
ಡಿ.ಕೆ.ಶಿವಕುಮಾರ್
ಬೆಳಗಾವಿ: ‘ಬಿಜೆಪಿಯೇ ದ್ವೇಷಭಾಷಣದ ಪಿತಾಮಹ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಇಲ್ಲಿನ ಸರ್ಕಿಟ್ ಹೌಸ್ ಬಳಿ ಗುರುವಾರ ಬೆಳಿಗ್ಗೆ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬಿಜೆಪಿಯವರು ಮತ-ಮತಗಳ ನಡುವೆ, ಜಾತಿ-ಜಾತಿಗಳ ನಡುವೆ, ಧರ್ಮ-ಧರ್ಮಗಳ ನಡುವೆ ದ್ವೇಷ ತರುತ್ತಾರೆ. ವೈಯಕ್ತಿಕ ದಾಳಿ ನಡೆಸುತ್ತಾರೆ. ದ್ವೇಷಭಾಷಣ ನಿಷೇಧ ಮಾಡಿದರೆ, ಬಿಜೆಪಿಯವರಿಗೇ ತೊಂದರೆ ಆಗುತ್ತದೆ ಅಲ್ಲವೆ. ಅದಕ್ಕಾಗಿಯೇ ಆ ಮಸೂದೆಯನ್ನು ವಿರೋಧಿಸುತ್ತಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಇವರು ದ್ವೇಷ ಭಾಷಣ ಮಾಡದೇ ಇದ್ದರೆ, ಸಮಸ್ಯೆಯೇ ಇರುವುದಿಲ್ಲವಲ್ಲ. ಅವರಿಗೆ ಸಂವಿಧಾನದ ಬಗ್ಗೆ ಗೌರವ ಇದ್ದರೆ, ಅದರ ಅನುಸಾರ ನಡೆದುಕೊಳ್ಳಲಿ. ಸಂವಿಧಾನದ ರಕ್ಷಣೆಗಾಗಿಯೇ ನಾವು ಈ ಮಸೂದೆ ತರುತ್ತಿದ್ದೇವೆ’ ಎಂದರು.
ಸತ್ಯ ಹೇಳಿದರೆ ಕೆಲವರಿಗೆ ದ್ವೇಷದಂತೆ ಕಾಣುತ್ತದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಹೀಗಿದ್ದಲ್ಲಿ ದ್ವೇಷ ಭಾಷಣ ಎಂಬುದನ್ನು ಹೇಗೆ ವ್ಯಾಖ್ಯಾನ ಮಾಡುತ್ತೀರಿ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ‘ಅದನ್ನು ಸದನದಲ್ಲಿ ಹೇಳುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.