ಅಲ್ಕಾ ಲಾಂಬಾ
ಬೆಂಗಳೂರು: ‘ಸಂಸದ ಪ್ರಜ್ವಲ್ ರೇವಣ್ಣನಿಂದ ಶೋಷಣೆಗೆ ಒಳಗಾದ ಹೆಣ್ಣುಮಕ್ಕಳು ಮುಂದೆ ಬಂದು ಆರೋಪಿ ತಪ್ಪಿಸಿಕೊಳ್ಳದಂತೆ ದೂರು ನೀಡಬೇಕು. ಈ ಹೆಣ್ಣು ಮಕ್ಕಳ ಗುರುತನ್ನು ಎಸ್‌ಐಟಿ ಗುಪ್ತವಾಗಿ ಇರಿಸಬೇಕು’ ಎಂದು ಎಐಸಿಸಿ ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷೆ ಅಲ್ಕಾ ಲಂಬಾ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪೊಲೀಸ್ ಠಾಣೆಗೆ ಬಂದು ದೂರು ನೀಡಲು ಹೆದರಿಕೆಯಾದರೆ ಆನ್‌ಲೈನ್ ಮೂಲಕ ದೂರು ದಾಖಲಿಸಿ’ ಎಂದು ಸಂತ್ರಸ್ತೆಯರಿಗೆ ಅವರು ಸಲಹೆ ನೀಡಿದರು.
‘ಮಹಿಳೆಯರ ಮೇಲೆ ದೌರ್ಜನ್ಯ ಎಸಗಿರುವ ಪ್ರಜ್ವಲ್ ರೇವಣ್ಣ, ಬಿಜೆಪಿಯ ಕುಲ್‌ದೀಪ್ ಸಿಂಗ್, ಉತ್ತರ ಪ್ರದೇಶದ ರಾಮ್ ದುಲ್ಹಾರೆ, ಬ್ರಿಜ್ ಭೂಷಣ್ ಸಿಂಗ್, ಹರಿಯಾಣದ ಸಚಿವ ಸಂದೀಪ್ ಸಿಂಗ್ ಮುಂತಾದವರೇ ನಿಜವಾದ ಮೋದಿ ಪರಿವಾರದವರು. ತಮ್ಮ ಪ್ರತಿ ಭಾಷಣದಲ್ಲಿ ಕುಟುಂಬ ರಾಜಕಾರಣ ಹಾಗೂ ಬೇಟಿ ಬಚಾವೋ, ಬೇಟಿ ಪಡಾವೋ ಎಂದು ಹೇಳುವ ಪ್ರಧಾನಿ ಮಾತಿಗೆ ಏನಾದರೂ ಅರ್ಥವಿದೆಯೇ’ ಎಂದೂ ಪ್ರಶ್ನಿಸಿದರು.
‘ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಅನೇಕ ಜನ ಹಣಕಾಸಿನ ವಿಚಾರದಲ್ಲಿ ದೇಶಕ್ಕೆ ಮೋಸ ಮಾಡಿ ಹೋಗಿದ್ದಾರೆ. ಪ್ರಜ್ವಲ್ ರೇವಣ್ಣ ಅದೇ ಹಾದಿ ತುಳಿದಿದ್ದಾರೆ. ಇಷ್ಟೊಂದು ಘೋರ ಘಟನೆ ನಡೆದಿದ್ದರೂ ಬಿಜೆಪಿಯ ಒಬ್ಬನೇ ಒಬ್ಬ ನಾಯಕನೂ ಬಾಯಿ ಬಿಟ್ಟಿಲ್ಲ’ ಎಂದು ಟೀಕಿಸಿದರು.
‘ಅಧಿಕಾರದ ಮದದಿಂದ ಈ ಕೃತ್ಯಗಳು ನಡೆದಿವೆ. ಅಧಿಕಾರವನ್ನು ಬಳಸಿಕೊಂಡು ಬಡ, ಅಮಾಯಕ ಹೆಣ್ಣು ಮಕ್ಕಳ ಮಾನಹಾನಿಯಾಗಿದೆ. ಪ್ರಧಾನಿಯೇ ಜೊತೆಗಿರುವಾಗ ಆತ ಏಕೆ ಭಯಪಡಬೇಕು. ಅದಕ್ಕೆ ಸಾವಿರಾರು ವಿಡಿಯೊಗಳನ್ನು ಮಾಡಿದ್ದಾನೆ. ಕಾನೂನಿನ ಭಯವಿಲ್ಲದೆ ಕೃತ್ಯ ಎಸಗಿದ್ದಾನೆ’ ಎಂದರು.
‘ಪ್ರಜ್ವಲ್ ರೇವಣ್ಣನಿಂದ ಲೈಂಗಿಕವಾಗಿ ಶೋಷಣೆಗೆ ಒಳಗಾದ ನಾಲ್ಕಕ್ಕೂ ಹೆಚ್ಚು ಸಂತ್ರಸ್ತೆಯರು ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದಾರೆ’ ಎಂದು ಕಾಂಗ್ರೆಸ್ ನಾಯಕಿ ಸೌಮ್ಯಾ ರೆಡ್ಡಿ ಆತಂಕ ವ್ಯಕ್ತಪಡಿಸಿದರು.
‘ಅವರೆಲ್ಲಾ ಕಾರ್ಯಕರ್ತರು ಕೆಲಸ ಕೇಳಿಕೊಂಡು ಹೋದವರು ಹಿರಿಯ ನಾಗರಿಕರು ಸೇರಿದಂತೆ ಎಲ್ಲ ವರ್ಗದ ಮಹಿಳೆಯರನ್ನು ಪ್ರಜ್ವಲ್ ರೇವಣ್ಣ ಶೋಷಣೆ ಮಾಡಿದ್ದಾನೆ. ಈ ವಿಷಯ ಗೊತ್ತಿದ್ದೂ ಮೈತ್ರಿಕೂಟದ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣನಿಗೆ ಬಿಜೆಪಿ ಟಿಕೆಟ್ ನೀಡಿದ್ದು ಮಹಿಳೆಯರಿಗೆ ಮಾಡಿದ ಅವಮಾನ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.