ADVERTISEMENT

ಹರಿಪ್ರಸಾದ್ ವಿಚಾರಣೆಗೆ ರಾಜ್ಯಪಾಲರ ಒತ್ತಡ ಕಾರಣ: ಪ್ರಿಯಾಂಕ್

​ಪ್ರಜಾವಾಣಿ ವಾರ್ತೆ
Published 20 ಜನವರಿ 2024, 16:37 IST
Last Updated 20 ಜನವರಿ 2024, 16:37 IST

ಬೆಂಗಳೂರು: ‘ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಗೋಧ್ರಾ ಮಾದರಿಯಲ್ಲಿ ಘಟನೆಗಳು ನಡೆಯಬಹುದು ಎಂದು ಎಚ್ಚರಿಕೆ ನೀಡಿದ್ದ ಬಿ.ಕೆ. ಹರಿಪ್ರಸಾದ್ ಹೇಳಿಕೆ ಬಗ್ಗೆ ರಾಜ್ಯಪಾಲರು ತನಿಖೆ ಆಗುತ್ತಿದೆಯೇ ಇಲ್ಲವೇ ಎಂದು ಪದೆಪದೇ ಕೇಳಿದ್ದಾರೆ. ರಾಜ್ಯಪಾಲರ ಮಾತಿಗೆ ಗೌರವ ಕೊಟ್ಟು ಗೃಹ ಇಲಾಖೆಯಿಂದ ಹರಿಪ್ರಸಾದ್ ವಿಚಾರಣೆಗೆ ಪೊಲೀಸರು ತೆರಳಿದ್ದರು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ರಾಜ್ಯದ ಕಾನೂನು ಸುವ್ಯವಸ್ಥೆಗೂ ರಾಜ್ಯಪಾಲರಿಗೂ ಏನು ಸಂಬಂಧ. ಹಿಂದಿನ ಸರ್ಕಾರ ಇದ್ದಾಗ ಎಂದೂ ಈ ರೀತಿ ಆಗಿಲ್ಲ. ಈ ಬಾರಿ ಏಕೆ ಆಗುತ್ತಿದೆ. ಈ ವಿಚಾರವಾಗಿ ರಾಜ್ಯಪಾಲರು ಏಕೆ ಅಷ್ಟೊಂದು ಆಸಕ್ತಿ ಹೊಂದಿದ್ದಾರೆ. ಕೇಂದ್ರ ಸರ್ಕಾರದಿಂದ ಅವರಿಗೆ ನಿರ್ದೇಶನ ಇತ್ತೇ’ ಎಂದೂ ಪ್ರಶ್ನಿಸಿದರು.

‘ಹರಿಪ್ರಸಾದ್ ಅವರಿಗೆ ಮುಜುಗರ ಉಂಟು ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ. ಬಿಜೆಪಿ ಆಡಳಿತ ಇಲ್ಲದ ರಾಜ್ಯಗಳಲ್ಲಿ ಅಲ್ಲಿನ ರಾಜ್ಯಪಾಲರ ಮೂಲಕ ಬಿಜೆಪಿಯವರು ಆಡಳಿತ ಮಾಡಲು ಹೊರಟಿದ್ದಾರೆ’ ಎಂದು ಆರೋಪಿಸಿದ ಪ್ರಿಯಾಂಕ್‌, ‘ನಾವು ಏನೇ ಇದ್ದರೂ ಕಾನೂನು ಚೌಕಟ್ಟಿನಲ್ಲಿ ಮಾಡುತ್ತೇವೆ’ ಎಂದರು.

ADVERTISEMENT

‘ಅನಂತ ಕುಮಾರ್ ಹೆಗಡೆ ಅಥವಾ ಕಲ್ಲಡ್ಕ ಪ್ರಭಾಕರ್ ಭಟ್ ಯಾರೇ ಇದ್ದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ಕಾನೂನು ಮೀರಲು ಯಾರನ್ನೂ ಬಿಡುವುದಿಲ್ಲ. ಇಲ್ಲಿ ಉತ್ತರ ಪ್ರದೇಶದ ಆಡಳಿತ ನಡೆಯುವುದಿಲ್ಲ. ಅವರೆಲ್ಲರೂ ಇಂದಲ್ಲ, ನಾಳೆ ಒಳಗಡೆ ಹೋಗುತ್ತಾರೆ. ಅದರಲ್ಲಿ ಅನುಮಾನಬೇಡ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.