ADVERTISEMENT

ಹಾಸನಾಂಬೆ ದರ್ಶನೋತ್ಸವ: ಹನ್ನೊಂದು ದಿನ ಅಹೋರಾತ್ರಿ ದರ್ಶನ

ಮೊದಲ ದಿನ ಸಾರ್ವಜನಿಕರಿಗೆ ದರ್ಶನ ಇಲ್ಲ, ಝಗಮಗಿಸುತ್ತಿರುವ ರಸ್ತೆಗಳು, ಆರು ಲಕ್ಷ ಭಕ್ತರ ನಿರೀಕ್ಷೆ

ಕೆ.ಎಸ್.ಸುನಿಲ್
Published 17 ಅಕ್ಟೋಬರ್ 2019, 9:19 IST
Last Updated 17 ಅಕ್ಟೋಬರ್ 2019, 9:19 IST
ಹಾಸನಾಂಬ ದೇವಸ್ಥಾನ ಮುಂಭಾಗ ಸ್ವಾಗತ ಕಮಾನು
ಹಾಸನಾಂಬ ದೇವಸ್ಥಾನ ಮುಂಭಾಗ ಸ್ವಾಗತ ಕಮಾನು   

ಹಾಸನ: ಅರೆ, ಬರೆ ಸಿದ್ಧತೆ ನಡುವೆಯೇ ಸಪ್ತ ಮಾತೃಕೆಯರಲ್ಲಿ ಒಬ್ಬಳಾದ ಅಧಿದೇವತೆ ಹಾಸನಾಂಬೆ ದರ್ಶನೋತ್ಸವ ಗುರುವಾರದಿಂದ ಆರಂಭವಾಗಲಿದ್ದು, ನಗರದ ಪ್ರಮುಖ ರಸ್ತೆಗಳು ದೀಪಾಲಂಕಾರದಿಂದ ಝಗಮಗಿಸುತ್ತಿವೆ.

ಅ.17ರಿಂದ 29ರವರೆಗೆ ದೇವಿ ದರ್ಶನ ಭಾಗ್ಯ ಕರುಣಿಸುವಳು. ಮೊದಲ ದಿನ ಹಾಗೂ ಕೊನೆ ದಿನ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಇಲ್ಲ. ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುವುದರಿಂದ ತೊಂದರೆ ಆಗದಂತೆ ಕುಡಿಯುವ ನೀರು, ಪ್ರಸಾದ, ಶೌಚಗೃಹ ವ್ಯವಸ್ಥೆ ಮಾಡಲಾಗಿದೆ.

ಸಂಪ್ರದಾಯದಂತೆ ಅಶ್ವಯುಜ ಮಾಸದ ಪೂರ್ಣಿಮೆಯ ನಂತರ ಮೊದಲ ಗುರುವಾರ ಮಧ್ಯಾಹ್ನ 12.30ಕ್ಕೆ ಅರಸು ವಂಶಸ್ಥ ನಂಜರಾಜ ಅರಸ್‌ ಬಾಳೆ ಕಂದು ಕಡಿದ ಬಳಿಕ ಅಮ್ಮನವರ ಗರ್ಭಗುಡಿ ಬಾಗಿಲು ಶಾಸ್ತ್ರೋಕ್ತವಾಗಿ ತೆರೆಯಲಾಗುತ್ತದೆ.

ADVERTISEMENT

ಮೊದಲ ದಿನ ದೇವಿಯ ಗರ್ಭಗುಡಿ ಸ್ವಚ್ಛತೆ, ಸುಣ್ಣಧಾರಣೆ ಮತ್ತು ಜಿಲ್ಲಾ ಖಜಾನೆಯಿಂದ ತೆಗೆದುಕೊಂಡು ಹೋಗುವ ಆಭರಣ ಧಾರಣೆ ನಂತರ ಪೂಜಾ ಕಾರ್ಯ ನಡೆಯುತ್ತದೆ. ಹಾಗಾಗಿ ಮೊದಲ ದಿನ ಸಾರ್ವಜನಿಕರಿಗೆ ದರ್ಶನ ಇಲ್ಲ. ಅ.18ರಿಂದ ಬೆಳಿಗ್ಗೆಯಿಂದಲೇ ಗರ್ಭಗುಡಿ ಬಾಗಿಲು ತೆರೆದು ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಅ.29ರ ಮಧ್ಯಾಹ್ನ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತದೆ. ನೈವೇದ್ಯದ ಅವಧಿಯನ್ನು ಎರಡು ತಾಸಿಗೆ ಸೀಮಿತಗೊಳಿಸಲಾಗಿದೆ. ಈ ಸಮಯದಲ್ಲಿ ಭಕ್ತರಿಗೆ ದೇವಿ ದರ್ಶನ ಇರುವುದಿಲ್ಲ.

ಸಪ್ತಮಾತೃಕೆಯ ಇತಿಹಾಸವನ್ನು ಬಣ್ಣಿಸುವ ಹಿನ್ನಲೆಯಲ್ಲಿ ಹಾಸನಾಂಬ ರಥ ನಿರ್ಮಾಣ ಮಾಡಲಾಗಿದ್ದು, ಅ.18ರಿಂದ ಜಿಲ್ಲೆಯ ಏಳು ತಾಲ್ಲುಕುಗಳಿಗೂ ಹಾಸನಾಂಬ ರಥ ಸಂಚರಿಸಿ ಪ್ರಮುಖ ವೃತ್ತಗಳಲ್ಲಿ ಸಪ್ತಮಾತೃಕೆಯರ ಇತಿಹಾಸ ವರ್ಣನೆ ಜತೆಗೆ ಕಲಾವಿದರು ಹಾಸನಾಂಬೆ ಕುರಿತು ಹಾಡುಗಳನ್ನು ಪ್ರಸ್ತುತ ಪಡಿಸಲಿದ್ದಾರೆ.

ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ದೇವಸ್ಥಾನದ ಹಿಂಭಾಗದಿಂದ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಳೆಯಿಂದ ರಕ್ಷಣೆಗಾಗಿ ಸರದಿ ಸಾಲುಗಳಿಗೆ ಚಾವಣಿ ನಿರ್ಮಿಸಲಾಗಿದೆ. ಗಣ್ಯರ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

ಪ್ರಮುಖ ರಸ್ತೆಗಳಲ್ಲಿ ವಿಶೇಷವಾಗಿ ಬಿ.ಎಂ. ರಸ್ತೆಯಲ್ಲಿ ಡೇರಿ ಸರ್ಕಲ್‌ನಿಂದ ಎನ್‌.ಆರ್‌.ವೃತ್ತದವರೆಗೂ ಸ್ವಚ್ಛಗೊಳಿಸಲಾಗಿದೆ. ದೇಗುಲದ ಸ್ವಚ್ಛತೆಗೆ ಕಾರ್ಮಿಕರ ವಿಶೇಷ ತಂಡ ನಿಯೋಜಿಸಲಾಗಿದೆ. ದೇಗುಲದ ಆವರಣ, ರಾಜಗೋಪುರ, ಬಿ.ಎಂ ರಸ್ತೆ, ಎನ್‌.ಆರ್‌. ವೃತ್ತ, ಡಿಸಿ ಕಚೇರಿ ಮುಂಭಾಗದ ಬಿಎಂ ರಸ್ತೆಯಿಂದ ರೈಲ್ವೆ ನಿಲ್ದಾಣದವರೆಗೂ ವಿದ್ಯುತ್‌ ದೀಪಗಳಿಂದ ಝಗಮಗಿಸುತ್ತಿದೆ.

ನೇರ ದರ್ಶನಕ್ಕೆ ₹ 1 ಸಾವಿರ ಹಾಗೂ ಶೀಘ್ರ ದರ್ಶನಕ್ಕೆ ₹ 300 ಟಿಕೆಟ್ ವ್ಯವಸ್ಥೆ ಮುಂದುವರಿಸಲಾಗಿದೆ. 70 ವರ್ಷ ಮೇಲ್ಟಟ್ಟ ವಯೋವೃದ್ಧರು ಹಾಗೂ ಅಂಗವಿಕಲರಿಗಾಗಿ ನೇರ ಮತ್ತು ಉಚಿತ ದರ್ಶನದ ವ್ಯವಸ್ಥೆ ಮಾಡಲಾಗಿದೆ. 28ರ ರಾತ್ರಿ 10.30ಕ್ಕೆ ಸಿದ್ದೇಶ್ವರ ಸ್ವಾಮಿ ಚಂದ್ರ ಮಂಡಲ ರಥೋತ್ಸವ ಇದೆ.

ಹಾಸನಾಂಬೆ ದೇವಿ ಮಹಿಮೆ
ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಹಾಸನಾಂಬೆ ದೇವಿ ಹಲವು ಪವಾಡ ಸದೃಶ ಸಂಗತಿ ಮೈಗೂಡಿಸಿಕೊಂಡಿದ್ದಾಳೆ. ಗರ್ಭಗುಡಿ ಬಾಗಿಲು ಹಾಕುವ ಸಂದರ್ಭದಲ್ಲಿ ಹಚ್ಚಿದ ಹಣತೆ, ಇಟ್ಟ ನೈವೇದ್ಯ ಹಾಗೂ ಮುಡಿಸಿದ ಹೂ ಬಾಡುವುದಿಲ್ಲ ಎಂಬ ನಂಬಿಕೆ ಹಿಂದಿನಿಂದಲೂ ಇದೆ.

ಹಾಸನ ನಗರ 12ನೇ ಶತಮಾನದಲ್ಲಿ ಸಿಂಹಾಸನಪುರಿ ಎಂದು ಪ್ರಸಿದ್ಧವಾಗಿತ್ತು. ನಗರವನ್ನಾಳುತ್ತಿದ್ದ ಪಾಳೇಗಾರ ಕೃಷ್ಣಪ್ಪ ನಾಯಕ ಕುದುರೆಯೇರಿ ಹೋಗುತ್ತಿರುವಾಗ ಹಾಸನಾಂಬ ದೇಗುಲದ ಸ್ಥಳದಲ್ಲಿ ಮೊಲವೊಂದು ರಸ್ತೆಗೆ ಅಡ್ಡಲಾಗಿ ಓಡಿ ಹೋಯಿತು. ಅಂದು ಆತನ ಕನಸಿನಲ್ಲಿ ಕಾಣಿಸಿಕೊಂಡ ಸಪ್ತಮಾತೃಕೆಯರು, ಮೊಲ ಅಡ್ಡ ಹೋದ ಜಾಗದಲ್ಲಿ ತಾವು ನೆಲೆಸಿದ್ದು ಅಲ್ಲಿ ಗುಡಿ ನಿರ್ಮಿಸಲು ಸೂಚಿಸಿದರು. ಅದರಂತೆ, ಕೃಷ್ಣಪ್ಪ ನಾಯಕ ಅಲ್ಲಿ ದೇವಸ್ಥಾನ ನಿರ್ಮಿಸಿದ.

ವಾರಣಾಸಿಯಿಂದ ದಕ್ಷಿಣದತ್ತ ವಿಹಾರಾರ್ಥವಾಗಿ ಬಂದ ಸಪ್ತಮಾತೃಕೆ ಯರು ಇಲ್ಲೇ ನೆಲೆಸಿದರು. ವೈಷ್ಣವಿ, ಕೌಮಾರಿ, ಮಹೇಶ್ವರಿಯರು ಹಾಸನಾಂಬ ದೇವಾಲಯದಲ್ಲಿ ಹುತ್ತ ರೂಪದಿಂದ, ಬ್ರಾಹ್ಮಿದೇವಿ ಆಲೂರು ತಾಲ್ಲೂಕಿನ ಕೆಂಚಮ್ಮನ ಹೊಸಕೋಟೆಯಲ್ಲಿ ಹಾಗೂ ಚಾಮುಂಡಿ, ವಾರಾಹಿ, ಇಂದ್ರಾಣಿಯರು ನಗರದ ಮಧ್ಯಭಾಗದಲ್ಲಿರುವ ದೇವಿಗೆರೆಯಲ್ಲಿ ನೆಲೆಸಿದ್ದಾರೆ ಎನ್ನುವುದು ಭಕ್ತರ ನಂಬಿಕೆ.

ಅಲಂಕಾರಗಳಲಿಲ್ಲದ ದೇವಿಯ ವಿಶ್ವರೂಪದರ್ಶನಕ್ಕೆ ಮೊದಲ ದಿನ ಮಾತ್ರ ಅವಕಾಶ ಇರುತ್ತದೆ. ಬಾಗಿಲು ತೆರೆದ ದಿನ ಸಂಜೆ ದೇವಿಯನ್ನು ವಸ್ತ್ರಾಭರಣಗಳಿಂದ ಅಲಂಕರಿಸಿ ಪೂಜೆ ಆರಂಭಿಸಲಾಗುತ್ತದೆ.

ಹಾಸನಾಂಬ ಡಾಟ್‌ ಕಾಂ
ಹಾಸನಾಂಬ ದೇವಿಯ ಜಾತ್ರೋತ್ಸವದ ಎಲ್ಲ ಮಾಹಿತಿ ಭಕ್ತರ ಬೆರಳ ತುದಿಯಲ್ಲಿ ಲಭ್ಯವಾಗುವಂತೆ ಜಿಲ್ಲಾಡಳಿತ ವತಿಯಿಂದ www.srihasanamba.com ವೆಬ್‌ಸೈಟ್‌ ರೂಪಿಸಲಾಗಿದೆ.

ಜಾಲತಾಣದಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಮಾಹಿತಿ ಲಭ್ಯವಿದ್ದು, ಜಿಲ್ಲೆಯಲ್ಲಿನ ಕುದುರಗುಂಡಿ ಶಾಸನ, ದೇವಾಲಯದ ಇತಿಹಾಸ, ಹಾಸನಾಂಬ ದೇವಿ ದರ್ಶನದ ಟಿಕೆಟ್‌ ಲಭ್ಯತೆ, 13 ದಿನಗಳ ದರ್ಶನದ ವೇಳಾಪಟ್ಟಿ, ಪ್ರಸಾದ ವ್ಯವಸ್ಥೆ, ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ಅಳವಡಿಸಲಾಗಿದೆ.

ಸಂಸದರು, ಶಾಸಕರ ಹೆಸರಿಲ್ಲ
ಹಾಸನಾಂಬದೇವಿ ದರ್ಶನ ಹಾಗೂ ಜಾತ್ರಾ ಮಹೋತ್ಸವ ಸಂಬಂಧ ಜಿಲ್ಲಾಡಳಿತ ಪ್ರಕಟಿಸಿರುವ ಆಹ್ವಾನ ಪತ್ರಿಕೆಯಲ್ಲಿ ಸಂಸದರು ಹಾಗೂ ಶಾಸಕರ ಹೆಸರಿಲ್ಲದಿರುವುದು ಅಸಮಾಧಾನ ಉಂಟು ಮಾಡಿದೆ.

ಆಹ್ವಾನ ಪತ್ರಿಕೆಯಲ್ಲಿ ದೇವಿಯ ದರ್ಶನ ಪಡೆದು ಅವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಕೋರುವ ಮನವಿಯೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಶಾಸಕ ಪ್ರೀತಂ ಗೌಡ, ಜಿಲ್ಲಾಧಿಕಾರಿ ಆರ್‌.ಗಿರೀಶ್‌, ಆಡಳಿತಾಧಿಕಾರಿ ಎಚ್.ಎಲ್‌.ನಾಗರಾಜ್, ತಹಶೀಲ್ದಾರ್‌ ಮೇಘನಾ ಅವರ ಹೆಸರು ಪ್ರಕಟವಾಗಿದೆ.

ಉದ್ದೇಶಪೂರ್ವಕವಾಗಿ ಜೆಡಿಎಸ್‌ ಶಾಸಕರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಸೇರಿಸಿಲ್ಲ ಎನ್ನುವ ಆರೋಪ ರಾಜಕೀಯ ಬಣ್ಣ ಪಡೆದುಕೊಂಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಡಿಸಿ ಗಿರೀಶ್‌, ‘ಹಿಂದಿನಿಂದ ನಡೆದುಕೊಂಡು ಬಂದಿರುವಂತೆ ಆಹ್ವಾನ ಪತ್ರಿಕೆ ಮುದ್ರಿಸಲಾಗಿದೆ. ಆಕ್ಷೇಪ ಕೇಳಿ ಬಂದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಭಕ್ತರನ್ನು ಸ್ವಾಗತಿಸುತ್ತಿರುವ ಗುಂಡಿಗಳು
ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಸಮೀಪಿಸುತ್ತಿದ್ದರೂ ಜಾತ್ರೆಗೆ ಬರುವ ಭಕ್ತರನ್ನು ಕಸದ ರಾಶಿ, ಗುಂಡಿ ಬಿದ್ದ ರಸ್ತೆಗಳೇ ಸ್ವಾಗತಿಸುತ್ತಿವೆ. ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲೇ ರಾಶಿಗಟ್ಟಲೇ ತ್ಯಾಜ್ಯ ಸುರಿಯಲಾಗಿದೆ. ಲಕ್ಷಾಂತರ ಭಕ್ತರು ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸಂತೇಪೇಟೆ ವೃತ್ತ, ಪಾಯಣ್ಣ ರಸ್ತೆ, ಕಸ್ತೂರ ಬಾರ ರಸ್ತೆಯಲ್ಲಿ ಅನೈರ್ಮಲ್ಯ ಹೆಚ್ಚಿದೆ. ದೇವಸ್ಥಾನ ಸಂಪರ್ಕಿಸುವ ರಸ್ತೆಯಲ್ಲಿ ಅಳೆತ್ತರದ ಗುಂಡಿ ಬಿದ್ದಿದ್ದು ಹೋಗುವುದು ಕಷ್ಟವಾಗಿದೆ.

*
ದಿನಕ್ಕೆ ಮೂರು ಪಾಳಿಯಂತೆ 300 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಅಪರಾಧ ಇಲ್ಲವೇ ಅಹಿತಕರ ಘಟನೆ ನಡೆದರೆ ಪತ್ತೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.
-ರಾಮ್ ನಿವಾಸ್ ಸೆಪಟ್, ಪೊಲೀಸ್‌ ವರಿಷ್ಠಾಧಿಕಾರಿ

*
ಹಾಸನಾಂಬೆ ದರ್ಶನೋತ್ಸವ ಶಾಂತಿ, ಸುವ್ಯವಸ್ಥಿತವಾಗಿ ನಡೆಯಲು ಎಲ್ಲಾ ರೀತಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆರು ಲಕ್ಷ ಜನರು ಭೇಟಿ ನೀಡುವ ನಿರೀಕ್ಷೆ ಇದ್ದು,ಅಗತ್ಯ ಸೌಕರ್ಯಗಳನ್ನು ವ್ಯವಸ್ಥೆ ಮಾಡಲಾಗಿದೆ.
-ಎಚ್.ಎಲ್‌.ನಾಗರಾಜ್‌, ದೇವಸ್ಥಾನದ ಆಡಳಿತಾಧಿಕಾರಿ

ಸಪ್ತಮಾತೃಕೆಯರ ಇತಿಹಾಸ ಬಣ್ಣಿಸುವ ಸ್ತಬ್ಧ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.