಲಿ ವಿದ್ಯಾರ್ಥಿಗಳಿಂದ ದೃಢೀಕರಣ ಪತ್ರ ಬರೆಸಿಕೊಳ್ಳುವುದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಅದರ ಪ್ರಕಾರ, ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಯಾವುದೇ ರೀತಿಯ ರ್‍ಯಾಗಿಂಗ್‌, ಅಪರಾಧ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗುವಂತಿಲ್ಲ. ಸರ್ಕಾರದ ನಿಗದಿಪಡಿಸಿದ ಪ್ರೋತ್ಸಾಹ ಧನ ಹಾಗೂ ಶಿಷ್ಯ ವೇತನ ಮಾತ್ರ ನಿರೀಕ್ಷಿಸುವೆ. ವಿಶ್ವವಿದ್ಯಾಲಯದಿಂದ ಪ್ರೋತ್ಸಾಹ ಧನ, ಶಿಷ್ಯ ವೇತನ ನಿರೀಕ್ಷಿಸುವುದಿಲ್ಲ ಎಂಬ ಅಂಶ ಇದೆ. ಈ ಕುರಿತು ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ₹20 ಬಾಂಡ್‌ನಲ್ಲಿ ಫೆ.15ರೊಳಗೆ ಬರೆದುಕೊಡಬೇಕು. ಈ ವಿಷಯವೇ ಈಗ ವಿದ್ಯಾರ್ಥಿಗಳನ್ನು ಕೆರಳಿಸಿದೆ.

ADVERTISEMENT

‘ಮೊದಲಿನಿಂದಲೂ ವಿಶ್ವವಿದ್ಯಾಲಯವು ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ₹10,000 ಮಾಸಿಕ ಪ್ರೋತ್ಸಾಹ ಧನ ನೀಡುತ್ತ ಬಂದಿದೆ. ಹೋದ ವರ್ಷ ಪ್ರೋತ್ಸಾಹ ಧನ ಕೊಡಲು ವಿಳಂಬ ಮಾಡಿದ್ದಕ್ಕೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಹೀಗಾಗಿ ರ್‍ಯಾಗಿಂಗ್‌ ನೆಪದಲ್ಲಿ ಅದಕ್ಕೆ ಕೊಕ್ಕೆ ಹಾಕಲು ವಿಶ್ವವಿದ್ಯಾಲಯ ದೃಢೀಕರಣ ಪತ್ರದ ಮೊರೆ ಹೋಗಿದೆ’ ಎಂದು ಹೆಸರು ಹೇಳಲಿಚ್ಛಿಸದ ವಿದ್ಯಾರ್ಥಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.