ADVERTISEMENT

ಬೆಳಗಾವಿ: ನೌಕರಿಗಾಗಿ ಜಿಲ್ಲಾಧಿಕಾರಿ ಎದುರು ಕಣ್ಣೀರಿಟ್ಟ ಅಂಗವಿಕಲ ಯುವತಿ

ಅನುಕಂಪದ ಆಧಾರದ ಮೇಲೆ ಕೆಲಸ ಕೊಡಿಸಿದ್ದ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 11:13 IST
Last Updated 18 ಜೂನ್ 2020, 11:13 IST
ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಂಗವಿಕಲ ಯುವತಿ ಸಲೀಮಾ ತಹಶೀಲ್ದಾರ್‌ ಕಣ್ಣೀರಿಟ್ಟರು
ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಂಗವಿಕಲ ಯುವತಿ ಸಲೀಮಾ ತಹಶೀಲ್ದಾರ್‌ ಕಣ್ಣೀರಿಟ್ಟರು   

ಬೆಳಗಾವಿ: ನೌಕರಿಗಾಗಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಧರಣಿ ನಡೆಸಿದ ರಾಮದುರ್ಗದ ಅಂಗವಿಕಲ (ಎಡಗೈ ಅಸಹಜವಾಗಿದೆ) ಯುವತಿ, ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಅವರೆದುರು ಕಣ್ಣೀರಿಟ್ಟರು.

‘ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ವೇಳೆಅನುಕಂಪ ಆಧಾರದ ಮೇಲೆ ನನಗೆ ರಾಮದುರ್ಗ ತಹಶೀಲ್ದಾರ್‌ ಕಚೇರಿಯಲ್ಲಿ ಸಹಾಯಕಿ ಕೆಲಸ ಕೊಡಿಸಿದ್ದರು. ಐದು ತಿಂಗಳು ಕೆಲಸ ಮಾಡಿದ್ದೇನೆ. ಆದರೆ, ಕೇವಲ ₹ 10 ಸಾವಿರ ಸಂಬಳವನ್ನಷ್ಟೇ ನೀಡಲಾಗಿದೆ. ಬಳಿಕ ಕೆಲಸಕ್ಕೆ ಬರುವುದು ಬೇಡ ಎನ್ನುತ್ತಿದ್ದಾರೆ. ಕೆಲಸ ಖಾಲಿ ಇಲ್ಲ ಎನ್ನುತ್ತಿದ್ದಾರೆ. ನನಗೆ ನ್ಯಾಯ ಕೊಡಿಸಬೇಕು‘ ಎಂದು ಅಳಲು ತೋಡಿಕೊಂಡರು.

ಅವರಿಂದ ಮನವಿ ಸ್ವೀಕರಿಸಿ ದೂರು ಆಲಿಸಿದ ಜಿಲ್ಲಾಧಿಕಾರಿ, ‘ನೀವು ಸ್ವಲ್ಪ ದಿನ ಕಾಯಬೇಕು. ಗುತ್ತಿಗೆ ಆಧಾರದ ಮೇಲೆ ಕೆಲಸ ಕೊಡಿಸುತ್ತೇನೆ’ ಎಂದು ಭರವಸೆ ನೀಡಿದರು.

ADVERTISEMENT

‘ನನಗೆ ಈಗಲೇ ಸರಿಯಾದ ಕೆಲಸ ಬೇಕು; ಸಂಬಳ ಬೇಕು’ ಎಂದು ಯುವತಿ ಪಟ್ಟು ಹಿಡಿದು ನೆಲದ ಮೇಲೆ ಹೊರಳಾಡಿದರು.

ಇದರಿಂದ ಸಿಟ್ಟಾದ ಜಿಲ್ಲಾಧಿಕಾರಿ, ‘ನಾನು ಹೇಳಿದ್ದನ್ನು ಅರ್ಥ ಮಾಡಿಕೊಳ್ಳುವುದನ್ನು ಬಿಟ್ಟು ಹೀಗೆ ಅತ್ತರೆ ಹೇಗೆ’ ಎಂದು ಪ್ರಶ್ನಿಸಿ ತೆರಳಿದರು. ಬಳಿಕ ಯುವತಿಯನ್ನು ಮಹಿಳಾ ಪೊಲೀಸರು ಸಮಾಧಾನಪಡಿಸಿ ಅಲ್ಲಿಂದ ಕಳುಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.