ADVERTISEMENT

ಪೆನ್‌ಡ್ರೈವ್ ಸಂತ್ರಸ್ತೆಯರ ಸಂಕಟ | ಬೆನ್ನೇರಿದ ಭಯ: ದೂರಿನಿಂದ ದೂರ!

ಸಂಧ್ಯಾ ಹೆಗಡೆ
Published 20 ಮೇ 2024, 23:30 IST
Last Updated 20 ಮೇ 2024, 23:30 IST
   

ಹಾಸನ: ಜಿಲ್ಲೆಯಲ್ಲಿ ಅದರಲ್ಲೂ ವಿಶೇಷವಾಗಿ ಹೊಳೆನರಸೀಪುರದ ಸರ್ವಾಧಿಕಾರದ ಸಾಮ್ರಾಜ್ಯದಲ್ಲಿ ದುಡಿದು ತಿನ್ನುವವರ ಧ್ವನಿ ಅಡಗಿದೆ. ಹೊಟ್ಟೆಪಾಡಿಗಾಗಿ ಕೂಲಿ ಮಾಡುವವರು, ಮನೆಗೆಲಸದವರು, ರಸ್ತೆ ಬದಿ ವ್ಯಾಪಾರ ಮಾಡುವ ಅನೇಕ ಮಹಿಳೆಯರು, ಇನ್ನೂ ಅನೇಕರು ದೌರ್ಜನ್ಯದ
ಬಲಿಪಶುಗಳಾದರೂ, ಕರುಳ ಕುಡಿಗಾಗಿ ನೋವನ್ನು ಅದುಮಿಟ್ಟು ಒಡಲೊಳಗೆ ರೋದಿಸುತ್ತಿದ್ದಾರೆ.

ಪೆನ್‌ಡ್ರೈವ್ ಹಂಚಿಕೆ ಪ್ರಕರಣ ಬೆಳಕಿಗೆ ಬಂದ ಮೇಲೆ ಜಿಲ್ಲೆಯಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಅದೆಷ್ಟೋ ತಾಯಂದಿರಲ್ಲಿ ಇಷ್ಟುಕಾಲ ಸೆರಗೊಳಗೆ ಅವಿತಿಟ್ಟುಕೊಂಡಿದ್ದ ಕೆಂಡ ಸುಡಲಾರಂಭಿಸಿದೆ.

‘ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಸಂತ್ರಸ್ತೆಯರಲ್ಲಿ ಹಲವರ ಆಕ್ರೋಶ ಕಟ್ಟೆಯೊಡೆದಿದೆ. ದೂರು ನೀಡುವ ಇಚ್ಛೆಯೂ ಅವರಲ್ಲಿದೆ. ಆದರೆ, ತಮ್ಮ ಮಕ್ಕಳು, ಅವರ ಭವಿಷ್ಯ, ಸಾಮಾಜಿಕ ಅವಮಾನ ಎದುರಿಸಲು ಅಶಕ್ತರಾಗಿ ಅವರು ಸುಮ್ಮನಾಗಿದ್ದಾರೆ. ತಮ್ಮ ಮಗನ ವಯಸ್ಸಿನ ವ್ಯಕ್ತಿ ಬಲಾತ್ಕಾರದಿಂದ ದೌರ್ಜನ್ಯವೆಸಗಿರುವ ದುಃಸ್ವಪ್ನದಿಂದ ಅವರಿಗೆ ಹೊರಬರಲು ಆಗುತ್ತಿಲ್ಲ. ಆದರೆ, ಮಕ್ಕಳ ಒಳಿತನ್ನು ಯೋಚಿಸಿ ಅವರು ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತೆಯೊಬ್ಬರು.

ADVERTISEMENT
ಘಟನೆ–1
ದೌರ್ಜನ್ಯಕ್ಕೆ ಒಳಗಾದ ಮಹಿಳೆಗೆ 55ರ ಆಸುಪಾಸಿನ ವಯಸ್ಸು. ಮಗಳ ಮದುವೆಯಾಗಿದೆ. ಅವಳಿಗೊಂದು ಮಗುವಿದೆ. ಅಜ್ಜಿಯ ಸ್ಥಾನಕ್ಕೆ ಏರಿರುವ ಸಂತ್ರಸ್ತ ಮಹಿಳೆಗೆ ತನ್ನ ಬದುಕಿಗಿಂತ ಮಗಳ ಕುಟುಂಬದ ಬಗ್ಗೆ ಆತಂಕ ಕಾಡುತ್ತಿದೆ. ಒಂದು ದೂರು, ಪ್ರೀತಿಯಿಂದ ಇರುವ ಮಗಳು– ಅಳಿಯನ ನಡುವೆ ವಿರಸಕ್ಕೆ ಕಾರಣವಾಗಿ, ಅಳಿಯನ ಕುಟುಂಬದವರು ಮಗಳನ್ನು ದೂಷಿಸಬಹುದೆಂಬ ಅಂಜಿಕೆಯಲ್ಲಿ ಅವರು ದೂರು ನೀಡುವುದು ಬೇಡವೆಂಬ ನಿರ್ಧಾರಕ್ಕೆ ಬಂದಿದ್ದಾರೆ.
ಘಟನೆ–2
ಪತಿಯನ್ನು ಕಳೆದುಕೊಂಡಿರುವ ಮಹಿಳೆಗೆ ಹರೆಯದ ಮಗನಿದ್ದಾನೆ. ಪೆನ್‌ಡ್ರೈವ್ ಹಂಚಿಕೆಯಿಂದ ನೊಂದುಕೊಂಡಿರುವ ಅವರು ದೂರು ನೀಡಲು ಮುಂದಾಗಿದ್ದರು. ಆ ಕ್ಷಣಕ್ಕೆ ಅವರನ್ನು ಎಚ್ಚರಿಸಿದ್ದು ತಾಯ್ತನ. ಅಧಿಕೃತವಾಗಿ ದಾಖಲಾಗುವ ದೂರು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಅವುಗಳ ಪ್ರತಿಗಳ ಮೂಲಕ ಜಗಜ್ಜಾಹೀರಾಗುವ ವಿಳಾಸ, ವಿಚಾರಣೆ, ಕೋರ್ಟ್‌ ಅಲೆದಾಟ, ಎಲ್ಲಕ್ಕಿಂತ ಮುಖ್ಯವಾಗಿ ಕಾಮಕ್ಕೆ ಬಲಿಪಶು ಆದವಳು ಅಮ್ಮ ಎಂಬ ಮಗನ ಮನದ ಶಾಶ್ವತ ನೋಟ, ಇವನ್ನೆಲ್ಲ ಕಲ್ಪಿಸಿಕೊಂಡಿರುವ ಅವರು, ಅಂತಿಮವಾಗಿ ದೂರು ನೀಡಿ ಆತ್ಮಹತ್ಯೆಗೆ ಶರಣಾಗುವುದೆಂಬ ನಿರ್ಧಾರಕ್ಕೆ ಬಂದಿದ್ದರು. ಮಗ ಮತ್ತು ಸಾವು ಇವೆರಡು ಕಣ್ಮುಂದೆ ಬಂದಾಗ ಅವರನ್ನು ಅಮ್ಮನ ಅಂತಃಕರಣ ಎಚ್ಚರಿಸಿದೆ. ದೂರು ಕೊಡುವುದು ಬೇಡವೆಂಬ ನಿರ್ಣಯ ಮಾಡಿದ್ದಾರೆ.

ಇದು ಕೌಟುಂಬಿಕ ಕಗ್ಗಂಟಿನಲ್ಲಿ ಸಿಲುಕಿರುವ ಹೆಣ್ಣು ಜೀವಗಳ ಕಥೆಯಾದರೆ, ರಾಜಕೀಯ ವ್ಯೂಹದೊಳಗೆ ಸಿಲುಕಿದವರದ್ದು ಇನ್ನೊಂದು ರೀತಿಯ ಅಸಹಾಯಕತೆ. ಒಂದು ರಾಜಕೀಯ ಪಕ್ಷಕ್ಕೆ ಸೇರಿದ ಹಲವಾರು ಕಾರ್ಯಕರ್ತೆಯರ ಚಿತ್ರ, ವಿಡಿಯೊ ತುಣುಕುಗಳು ಊರ ತುಂಬೆಲ್ಲ ಹರಿದಾಡಿರುವ ಪೆನ್‌ಡ್ರೈವ್‌ನಲ್ಲಿವೆ. ಆದರೆ, ಪಕ್ಷದ ಬಲಾಢ್ಯರ ಆಮಿಷ, ಒತ್ತಡ, ದಬ್ಬಾಳಿಕೆ, ಕೌಟುಂಬಿಕ ಸಂಬಂಧಗಳು ಅವರು ದೂರು ನೀಡದಂತೆ ತಡೆಹಾಕಿವೆ. ಹೀಗಾಗಿ, ಅವರು ಮೌನಕ್ಕೆ ಶರಣಾಗಿದ್ದಾರೆ.

‘ವಿಕೃತಿಗೆ ಬಲಿಯಾದವರ ಬಗ್ಗೆ ಕರುಣೆ ತೋರುವ ಬದಲಾಗಿ ಕುಹಕದ, ಅನುಮಾನದ ಮಾತುಗಳನ್ನಾಡುವವರೇ ಹೆಚ್ಚಾಗಿದ್ದಾರೆ. ಜಾತಿ ಪ್ರಾಬಲ್ಯ ಮೆರೆಯುತ್ತಿದೆ. ಇದರಿಂದಾಗಿ, ಮಹಿಳೆಯರು ಮುಂದೆ ಬಂದು ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಲೋಕಸಭೆ ಚುನಾವಣೆಗೆ ಮೂರು ದಿನ ಮೊದಲು ಹರಿಬಿಟ್ಟ ಅಶ್ಲೀಲ ವಿಡಿಯೊದಲ್ಲಿ ಒಂದು ಪಕ್ಷಕ್ಕೆ ಸೇರಿದ ಸ್ತ್ರೀಯರೇ ಬಲಿಪಶುಗಳಾದ್ದರು. ರಾಜಕೀಯ ದಾಳವಾಗಿ ಇದನ್ನು ಬಳಸಿಕೊಳ್ಳಲಾಯಿತೇ ವಿನಾ ಸ್ತ್ರೀಯ ಮಾನ ಹರಾಜಾಗುವ ಬಗ್ಗೆ ಅರೆಕ್ಷಣವೂ ಯೋಚಿಸದಿರುವುದು ಸಮಾಜದ ನೈತಿಕತೆಯ ಕುಸಿತಕ್ಕೆ ಸಾಕ್ಷಿಯಾಗಿದೆ’ ಎಂದು ಬೇಸರಿಸಿದರು ಹೋರಾಟಗಾರ ಧರ್ಮೇಶ್.

‘ಸೂಕ್ಷ್ಮ ಪ್ರಜ್ಞೆ: ಸಮಾಜದ ಹೊಣೆ’
‘ಪುರುಷ ಪ್ರಧಾನ ಸಮಾಜದಲ್ಲಿ ಅಪರಾಧಿ ಯಾರೆಂದು ಗೊತ್ತಿದ್ದರೂ ವಿಕೃತಿಗೆ ಬಲಿಪಶುಗಳಾದ ಮಹಿಳೆಯರನ್ನು ತಪ್ಪಿತಸ್ಥರನ್ನಾಗಿ ನೋಡಲಾಗುತ್ತಿದೆ. ಹೆಣ್ಣು ಎಷ್ಟೆಲ್ಲ ಸಂಕೋಲೆಗಳಲ್ಲಿ ಸಿಲುಕಿ ನರಳುತ್ತಾಳೆ. ಕುಟುಂಬ, ಸಂಬಂಧಗಳ ಸೂಕ್ಷ್ಮ ಎಳೆ, ರಾಜಕೀಯ, ಸಾಮಾಜಿಕ ಸಂಗತಿಗಳು ಅವಳನ್ನು ಗಾಸಿಗೊಳಿಸುತ್ತಿವೆ. ದಿನಕ್ಕೊಂದು ಅಪಮಾನ ಆಕೆಯನ್ನು ಮೌನವಾಗಿಸಿದೆ. ಸಂತ್ರಸ್ತ ಮಹಿಳೆಯರನ್ನು ಯಾವ ಕಾರ್ಯಕ್ರಮಗಳಿಗೂ ಕರೆಯಬಾರದೆಂಬ ಅಘೋಷಿತ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಯಾರ ತಪ್ಪಿಗೆ ಯಾರಿಗೆ ಶಿಕ್ಷೆ? ಅಪರಾಧಿಗೆ ಕೊಡಬೇಕಾದ ಶಿಕ್ಷೆಯನ್ನು ಸಂತ್ರಸ್ತರಿಗೆ ನೀಡುವುದೇ ಅಪರಾಧ. ಕೆಲವು ರಾಜಕೀಯ ನಾಯಕರೇ ಸಂತ್ರಸ್ತ ಮಹಿಳೆಯರ ಕುರಿತು ವಿಧ ವಿಧದ ದೋಷಾರೋಪಣೆ ಮಾಡುತ್ತ, ಅವರು ಪ್ರಕರಣ ದಾಖಲಿಸದಂತೆ ತಡೆಯುತ್ತಿರುವುದೂ ಅಕ್ಷಮ್ಯ. ಈ ಬಗ್ಗೆಯೂ ಕಾನೂನು ಕ್ರಮ ಜರುಗಿಸಬೇಕು’ ಎನ್ನುತ್ತಾರೆ ಹೋರಾಟಗಾರ್ತಿ ರೂಪ ಹಾಸನ. ಸಂತ್ರಸ್ತ ಮಹಿಳೆ ದಿಟ್ಟತನದಿಂದ ಮುಂದೆ ಬಂದು ದೂರು ನೀಡುವ ವಾತಾವರಣ ಸೃಷ್ಟಿಸಿ, ನಿಜವಾದ ಅಪರಾಧಿಗೆ ಶಿಕ್ಷೆ ಕೊಡಿಸಬೇಕಾಗಿರುವುದು ಸಮಾಜದ ಹೊಣೆ ಎಂಬ ಸೂಕ್ಷ್ಮ ಪ್ರಜ್ಞೆ ಮೂಡಿಸಬೇಕಾಗಿದೆ ಎಂಬುದು ಅವರ ಆಗ್ರಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.